ಕರ್ನಾಟಕ

ಮನುಷ್ಯ ತನ್ನ ಆರೋಗ್ಯವೃದ್ಧಿಗೆ ಅರಿಶಿಣ, ತುಳಸಿ, ಜೀರಿಗೆ ಮಿಶ್ರಿತ ನೀರು ಕುಡಿದರೆ ಉತ್ತಮ

Pinterest LinkedIn Tumblr

tulasi_cumini_turmaric

ಮಂಗಳೂರು: ತುಳಸಿ ಹಾಗೂ ಅರಿಶಿಣದ ಮಹತ್ವ ಬಹುತೇಕರಿಗೆ ಗೊತ್ತಿರುತ್ತದೆ. ಮನೆಯಲ್ಲಿ ಲಭ್ಯವಿರಬಹುದಾದ ಮನೆ ಮದ್ದುಗಳಿವು. ಇವರೆಡೂ, ನಮ್ಮ ಆರೋಗ್ಯವೃದ್ಧಿಯಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಾ ಬಂದಿವೆ. ಅವುಗಳ ಲಾಭ ಪಡೆದುಕೊಳ್ಳುವತ್ತ ನಾವು ಮನಸ್ಸು ಮಾಡಬೇಕು.

ಮನೆ ಮದ್ದುಗಳ ಬಗ್ಗೆ ಹಿರೀಕರು ಹೇಳುತ್ತಲೇ ಬಂದಿದ್ದಾರೆ. ಅವರ ಮಾತುಗಳನ್ನು ಆಲಿಸಿ, ಪಾಲಿಸಿಕೊಂಡು ಬಂದವರು. ತಮ್ಮ ಆರೋಗ್ಯ ಸ್ಥಿತಿಯನ್ನು ಸದೃಢವಾಗಿಟ್ಟುಕೊಳ್ಳುವಲ್ಲಿ ಯಶಸ್ಸನ್ನು ಕಂಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಮಾರುಕಟ್ಟೆಯಲ್ಲಿ ಲಭ್ಯವಾಗುವ ದುಬಾರಿ ಔಷಧಗಳಿಗಿಂತ ಹೆಚ್ಚು ಶಕ್ತಿಶಾಲಿ ಔಷಧಗಳು ಮನೆಯಲ್ಲಿ ದೊರೆಯುವ ಮದ್ದುಗಳಾಗಿರುತ್ತದೆ. ಅಧಿಕ ಪೋಷಕಾಂಶ ಹಾಗೂ ಖನಿಜಾಂಶಗಳನ್ನು ಹೊಂದಿರುವ ಇಂತಹ ಮದ್ದುಗಳನ್ನು ಸಕಾಲಿಕವಾಗಿ ಬಳಸಿಕೊಳ್ಳುವುದರಲ್ಲಿ ಜಾಣತನವಿರುತ್ತದೆ.

ಉದಾಹರಣೆಗೆ,ಜೀರಿಗೆ ತುಳಸಿ ಎಲೆಗಳು ಮತ್ತು ಅರಿಶಿಣ ಎರಡರಲ್ಲೂ ಆರೋಗ್ಯವೃದ್ಧಿ ಅಂಶಗಳು ಯಥೇಚ್ಚವಾಗಿ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅರಿಶಿಣ,ಜೀರಿಗೆ ಮತ್ತು ತುಳಸಿ ಎಲೆಗಳನ್ನು ಒಟ್ಟಿಗೆ ನೀರಿನಲ್ಲಿ ಕುದಿಸಿ, ಕುಡಿದರೆ ಹಲವು ಪ್ರಯೋಜನಗಳಾಗುತ್ತವೆ.

ಕೆಮ್ಮು ನಿವಾರಣೆ
ಅರಿಶಿಣ ಮತ್ತು ತುಳಸಿ ಮಿಶ್ರಣದ ನೀರು ಕೆಮ್ಮು ನಿವಾರಿಸಲು ಅತ್ಯುತ್ತಮ ಔಷಧಿಯಾಗಿದೆ. ವಿಶೇಷವಾಗಿ ಗಂಟಲ್ಲಿನಲ್ಲಿನ ಉರಿಯೂತ ನಿವಾರಣೆ ಮಾಡಿ, ಕಫವನ್ನು ಸಡಿಲಗೊಳಿಸಿ, ಸುಲಭವಾಗಿ ವಿಸರ್ಜನೆಯಾಗಲು ಸಹಕರಿಸುತ್ತದೆ.

