ಕರ್ನಾಟಕ

ಚಿರತೆ ಹಾವಳಿ: ರೈತರ ಮನೆಯ ಮುಂದೆ ಸಿಸಿ ಕ್ಯಾಮರ

Pinterest LinkedIn Tumblr

leopardಬೆಂಗಳೂರು,ಅ.19-ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಚಿರತೆಗಳು ಹಸು ಕರುಗಳನ್ನು ತಿಂದು ಹಾಕುತ್ತಿದ್ದು ದಾಬಸ್‍ಪೇಟೆಯ ರಾಯರಪಾಳ್ಯದಲ್ಲಿ ಚಿರತೆ ಹಾವಳಿಗೆ ಬೆಚ್ಚಿಬಿದ್ದ ರೈತರು ತಮ್ಮ ಮನೆಯ ಮುಂದೆ ಸಿಸಿ ಕ್ಯಾಮರಾಗಳನ್ನು ಹಾಕಿಸಿದ್ದಾರೆ.

ರಾಯರಪಾಳ್ಯದ ರೈತ ರಾಮಣ್ಣ ಎಂಬುವವರು ಹಸುಗಳನ್ನು ಮೇಯಿಸಲು ಹೋಗಿದ್ದಾಗ ಏಕಾಏಕಿ ಚಿರತೆಯೊಂದು ದಾಳಿ ನೆಡೆಸಿ ಕರುವನ್ನು ತಿಂದು ಹಾಕಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನೆಲಮಂಗಲ ತಾಲೂಕಿನ ಗಡಿ ಅಂಚಿನಲ್ಲಿರುವ ಶಿವಗಂಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಗ್ರಾಮದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದರಿಂದ ಜಾನುವಾರು ಹಾಗೂ ಕುರಿ ಮೇಕೆಗಳನ್ನು ಬಲಿ ತೆಗೆದುಕೊಳ್ಳುತ್ತಿವೆ.

ಆದರೆ ಈ ಗುಡ್ಡಗಾಡು ಪ್ರದೇಶಗಳಲ್ಲಿ ಎರಡರಿಂದ ಮೂರು ಚಿರತೆಗಳು ವಾಸವಾಗಿದ್ದು, ಸತತವಾಗಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಲೆ ಇವೆ. ಹೀಗಾಗಿ ಒಂಟಿಯಾಗಿ ಹೊರ ಬರಲು ಜನರು ಹೆದರುವಂತಾಗಿದೆ.

ಇದರ ಬಗ್ಗೆ ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ಹಲವು ಕಡೆ ಸಿಸಿಟಿವಿಯನ್ನು ಅಳವಡಿಸಲಾಗಿದ್ದು, ಪ್ರತಿದಿನ ಚಿರತೆಗಳ ಆಗಮನದ ಬಗ್ಗೆ ರೈತರು ನಿಗಾ ವಹಿಸಿದ್ದಾರೆ. ಇನ್ನಾದ್ರೂ ಅರಣ್ಯಾಧಿಕಾರಿಗಳು ಬೋನಿಟ್ಟು ಚಿರತೆಗಳನ್ನು ಸೆರೆ ಹಿಡಿಯಬೇಕೆಂದು ರೈತರು ಆಗ್ರಹಿಸಿದ್ದಾರೆ.

Comments are closed.