ಕರ್ನಾಟಕ

ಶೇ. 77ರಷ್ಟು ಉಕ್ಕಿನ ಸೇತುವೆ ಪರ: ಫೇಸ್‍ಬುಕ್ ಪೋಸ್ಟ್ ನಲ್ಲಿ ಸಿದ್ದರಾಮಯ್ಯ

Pinterest LinkedIn Tumblr

siddaramaiah.jpgaaaaaaaaಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ವಿಚಾರವಾಗಿ ಪರ -ವಿರೋಧ ಚರ್ಚೆಗಳು ಕಾವೇರುತ್ತಿರುವ ಹೊತ್ತಲ್ಲಿ, ಬೆಂಗಳೂರಿನ ಶೇ. 77ರಷ್ಟು ಜನರು ಉಕ್ಕಿನ ಸೇತುವೆ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಫೇಸ್‍ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಉಕ್ಕು ಸೇತುವೆ ಯೋಜನೆ ಸಂಪೂರ್ಣ ಪಾರದರ್ಶಕ ಎಂದು ಹೇಳಿರುವ ಸಿಎಂ ಈ ಕುರಿತು ಯಾವುದೇ ಸಂಶಯ ಬೇಡ ಎಂದಿದ್ದಾರೆ. ಉಕ್ಕು ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಗರ ಸಂಚಾರ ಕೈಗೊಂಡಿರಲಿಲ್ಲ. ಉಕ್ಕು ಸೇತುವೆ ನಿರ್ಮಾಣ ವಿಚಾರ 2010ರಲ್ಲೇ ಪ್ರಸ್ತಾಪವಾಗಿತ್ತು. ಸಮಗ್ರ ಯೋಜನಾ ವರದಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಬಿಬಿಎಂಪಿ 2010ರಲ್ಲಿ ಖಾಸಗಿ ಸಂಸ್ಥೆಗೆ ವಹಿಸಿತ್ತು. ಬಳಿಕ ಅದೇ ವರ್ಷ ಬಿಡಿಎಗೆ ಯೋಜನೆಯನ್ನು ವರ್ಗಾಯಿಸಲಾಗಿದೆ.

ಹೊಟ್ಟೆ ಉರಿಯಿಂದ ಮತ್ತು ರಾಜಕೀಯ ಕಾರಣಗಳಿಗೆ ಬಿಜೆಪಿಯವರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಅವರದ್ದೇ ಕೂಸು. ನಾವು ಬೆಳೆಸಿದ್ದೇವೆ ಅಷ್ಟೇ. ಉಕ್ಕು ಸೇತುವೆ ನಿರ್ಮಾಣ ಸಂಬಂಧ 2013ರಲ್ಲಿ ಮೊದಲ ಯೋಜನಾ ವರದಿ ಸಿದ್ಧವಾಯಿತು. ಅಂತಿಮ ಯೋಜನಾ ವರದಿ ತಯಾರಾಗಿದ್ದು 2015ರಲ್ಲಿ. ಜೊತೆಗೆ ಸಾಧ್ಯಾಸಾಧ್ಯತೆ ವರದಿಯೂ ವೆಬ್‍ಸೈಟ್‍ನಲ್ಲಿದೆ.
ಯೋಜನೆಗೆ ಸಂಬಂಧಿಸಿದಂತೆ ಸರಾಸರಿ ದರ 2014ರಲ್ಲಿ ಕಡಿಮೆ ಇತ್ತು. ಎರಡು ವರ್ಷದ ಬಳಿಕ ಟೆಂಡರ್ ಕರೆದಿರುವುದರಿಂದ ವೆಚ್ಚದ ಪ್ರಮಾಣ ಕೊಂಚ ಏರಿಕೆಯಾಗಿದೆ. ಉಕ್ಕು ಮಾರಾಟದ ಮೇಲಿನ ಮೌಲ್ಯವರ್ಧಿತ ತೆರಿಗೆ 5ರಿಂದ 14ಕ್ಕೆ ಏರಿಕೆಯಾಗಿರುವುದೂ ವೆಚ್ಚ ಹೆಚ್ಚಲು ಕಾರಣವಾಗಿದೆ.

ಯೋಜನೆಯ ವಿವರಗಳನ್ನು ವೆಬ್‍ಸೈಟ್‍ನಲ್ಲಿ ಅಳವಡಿಸಿದ ಬಳಿಕ ಶೇ. 77ರಷ್ಟು ಮಂದಿ ಸೇತುವೆ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಫೇಸ್‍ಬುಕ್ ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ.

Comments are closed.