ಇದೇ ನೀರಿನಲ್ಲಿ, ಅಸ್ತಮಾ ರೋಗ ಗುಣಪಡಿಸುವ ಸಾಮರ್ಥ್ಯವೂ ಇದೆ. ಸಂಕುಚಿತಗೊಂಡ ಶ್ವಾಸನಾಳಗಳನ್ನು ಸಡಿಲಗೊಳಿಸಿ, ಒಳ ವಿಸ್ತಾರವನ್ನು ಹೆಚ್ಚಿಸಲು ನೆರವಾಗುತ್ತದೆ. ಆ ಮೂಲಕ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ. ಮಾತ್ರವಲ್ಲದೆ, ಈ ನೀರನ್ನು ಸೇವನೆ ಮಾಡುವುದರಿಂದ ಮೂತ್ರ ಪಿಂಡಗಳಲ್ಲಿನ ಕಲ್ಮಶಗಳನ್ನು ಹೊರಹಾಕುತ್ತದೆ. ಇದರಿಂದ ಮೂತ್ರಪಿಂಡಗಳು ಹೆಚ್ಚು ಕಾರ್ಯಕ್ಷಮತೆಯಿಂದ ಕೆಲಸ ಮಾಡಲು ಅನುವಾಗುತ್ತದೆ. ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವುದನ್ನು ತಡೆಯುತ್ತದೆ.

ನೈಸರ್ಗಿಕವಾಗಿ ದೊರೆಯುವ ತುಳಸಿ,ಜೀರಿಗೆ ಮತ್ತು ಅರಿಶಿಣಗಳಿಂದ ತಯಾರಿಸಿದ ನೀರಿನ ಮಿಶ್ರಣವನ್ನು ನಿತ್ಯದ ಪ್ರಥಮ ಆಹಾರವಾಗಿ ಸೇವಿಸಿದರೆ, ಪೆಡುಸಾಗಿರುವ ನರಗಳು ಸಡಿಲಗೊಳ್ಳುತ್ತವೆ. ತನ್ಮೂಲಕ ರಕ್ತ ಸಂಚಾರ ಸುಗಮವಾಗಲು ಸಹಕಾರಿಯಾಗುತ್ತದೆ.

ಮತ್ತೊಂದು ವಿಶೇಷವೆಂದರೆ, ಮೆದುಳಿಗೆ ಹರಿಯುವ ರಕ್ತ ಪ್ರಮಾಣದಲ್ಲಿ ಹೆಚ್ಚಳವಾಗಿ, ನಿರಾಳತೆಯ ಭಾವ ಮೂಡುತ್ತದೆ. `ಟೆನ್ಷನ್` ಎಂಬುದಕ್ಕೆ ಪರಿಹಾರ ದೊರೆಯಲಿದೆ.
ಈ ನೀರಿನಲ್ಲಿನ ಅಂಶಗಳಿಂದಾಗಿ ಮಲಬದ್ಧತೆ ನಿವಾರಣೆಯಾಗಲು ದಾರಿ ಮಾಡಿಕೊಡುತ್ತವೆ. ಕರುಳುಗಳಲ್ಲಿ ಜೀರ್ಣಗೊಂಡ ಆಹಾರದ ಚಲನೆಯನ್ನು ಸುಲಭವಾಗಿಸಿ, ತ್ಯಾಜ್ಯ ವಿಸರ್ಜನೆಗೆ ನೆರವಾಗುತ್ತದೆ. ಇದರ ಪರಿಣಾಮವಾಗಿ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ಹೊಟ್ಟೆಯೂತ ನಿವಾರಿಸುವ ನಿಟ್ಟಿನಲ್ಲಿ ಈ ಪೇಯ (ಮಿಶ್ರಣ) ಸಹಾಯ ಮಾಡುತ್ತದೆ. ಇದೊಂದು ಅತ್ಯುತ್ತಮ ಉರಿಯೂತ ನಿವಾರಕವಾಗಿದ್ದು, ಜೀರ್ಣಾಂಗಗಳ ಒಳಭಾಗದಲ್ಲಿ ಆಮ್ಲೀಯತೆಯ ಪ್ರಭಾವವನ್ನು ಕುಗ್ಗಿಸುತ್ತದೆ.

ಇದರ ಪರಿಣಾಮವಾಗಿ ಹೊಟ್ಟೆಯುರಿ, ಎದೆಯುರಿ, ಹುಳಿ ತೇಗು ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೀರ್ಣಶಕ್ತಿ ಹೆಚ್ಚುತ್ತದೆ. ತಲೆನೋವಿದ್ದರೆ ಅದನ್ನು ನಿವಾರಿಸುತ್ತದೆ.
ಪ್ರತಿನಿತ್ಯ ಈ ನೀರಿನ ಸೇವನೆಯಿಂದ ಸೈನಸ್ ಸಮಸ್ಯೆ ದೂರವಾಗಬಲ್ಲದು. ಅಲರ್ಜಿಗಳಿಂದ ರಕ್ಷಣೆ ದೊರೆಯಲಿದೆ. ಕೊಲೆಸ್ಟ್ರಾಲ್ ಕಡಿಮೆಯಾಗುತ್ತದಂತೆ.

ಬಹುಪಯೋಗಿ ಈ ನೀರನ್ನು ತಯಾರಿಸಿಕೊಂಡು ಕುಡಿಯುವುದರಿಂದ ಎಲ್ಲರಲ್ಲೂ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ತನ್ಮೂಲಕ ಆರೋಗ್ಯದಲ್ಲೂ ಸುಧಾರಣೆಯಾಗುವುದಂತೂ ಖಚಿತ.

Comments are closed.