ಕರಾವಳಿ

ಐವನ್ ಡಿಸೋಜಾರ ದೀಪಾವಳಿ ಕಾರ್ಯಕ್ರಮಕ್ಕೆ ಆರಂಭದಲ್ಲೇ ವಿಘ್ನ : ಕದ್ರಿ ಕಾರ್ಯಕ್ರಮ ರದ್ದು ಪಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ

Pinterest LinkedIn Tumblr

vhp_manavi_photo_1

ಮಂಗಳೂರು,ಅ.26: ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ನೇತ್ರತ್ವದಲ್ಲಿ ನಗರದ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಈ ಬಾರಿ ದೀಪಾವಳಿ ಹಬ್ಬದ ಅಂಗವಾಗಿ ಆಯೋಜಿಸಲಾಗಿರುವ ” ಭಾವೈಕ್ಯದ ದೀಪಾವಳಿ ಆಚರಣೆ ಕಾರ್ಯಕ್ರಮಕ್ಕೆ ಆರಂಭದಲ್ಲೇ ವಿಘ್ನವುಂಟಾಗಿದೆ. ತುಳುನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರವಾದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಅನ್ಯ ಮತೀಯರಾಗಿರುವ ಐವನ್ ಡಿಸೋಜಾ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ರದ್ದು ಪಡಿಸುವಂತೆ ಹಿಂದೂ ಸಂಘಟನೆಗಳ ಮುಖಂಡರ ನಿಯೋಗವೊಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ನಗರದ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ ಈ ಬಾರಿ ದೀಪಾವಳಿ ಹಬ್ಬದ ಅಂಗವಾಗಿ ಅ.29ರಂದು ಗೂಡು ದೀಪ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆ ಹಾಗೂ ಅಕ್ಕಿ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುವ ಬಗ್ಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.

ಅ.29ರಂದು ದೀಪಾವಳಿ ಮತ್ತು ಭಾವೈಕ್ಯತೆ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಗೂಡು ದೀಪ ಸ್ಪರ್ಧೆ, ಫಲಾನುಭವಿಗಳಿಗೆ ಕನ್ನಡಕ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದಲ್ಲಿ, ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಡಾ.ಆಲೋಶಿಯಸ್ ಪೌಲ್ ಡಿಸೋಜಾ, ಮೌಲಾನಾ ಜಾಫರ್ ಸಾಧಿಕ್ ಪೈಝಿ, ಮನಪಾ ಮೇಯರ್ ಹರಿನಾಥ್, ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಶಾಸಕರಾದ ಅಭಯಚಂದ್ರ ಜೈನ್, ಟಿ.ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ ಭಾಗವಹಿಸಲಿದ್ದಾರೆ ಎಂದು ಐವನ್ ಡಿಸೋಜಾ ತಿಳಿಸಿದ್ದರು.

vhp_manavi_photo_2

ಆದರೆ ತುಳುನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರವಾದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಅನ್ಯ ಮತೀಯರಾಗಿರುವ ಮತ್ತು ರಾಜಕೀಯ ಅಧಿಕಾರ ಹೊಂದಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ರವರ ಮುಂದಾಳುತ್ವದಲ್ಲಿ ಕೆಥೋಲಿಕ್ ಧರ್ಮಗುರು ಬಿಷಪ್ ಮತ್ತು ಮುಸ್ಲಿಂ ಮತದ ಖಾಜಿಗಳಿಂದ ಉದ್ಘಾಟಿಸಲ್ಪಡುವ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡ ಬಾರದು ಹಾಗೂ ಇದಕ್ಕೆ ಅನುಮತಿ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ, ಈ ಕಾರ್ಯಕ್ರಮವನ್ನು ರದ್ದು ಪಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಆರ್.ಎಸ್.ಎಸ್, ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡರು ದ.ಕ.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮನವಿ ಪತ್ರ :

ತುಳುನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರವಾದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಇದೇ ಬರುವ ತಾರೀಕು 29-10-2016ರಂದು ದೀಪಾವಳಿ ಹಬ್ಬದ ಪ್ರಯುಕ್ತ ” ಭಾವೈಕ್ಯದ ದೀಪಾವಳಿ ಆಚರಣೆ ಎಂಬ ಕಾರ್ಯಕ್ರಮ ನಡೆಯುವ ಬಗ್ಗೆ ಈಗಾಗಲೇ ಪತ್ರಿಕೆಯ ಮುಖಾಂತರ ತಿಳಿದು ಬಂದಿರುತ್ತದೆ.

ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ಕೆಲವೊಂದು ವ್ಯಕ್ತಿಗಳ ಬಗ್ಗೆ ಮತ್ತು ಈ ಕಾರ್ಯಕ್ರಮದ ರೂಪರೇಖೆಗಳನ್ನು ಗಮನಿಸದಾಗ ಇದೊಂದು ದುರುದ್ದೇಶ ಪೂರ್ವಕ ಮತ್ತು ರಾಜಕೀಯ ವ್ಯಕ್ತಿಗಳಿಂದ ಪ್ರಾಯೋಜಿಸ್ಪಲ್ಪಟ್ಟ ರಾಜಕೀಯ ಪ್ರೇರಿತವಾಗಿರುವ ಕಾರ್ಯಕ್ರಮ ಎಂಬುದಾಗಿ ತಿಳಿದು ಬರುತ್ತದೆ.

ಇಂತಹ ಕಾರ್ಯಕ್ರಮವನ್ನು ಆಯೋಜಿಸಿ ಹಿಂದುಗಳ ಮದ್ಯೆ ಗೊಂದಲ ನಿರ್ಮಿಸಲು ಈ ರಾಜಕೀಯ ನಾಯಕರಿಗೆ ಹಿಂದೂ ಸಮಾಜ ಯಾವತ್ತು ಅವಕಾಶ ನೀಡುವುದಿಲ್ಲ . ಅನ್ಯ ಮತೀಯರಾಗಿರುವ ಮತ್ತು ರಾಜಕೀಯ ಅಧಿಕಾರ ಹೊಂದಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ರವರ ಮುಂದಾಳುತ್ವದಲ್ಲಿ ಕೆಥೋಲಿಕ್ ಧರ್ಮಗುರು ಬಿಷಪ್ ಮತ್ತು ಮುಸ್ಲಿಂ ಮತದ ಖಾಜಿಗಳಿಂದ ಉದ್ಘಾಟಿಸಿ ಹಿಂದೂ ಸಮಾಜಕ್ಕೆ ಭಾವೈಕ್ಯದ ಮಾತುಗಳನ್ನು ಹೇಳುವುದು ಸಾಮರಸ್ಯವಾಗಿರುವುದಿಲ್ಲ.

ಕಾರ್ಯಕ್ರಮದಲ್ಲಿ ಕೇವಲ ಹಿಂದೂ ಬಾಂಧವರನ್ನು ಮಾತ್ರ ಸೇರಿಸುವ ಬದಲು, ಈ ಕಾರ್ಯಕ್ರಮವನ್ನು ದೇವಸ್ಥಾನದ ರಾಜಾಂಗಣದ ಹೊರತಾಗಿ, ಇನ್ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ಪ್ರಾಯೋಜಿಸಿ, ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯದವರನ್ನೂ ಕೂಡ ಸೇರಿಸಿ ಸಾಮರಸ್ಯವನ್ನು ಮೂಡಿಸಿದರೆ ಮಾತ್ರ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ಈ ದೇಶದಲ್ಲಿ ನೈಜ ಸಾಮರಸ್ಯದಲ್ಲಿ ಬದುಕುವ ಹಿಂದೂ ಸಮಾಜಕ್ಕೆ ಯಾರೋ ಅನ್ಯ ಮತೀಯರು ಸಾಮರಸ್ಯದ ಪಾಠವನ್ನು ಹೇಳಿಕೊಡುವ ಅಗತ್ಯವಿರುವುದಿಲ್ಲ. ಅದ್ದರಿಂದ ಈ ಕಾರ್ಯಕ್ರಮದ ಮುಖಾಂತರ ಹಿಂದುಗಳಲ್ಲಿ ಗೊಂದಲ ಮೂಡಿಸಿದಂತಾಗುತ್ತದೆಯೇ ಹೊರತು ಸಾಮರಸ್ಯ ಮೂಡಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ಹಿಂದೂ ಧಾರ್ಮಿಕ ಕೇಂದ್ರಗಳು ಹಿಂದುಗಳಿಗೆ ಸೀಮಿತವಾಗಿರುವುದು ಮತ್ತು ಹಿಂದೂ ಧಾರ್ಮಿಕ ದತ್ತಿ ಕಾನೂನಿನ ಮುಖಾಂತರ ಅನ್ಯಮತೀಯವರಿಗೆ ಹಿಂದೂ ದೇವಾಲಯಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಲು ಅವಕಾಶವಿರುವುದಿಲ್ಲ. ಈ ರೀತಿಯಾಗಿ ಅನ್ಯಮತೀಯರ ಕಾರ್ಯುಕ್ರಮಗಳಿಂದ ದೇವಸ್ಥಾನದ ಆಚಾರ ವಿಚಾರಗಳಿಗೆ ಚ್ಯುತಿ ಬರುತ್ತದೆ ಮತ್ತು ಹಿಂದುಗಳ ಭಾವನೆಗೆ ಧಕ್ಕೆಯಾಗುತ್ತದೆ.

