ಅಂತರಾಷ್ಟ್ರೀಯ

ಒತ್ತಡ ಬಂದಾಗ ಹೀಗೆ ಮಾಡಿ!

Pinterest LinkedIn Tumblr

tension* ಲಿಯೋ ಬಬೌತ ಇಂದು ನನ್ನ ಮನಸ್ಸಿನಲ್ಲಿ ಹಲವಾರು ವಿಷಯಗಳು(ಬಾಕಿ ಉಳಿದಿರುವ ಕೆಲಸಗಳು) ಒತ್ತರಿಸಿಕೊಂಡು ಕಾಟ ಕೊಡುತ್ತಿವೆ. ಇವೆಲ್ಲದರಿಂದಾಗಿ ಯಾವ ಕೆಲಸವನ್ನೂ ಮಾಡದಂಥ ನಿಷ್ಕ್ರಿಯ ಭಾವವೊಂದು ಮನಸ್ಸನ್ನು ಆಕ್ರಮಿಸಿದೆ. ಈ ಅಸಹಾಯಕ ಸ್ಥಿತಿಯಿಂದಾಗಿ ಒತ್ತಡವೂ ಹೆಚ್ಚಾಗುತ್ತಿದೆ. ಓಹ್‌ ಚಾನ್ಸ್‌ ಸಿಕ್ಕಿತು! ವಾಸ್ತವದಲ್ಲಿ ಬದುಕುವುದಕ್ಕೆ, ಅರಿವನ್ನು ಬೆಳೆಸಿಕೊಳ್ಳುವುದಕ್ಕೆ ಇದು ಸುಸಂದರ್ಭ! ನಾವೆಲ್ಲರೂ ನಿತ್ಯವೂ ಒಂದಲ್ಲ ಒಂದು ಕಾರಣದಿಂದ ಒತ್ತಡ ಎದುರಿಸುತ್ತೇವೆ, ಈ ಒತ್ತಡದಿಂದಾಗಿ ನಮ್ಮ ಚಿತ್ತಸ್ಥೈರ್ಯ ಚಿತ್ತೆದ್ದು ಹೋಗುತ್ತದೆ. ಆಗ ನಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ. ಒಂದೋ ನಮ್ಮ ಮನಸ್ಸನ್ನು ಕಲ್ಲವಿಲ್ಲಗೊಳಿಸುತ್ತಿರುವ ಆ ಕರಾಳ ಭಾವನೆಗಳ ಬಾವಿಯಿಂದ ಹೊರಗೆದ್ದು ಬರುವುದು, ಇಲ್ಲವೇ ಅದರಲ್ಲೇ ಒದ್ದಾಡುತ್ತಾ ಕೊನೆಗೆ ಬಾವಿಯಲ್ಲಿ ಮುಳುಗುವುದು. ದುರಂತವೆಂದರೆ ಬಹುತೇಕ ಜನರು ಮೊದಲನೆಯ ಆಯ್ಕೆಯನ್ನು ಆಯ್ದುಕೊಳ್ಳುವುದೇ ಇಲ್ಲ. ಅವರಿಗೆ ಮುಳುಗಿ ಮುಳುಗಿ ಎಷ್ಟು ಅಭ್ಯಾಸವಾಗಿಬಿಟ್ಟಿದೆಯೆಂದರೆ, ಒತ್ತಡ ಎದುರಾದಾಕ್ಷ ಣ ಅದರಿಂದ ಎದ್ದು ಹೊರನಡೆಯದೇ ಅದಕ್ಕೆ ಸರಂಡರ್‌ ಆಗಿಬಿಡುತ್ತಾರೆ. ಹಾಗೆಂದಾಕ್ಷಣ ಒತ್ತಡದಿಂದ ಹೊರಬರುವುದು ಬಹಳ ಸುಲಭ ಎಂದೇನೂ ನಾನು ಹೇಳುತ್ತಿಲ್ಲ. ಆದರೆ ಅದು ಅಸಾಧ್ಯವಂತೂ ಅಲ್ಲ. ಯಾವುದೇ ಸಂಗತಿಯಿರಲಿ ಅದನ್ನು ನಾವು ರಿಪೀಟ್‌ ಮಾಡುತ್ತಾ ಹೋದರೆ ಅದು ಅಭ್ಯಾಸವಾಗಿಬಿಡುತ್ತದೆ ಈ ಮಾತು ಒತ್ತಡದಿಂದ ಹೊರಬರುವುದಕ್ಕೆ ಮತ್ತು