ಮೈಸೂರು: ಈ ಬಾರಿಯೂ ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಆಗಿ ನುಡಿದಿದ್ದಾರೆ.
ಇಲ್ಲಿನ ಮಂಡಕ್ಕಳ್ಳಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಟಿಪ್ಪುವಿನ ಜಯಂತಿ ಆಚರಿಸುವುದು ದೇಶ ಪ್ರೇಮ. ಆರ್‍ಎಸ್‍ಎಸ್ -ಸಂಘ ಪರಿವಾರದವರು ಅಸ್ತಿತ್ವಕ್ಕೆ ಬಂದಾಗಿನಿಂದ ಇದಕ್ಕೆ ಬೇರೆ ಅರ್ಥ ಕಲ್ಪಿಸಿ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಸಮಾಜದ ಸಾಮರಸ್ಯಕ್ಕೆ ಹುಳಿ ಹಿಂಡುತ್ತಿದ್ದಾರೆ ಎಂದರು.
ಯಡಿಯೂರಪ್ಪನವರು ಬರೀ ಸುಳ್ಳುಗಳನ್ನೇ ಹೇಳುತ್ತಾ ಅವರ ಸಂಪ್ರದಾಯ ಮುಂದುವರಿಸಿದ್ದಾರೆ. ಯಾವೊಬ್ಬ ಕಾಂಗ್ರೆಸ್ ನಾಯಕರೂ ಬಿಜೆಪಿ ಸೇರುತ್ತಿಲ್ಲ. ಬರೀ ಬುರುಡೆ ಬಿಡುತ್ತಿದ್ದಾರೆ.
ಈ ತಿಂಗಳ ಒಳಗೆ ನಿಗಮ ಮಂಡಳಿಗಳ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದು ಹೇಳಿದ ಅವರು ಉಕ್ಕಿನ ಮೇಲ್ಸೇತುವೆ ವಿಚಾರವಾಗಿ ಜಾಲತಾಣದಲ್ಲಿ ಸುಮಾರು ಶೇ.೭೩ ರಷ್ಟು ಜನ ಅಭಿಪ್ರಾಯ ತಿಳಿಸಿದ್ದಾರೆ. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು ಎಂದಿದ್ದಾರೆ.