ಇಂತಹ ರಾಜಕೀಯ ಪ್ರೇರಿತ ವ್ಯಕ್ತಿಗಳು ದೀಪಾವಳಿಯ ಹೆಸರಿನಲ್ಲಿ ಸಮಾಜದಲ್ಲಿ ಸುಳ್ಳು ಸಾಮರಸ್ಯ ಮೂಡಿಸುವ ಬದಲು ಹಿಂದೂ ಸಮಾಜದ ವಿರುದ್ಧ ನಡೆಯುವ, ಮತಾಂತರ, ಗೋಹತ್ಯೆ, ನಡೆಯುವುದನ್ನು ವಿ.ಹಿಂ ಪ ಮತ್ತು ಬಜರಂಗದಳ ಉಗ್ರವಾಗಿ ಖಂಡಿಸುತ್ತದೆ. ಮತ್ತು ಈ ಕಾರ್ಯಕ್ರಮಕ್ಕೆ ಈಗಾಗಲೇ ದೇವಸ್ಥಾನದ ಆಡಳಿತ ಮಂಡಳಿ ಅನುಮತಿ ನೀಡಿದ್ದರೆ ಕೂಡಲೇ ಅದನ್ನು ರದ್ದುಗೊಳಿಸಿ ಯಾವುದೇ ರೀತಿಯ ಗೊಂದಲಗಳು ನಿರ್ಮಾಣವಾಗುವುದನ್ನು ತಡೆಯುವುದು ಸೂಕ್ತ.

ಈ ಕಾರ್ಯಕ್ರಮ ಪೂರ್ವನಿಗದಿಯಂತೆ ನಡೆಯಬಾರದು ಮತ್ತು ಇದಕ್ಕೆ ಅವಕಾಶವನ್ನು ಯಾವುದೇ ಕಾರಣಕ್ಕೂ ನೀಡಬಾರದು. ಈ ಕಾರ್ಯಕ್ರಮ ದೇವಸ್ಥಾನದ ರಾಜಾಂಗಣ ಒಳಗೆ ನಡೆಯುವುದನ್ನು ವಿಹಿಂಪ ಮತ್ತು ಬಜರಂಗದಳ ತಡೆಯಲು, ಕಾನೂನಿನ ಮುಖಾಂತರ ಎಲ್ಲಾ ಪ್ರಯತ್ನಕ್ಕೂ ಸಿದ್ದವಿರುವುದರಿಂದ , ಮುಂದಕ್ಕೆ ಉಗ್ರ ಹೋರಾಟಗಳನ್ನು ಮಾಡಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ.

ಅದ್ದರಿಂದ ಮಾನ್ಯರಾದ ತಾವುಗಳು ಈ ಬಗ್ಗೆ ಕುಲಂಕೂಷವಾಗಿ ತನಿಖೆ ನಡೆಸಿ, ಇದಕ್ಕೆ ಅನುಮತಿ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ನ್ಯಾಯ ನೀಡಿ, ಈ ಕಾರ್ಯಕ್ರಮವನ್ನು ರದ್ದು ಪಡಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ವಿ ಎಚ್ ಪಿ ಪ್ರಾಂತೀಯ ಮುಖಂಡ ಪ್ರೋ.ಎಂ.ಬಿ ಪುರಾಣಿಕ್, ಆರ್ ಎಸ್ ಎಸ್ ಪ್ರಮುಖ್ ಪಿ.ಎಸ್ ಪ್ರಕಾಶ್, ಬಜರಂಗ ದಳದ ರಾಜ್ಯ ಮುಖಂಡ ಶರಣ್ ಪಂಪ್‍ವೆಲ್, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ವಿ ಎಚ್ ಪಿಯ ಪದಾಧಿಕಾರಿಗಳಾದ ಜಿತೇಂದ್ರ ಕೊಟ್ಟಾರಿ, ಜಗದೀಶ್ ಶೇಣವ, ಸುನೀಲ್ ಆಚಾರ್, ಗೋಪಾಲ್ ಕುತ್ತಾರ್,ಪ್ರವೀಣ್ ಕುತ್ತಾರ್ ಮುಂತಾದವರು ಇದ್ದರು.

ಕುದ್ರೋಳಿ ಶ್ರೀಕ್ಷೇತ್ರದ ವಿರುದ್ಧ ಪರ್ಯಾಯ ಗೂಡು ದೀಪ ಸ್ಫರ್ಧೆ..?

ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ಹಾಗೂ ಮಂಗಳೂರು ದಸರಾ ರೂವಾರಿ ಬಿ.ಜನಾರ್ಧನ ಪೂಜಾರಿ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಅವರ ಮಧ್ಯೆ ಈಗಾಗಲೇ ಶೀತಲ ಸಮರ ನಡೆಯುತ್ತಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಹೋಗದಂತೆ ತಡೆದ ಆರೋಪ ಕೂಡ ಐವನ್ ಮೇಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಬಿಲ್ಲವ ಮುಖಂಡರು ಕೂಡ ಐವನ್ ವಿರುದ್ಧ ಸಮರ ಸಾರಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಐವನ್ ವಿರುದ್ಧ ಬಹಿರಂಗ ಹೇಳಿಕೆ ಕೂಡ ನೀಡಿದ್ದಾರೆ.

ಇದೀಗ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವಿರೋಧ ಕಟ್ಟಿಕೊಂಡಿರುವ ಐವನ್ ಡಿಸೋಜಾ ಅವರು,ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀಕ್ಷೇತ್ರದ ಗೂಡು ದೀಪ ಸ್ಫರ್ಧೆಗೆ ಪರ್ಯಾಯವಾಗಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಗೂಡು ದೀಪ ಸ್ಫರ್ಧೆ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

__ ಸತೀಶ್ ಕಾಪಿಕಾಡ್

Comments are closed.