ಒತ್ತಡದಲ್ಲಿ ಮುಳುಗುವುದಕ್ಕೆ ಕೂಡ ಅನ್ವಯಿಸುತ್ತದೆ. ನಾನು ಇಂಥ ಸನ್ನಿವೇಶಗಳಲ್ಲಿ ಬಚಾವಾಗಲು ಕೆಲವೊಂದು ಟ್ರಿಕ್ಸ್‌ಗಳನ್ನು ರೂಪಿಸಿಕೊಂಡಿದ್ದೇನೆ. ಈ ತಂತ್ರಗಳು ಅತಿ ಸರಳವಾಗಿವೆಯಾದರೂ, ಬಹಳ ಪ್ರಯೋಜನಕಾರಿ ಎನ್ನುವುದು ನನ್ನ ನಂಬಿಕೆ. ಒತ್ತಡ ಎದಾರಾದಾಗ ಸಾಧ್ಯವಾದರೆ ನೀವೂ ಹೀಗೇ ಮಾಡಿ. * ಒತ್ತಡ ಹೆಚ್ಚಾದಾಗ ನನ್ನೊಡಲಲ್ಲಿ ಎರಡು ಸಂಗತಿಗಳು ಘಟಿಸುತ್ತವೆ. ಮೊದಲನೆಯದಾಗಿ ಸ್ಟ್ರೆಸ್‌ ಹಾರ್ಮೋನುಗಳು ನನ್ನ ದೇಹದಾದ್ಯಂತ ಹರಿದಾಡಲು ಆರಂಭಿಸುತ್ತವೆ. ಇದರಿಂದ ಒಂದೋ ನಾನು ತುಂಬಾ ಸಕ್ರಿಯನಾಗಿ ಒಂದು ಕೆಲಸದಿಂದ ಇನ್ನೊಂದಕ್ಕೆ ಜಿಗಿಯುತ್ತಾ ಹೋಗುತ್ತೇನೆ. ಇಲ್ಲವೇ ನಿಷ್ಕ್ರಿಯನಾಗಿ ತಲೆ ಹಿಡಿದುಕೊಂಡು ಅಯ್ಯೋ ನನ್ನ ಹಣೆಬರಹವೇ ಎಂದು ಗೋಳಾಡುತ್ತೇನೆ(ಎರಡನೆಯ ಕೆಲಸ ಮಾಡುವುದನ್ನು ಎಂದೋ ಬಿಟ್ಟಿದ್ದೇನೆ). ಹಾಂ, ನಾನು ಏನು ಹೇಳಲು ಹೊರಟಿದ್ದೇನೆ ಎಂದರೆ, ಮನಸ್ಸು ಖಿನ್ನವಾದಾಗ, ಅದಕ್ಕೆ ಕಾರಣಗಳೇನು, ನಮ್ಮ ದೇಹದಲ್ಲಿ ಇದರಿಂದ ಏನೇನು ಬದಲಾವಣೆಗಳಾಗುತ್ತೇವೆ ಎಂಬ ಅರಿವನ್ನು ಬೆಳೆಸಿಕೊಳ್ಳಬೇಕು. * ಈ ಪರಿಸ್ಥಿತಿಯಲ್ಲಿದ್ದಾಗ ಎದ್ದು ಓಡಾಡಿ ಕೈಗೆ ಸಿಕ್ಕ ಕೆಲಸಗಳನ್ನೆಲ್ಲ ಮಾಡುವ ಬದಲು ಒಂದು ನಿಮಿಷ ಸುಮ್ಮನೇ ಕುಳಿತು ನನ್ನ ಗಮನವನ್ನು ಮನಸ್ಸಿನೆಡೆಗೆ ಕೇಂದ್ರೀಕರಿಸುತ್ತೇನೆ. ಒತ್ತಡಕ್ಕೂ ಒಂದು ಸ್ಟ್ರಕ್ಚರ್‌ ಇದೆ ಎಂದರೆ ನೀವು ನಂಬಲಿಕ್ಕಿಲ್ಲ. ಆದರೆ ನಾನು ಅದನ್ನು ಮನಗಂಡಿದ್ದೇನೆ. ಅದು ನನ್ನ ದೇಹದಲ್ಲಿ ವಿದ್ಯುತ್ತಿನಂತೆ ಸಂಚರಿಸುತ್ತಾ ದೇಹದ ಎಲ್ಲಾ ಅಂಗಾಂಗಗಳ ಮೇಲೆಯೂ ಪ್ರಭಾವ ಬೀರುತ್ತಿರುತ್ತದೆ(ನಿಷ್ಕ್ರಿಯತೆಗೆ ಇದೇ ಕಾರಣವಿರಬಹುದು). ನೀವು ಮಾಡಬೇಕಾಗಿರುವುದು