ಕರ್ನಾಟಕ

ಮೀಸಲಾತಿ ಬೇಡಿಕೆಗೆ ಒತ್ತಾಯಿಸಿ ಬೀದರ್‌ನಲ್ಲಿ ಮರಾಠರ ಬೃಹತ್‌ ಮೌನ ಮೆರವಣಿಗೆ

Pinterest LinkedIn Tumblr

211111

ಬೀದರ್: ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ ಮರಾಠ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಬೇಕು ಎನ್ನುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಜಿಲ್ಲೆಯ ಮರಾಠರು ಬೃಹತ್‌ಮೌನ ಮೆರವಣಿಗೆ ನಡೆಸಿದರು.

ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಗೆ ಒತ್ತಾಯಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ‘ಮರಾಠ ಕ್ರಾಂತಿ ಮೌನ ಮೋರ್ಚಾ’ ಪ್ರತಿಭಟನೆಯಿಂದ ಪ್ರೇರಣೆ ಪಡೆದ ಜಿಲ್ಲೆಯ ಮರಾಠರು ರಾಜ್ಯದಲ್ಲೂ ಮೌನ ಮೆರವಣಿಗೆಗೆ ಚಾಲನೆ ನೀಡಿದರು.

ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದ ಮರಾಠರು ಸಹ ಪಾಲ್ಗೊಳ್ಳುವ ಮೂಲಕ ಮೌನ ಮೆರವಣಿಗೆಗೆ ಮತ್ತಷ್ಟು ಬಲ ತುಂಬಿದರು. ನಗರದ ಪಾಪನಾಶ ಮಂದಿರ ಮಹಾದ್ವಾರದ ಬಳಿ ಜಮಾಯಿಸಿ ಸುಮಾರು ಮೂರು ಕಿಲೊಮೀಟರ್‌ಅಂತರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆಯಲ್ಲಿ ಸಾಗಿದರು.

‘ಮರಾಠ ಕ್ರಾಂತಿ ಮೌನ ಮೋರ್ಚಾದಲ್ಲಿ ಸುಮಾರು 80 ಸಾವಿರ ಜನ ಪಾಲ್ಗೊಂಡಿದ್ದರು’ ಎಂದು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಪ್ರಕಾಶ ನಿಕಮ್‌ತಿಳಿಸಿದರು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ‘ಮೀ ಮರಾಠ’ (ನಾನು ಮರಾಠ) ಎಂದು ಬರೆದ ಕೇಸರಿ ಟೋಪಿ ಧರಿಸಿದ್ದರು. ಬಹುತೇಕ ಮಹಿಳೆಯರು ಕೇಸರಿ ಬಣ್ಣದ ಸೀರೆ ತೊಟ್ಟಿದ್ದರು. ಪುರುಷರು ಭಗವಾಧ್ವಜ ಹಿಡಿದು ಕೊಂಡಿದ್ದರು.

‘ಏಕ ಮರಾಠ, ಲಾಕ್‌ಮರಾಠ’, ‘ಮೀ ಮರಾಠ’, ‘ಮರಾಠ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಿ’, ‘ಮರಾಠರಿಗೆ ಬೇಕು ಮೀಸಲಾತಿ’ ಎಂದು ಕನ್ನಡ ಹಾಗೂ ಮರಾಠಿಯಲ್ಲಿ ಬರೆದಿದ್ದ ಪ್ರದರ್ಶನ ಫಲಕಗಳನ್ನು ಹಿಡಿದು ಗಮನ ಸೆಳೆದರು.

ಮೆರವಣಿಗೆ ಮುಂಚೂಣಿಯಲ್ಲಿದ್ದ ವಾಹನಕ್ಕೆ ಜೀಜಾಮಾತಾ ಹಾಗೂ ಶಿವಾಜಿ ಮಹಾರಾಜರ ಚಿತ್ರವನ್ನು ಹಾಕಲಾಗಿತ್ತು. ಬೀದರ್‌ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ತಲಾ ಇಬ್ಬರಂತೆ ಕಪ್ಪುಬಟ್ಟೆ ಧರಿಸಿದ್ದ ಒಟ್ಟು ಹತ್ತು ಬಾಲಕಿಯರು ಮೆರವಣಿಗೆ ನೇತೃತ್ವ ವಹಿಸಿದ್ದರು.

ಈ ಬಾಲಕಿಯರೇ ಬೀದರ್‌ಉಪ ವಿಭಾಗಾಧಿಕಾರಿ ವೆಂಕಟರಾಜ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ದಿನವಾದ ಫೆಬ್ರುವರಿ 19 ರಂದು ಸರ್ಕಾರಿ ರಜೆ ಘೋಷಿಸಬೇಕು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆಯಲ್ಲಿ ಇರುವ ಶಹಾಜಿರಾಜೆ ಭೋಸ್ಲೆ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಿ ಅಭಿವೃದ್ಧಿಪಡಿಸಬೇಕು. ಶಾಹು ಮಹಾರಾಜ ಮರಾಠ ವಿಕಾಸ ಮಂಡಳಿ ಸ್ಥಾಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಎಂದು ಆಗ್ರಹಿಸಲಾಗಿದೆ.

Comments are closed.