ಇಷ್ಟೆ. ಹೇಗೆ ಒತ್ತಡ ಸೃಷ್ಟಿಸುವ ಹಾರ್ಮೋನುಗಳು ನಿಮ್ಮ ದೇಹದ ಮೇಲೆ ಪ್ರಭಾವ ಬೀರುತ್ತಿವೆ, ಯಾವ ರೀತಿಯ ಭಾವನೆಗಳನ್ನು ಹುಟ್ಟುಹಾಕುತ್ತಿವೆ, ಆ ಭಾವನೆಗಳು ಯಾವ ರೀತಿಯಲ್ಲಿ ವರ್ತಿಸಲು ನಿಮ್ಮನ್ನು ಪ್ರಚೋದಿಸುತ್ತಿವೆ ಎನ್ನುವುದನ್ನು ಸುಮ್ಮನೇ ಕುಳಿತು ಅರ್ಥಮಾಡಿಕೊಳ್ಳಿ. * ಒತ್ತಡ ಹೆಚ್ಚಾದಾಗ ಚಿತ್ತಸ್ಥೈರ್ಯ ಕೆಡುವುದು ಸಹಜ. ಇದನ್ನು ನಿಯಂತ್ರಿಸುವುದು ಕಷ್ಟವಾದ್ದರಿಂದ, ನಮ್ಮಲ್ಲಿ ದುರ್ಬಲ ಭಾವನೆ ಹುಟ್ಟುತ್ತದೆ. ವಿಶೇಷವೆಂದರೆ, ಈ ದುರ್ಬಲ ಭಾವನೆಯೇ ನಮ್ಮಲ್ಲಿ ಅಸಹನೆ, ಸಿಟ್ಟು ಅಥವಾ ಕೀಳರಿಮೆಯನ್ನು ಹುಟ್ಟುಹಾಕುತ್ತದೆ. ಈ ಎಲ್ಲ ಭಾವನೆಗಳು ವರ್ತನೆಗಳಾಗಿ ರೂಪ ಪಡೆದುಬಿಟ್ಟರೆ ಏನಾಗಬಹುದು ಎನ್ನುವುದು ನಿಮಗೂ ಗೊತ್ತಿರಬಹುದು. ಒಂದೋ ಜನರು ಎದುರಿನವರ ಮೇಲೆ ಅನವಶ್ಯಕವಾಗಿ ಕೂಗಾಡಬಹುದು, ಅಥವಾ ಕೆಲವೊಂದು ಸಂದರ್ಭಗಳಲ್ಲಿ ಜೀವನವನ್ನು ಕೊನೆಗೊಳಿಸುವ ಹಂತಕ್ಕೂ ಹೋಗಿಬಿಡಬಹುದು. ಇಂಥ ಸಂದರ್ಭದಲ್ಲಿ ನಾವು ಮುಖ್ಯವಾಗಿ ಮಾಡಬೇಕಿರುವುದು ಒತ್ತಡವನ್ನು ನಿವಾರಿಸುವಂಥ ಸಂಗತಿಗಳನ್ನು ನೆನಪಿಸಿಕೊಳ್ಳುವುದು. ಉದಾಹರಣೆಗೆ, ಸಿಟ್ಟು ಬಂದರೆ(ನಾನು ಸಿಟ್ಟುಮಾಡಿಕೊಳ್ಳುವ ವ್ಯಕ್ತಿಯಲ್ಲ), ಕೀಳರಿಮೆ ಎದುರಾದರೆ(ನಾನೇನೂ ಅಷ್ಟು ಕನಿಷ್ಠ ವ್ಯಕ್ತಿತ್ವದ ಮನುಷ್ಯನಲ್ಲ) ಎಂದು ಮನಸ್ಸಿಗೆ ಆಶ್ವಾಸನೆ ಕೊಟ್ಟುಕೊಳ್ಳಿ. * ನಾವು ಮಾಡುತ್ತಿರುವ ಅತಿದೊಡ್ಡ ತಪ್ಪೆಂದರೆ, ಲೋಕವನ್ನೆಲ್ಲ ಪ್ರೀತಿಸಲು ಹೊರಡುವ ನಾವು ಸ್ವತಃ ನಮ್ಮನ್ನು ನಾವೇ ಪ್ರೀತಿಸಲು ನಿರಾಕರಿಸುತ್ತಿರುವುದು. ಜಗತ್ತು ಸರಿಯಿದೆ ನಾನು ಸರಿಯಿಲ್ಲ ಅಥವಾ ಜಗತ್ತೂ ಸರಿಯಾಗಿಲ್ಲ ನಾನೂ ಸರಿಯಾಗಿಲ್ಲ ಎನ್ನುವ ಭಾವನೆ ಒತ್ತಡದಲ್ಲಿರುವಾಗ ಎದುರಾಗುತ್ತದೆ. ಹೀಗಾದಾಗಲೆಲ್ಲ ಒಂದು ಸಂದೇಶವನ್ನು ಪದೇ ಪದೆ ನಿಮ್ಮ ಮನಸ್ಸಿಗೆ ಕಳುಹಿಸಿ- ನಾನೂ ಸರಿಯಾಗಿದ್ದೇನೆ, ಈ ಜಗತ್ತೂ ಸರಿಯಾಗಿದೆ. ನಾನು ಜಗತ್ತನ್ನು ಪ್ರೀತಿಸುವಷ್ಟೇ ನನ್ನನ್ನೂ ಪ್ರೀತಿಸುತ್ತೇನೆ. ಈ ಸಂದೇಶ ಎಷ್ಟು ಪ್ರಭಾವಯುತವಾದದ್ದು ಎನ್ನುವುದನ್ನು ಒಮ್ಮೆ ನೀವೇ ಪರೀಕ್ಷಿಸಿ ನೋಡಿ. ಇದು ತಾಯೊಬ್ಬಳು ಭಯಪಡುತ್ತಿರುವ ಅಥವಾ ದುಃಖಕ್ಕೀಡಾಗಿರುವ ತನ್ನ ಮಗುವಿಗೆ ಸಾಂತ್ವನ ನೀಡುವುದಕ್ಕೆ ಸಮನಾಗಿರುತ್ತದೆ! ಒಂದು ವಿಷಯ ಅರ್ಥಮಾಡಿಕೊಳ್ಳಿ. ಪ್ರಪಂಚದ ಮಹೋನ್ನತ ಸಾಧಕರೂ ಕೂಡ ತಮ್ಮ ಸ್ಥಾನಕ್ಕೆ ಒಂದೊಂದೇ ಮೆಟ್ಟಿಲನ್ನು ಹತ್ತುತ್ತ ಹೋದವರು. ಅವರೂ ಒತ್ತಡಕ್ಕೆ ಸಿಲುಕಿದವರು, ಅವರೂ ಕೀಳರಿಮೆ ಅನುಭವಿಸಿದವರು, ಅವರೂ ‘ನಾನೊಬ್ಬ ನಿಷ್ೊ್ರಯೋಜಕ’ ಎಂದು ಯಾವುದೋ ಸಮಯದಲ್ಲಿ ಗೊಣಗಿದವರು. * ಒಂದು ಬಾರಿಗೆ ಒಂದು ಕೆಲಸ ಎನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಸಾಮಾನ್ಯವಾಗಿ ಒತ್ತಡ ಎದುರಾಗುವುದು ಹಲವಾರು ಸಂಗತಿಗಳು ಒಂದುಗೂಡಿ ಪೀಡಿಸಲು ಆರಂಭಿಸಿದಾಗಲೇ. ಆದರೆ ಒಬ್ಬ ಮನುಷ್ಯನಿಗೆ ಒಂದೇ ಬಾರಿ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲವಲ್ಲ? ಈ ಸರಳ ಸತ್ಯವನ್ನು ಅರ್ಥಮಾಡಿಕೊಳ್ಳಿ. ಬಾಕಿ ಉಳಿದಿರುವ ಕೆಲಸಗಳನ್ನು ಒಂದೊಂದಾಗೇ ಮುಗಿಸುತ್ತಾ ಬನ್ನಿ. ಡೀಕ್ಲಟರಿಂಗ್‌ ಈಸ್‌ ಇಂಪಾರ್ಟೆಂಟ್‌ ಸ್ವಾಮಿ! ಅಂದುಕೊಂಡ ಕೆಲಸ ಯಾವುದೋ ಕಾರಣಗಳಿಂದ ಇವತ್ತು ಮುಗಿಯಲಿಲ್ಲ ಎಂದಾದರೆ, ಅದನ್ನು ನಾಳೆ ಮುಗಿಸುತ್ತೇನೆ ಎನ್ನುವ ಆತ್ಮವಿಶ್ವಾಸ ನಿಮ್ಮಲ್ಲಿರಬೇಕು. ಅಯ್ಯೋ ನಾಳೆಯೂ ಮುಗಿಯದಿದ್ದರೆ ಹೇಗೆ ಎನ್ನುವ ಭಯವಲ್ಲ. * ರಿಲ್ಯಾಕ್ಸ್‌ ಆಗಿ. ಒಂದು ಕೆಲಸವನ್ನು ಕೈಗೆತ್ತಿಕೊಂಡಾಗ, ಬಾಕಿ ಉಳಿದ ಹಲವಾರು ಕೆಲಸಗಳು ಪೀಡಿಸಲು ನಿಮ್ಮ ಮುಂದೆ ಬರುತ್ತವೆ. ಅವುಗಳ ಮಾತು ಕೇಳದಿರಿ. ನಿಮ್ಮ ದೇಹದಲ್ಲಿ, ನಿಮ್ಮ ಮನಸ್ಸಿನಲ್ಲಿ ಈ ಪೀಡಕರಿಂದ ಯಾವ ರೀತಿಯಲ್ಲಿ ತೊಂದರೆಯಾಗುತ್ತಿದೆಯೋ ಗಮನಿಸಿ ಆ ಭಾಗಗಳನ್ನು ರಿಲ್ಯಾಕ್ಸ್‌ ಮಾಡಲು ಪ್ರಯತ್ನಿಸಿ. ಎಷ್ಟೇ ಗದ್ದಲವಿದ್ದರೂ ನಿಮ್ಮ ಮುಂದಿರುವ ಈ ಅಮೂಲ್ಯ ಕ್ಷ ಣವಿದೆಯಲ್ಲ ಅದನ್ನು ಗೌರವಿಸಿ, ಅದನ್ನು ಪ್ರೀತಿಸಿ, ಅದನ್ನು ಆಲಂಗಿಸಿ. * ನಮಗೆ ಒತ್ತಡ ಎದುರಾಗಲು ಹಲವಾರು ಕಾರಣಗಳಿರುತ್ತವೆ. ಆದರೆ ಎಲ್ಲಾ ರೀತಿಯ ಒತ್ತಡವನ್ನೂ ಮೇಲ್ಕಂಡ ತಂತ್ರಗಳ ಮೂಲಕ ಬಗೆಹರಿಸಬಹುದು ಎನ್ನುವುದು ನನ್ನ ನಂಬಿಕೆ. ಈ ಕ್ಷ ಣವನ್ನು ಆಲಂಗಿಸಿಕೊಳ್ಳಿ ಎಂದು ನಾನು ಹೇಳುತ್ತಿರುವುದಕ್ಕೆ ಕಾರಣವೂ ಇದೆ. ನಾಳೆ ಸಂಜೆ ಕಚೇರಿಯಲ್ಲಿ ತುಂಬಾ ಕೆಲಸವಿದೆ ಎಂದು ವ್ಯಕ್ತಿಯೊಬ್ಬ ಹಿಂದಿನ ದಿನದಿಂದಲೇ ಗೋಳಾಡುತ್ತಾ ಕುಳಿತುಕೊಳ್ಳುತ್ತಾನೆ. ಕೆಲಸವಾಗಬೇಕಿರುವುದು ನಾಳೆ ಸಂಜೆಯಲ್ಲವೇ ಸ್ವಾಮಿ? ಈಗಿಂದಲೇ ಏಕೆ ಒತ್ತಡ? ಪದೇ ಪದೆ ಅದೇ ತಪ್ಪನ್ನು ಆತ ಪುನರಾವರ್ತಿಸುತ್ತಿದ್ದಾನಷ್ಟೆ! ಅಂದರೆ, ವರ್ತಮಾನವನ್ನು, ತನ್ನ ಎದುರಿರುವ ಈ ಕ್ಷ ಣವನ್ನು ಆತ ಒಪ್ಪಿಕೊಳ್ಳದೇ, ನಾಳೆ ಸಂಜೆಯಲ್ಲೇ ಬದುಕುತ್ತಿದ್ದಾನೆ ಎಂದರ್ಥ. ಈ ಲೇಖನ ಬರೆಯುವ ಮುನ್ನ ನಾಳೆ ಮಾಡಬೇಕಿರುವ ಹಲವಾರು ಕೆಲಸಗಳು ನನ್ನನ್ನು ಕಾಡುತ್ತಿದ್ದವು. ಆದರೆ ವಾಸ್ತವವನ್ನು ತಬ್ಬಿಕೊಂಡು ನಾನು ಇದನ್ನು ಬರೆಯಲು ಆರಂಭಿಸಿದೆ. ಈ ಲೇಖನವನ್ನು ಬರೆದು ಮುಗಿಸುವುದಷ್ಟೇ ನನ್ನೆದುರಿನ ಕೆಲಸ. ಅನ್ಯ ಕೆಲಸಗಳನ್ನು ಆಮೇಲೆ ಕೈಹಿಡಿಯುತ್ತೇನೆ ಬಿಡಿ!

Comments are closed.