ಕರ್ನಾಟಕ

ಇಂದು ಶ್ರೀನಿವಾಸ್ ಪ್ರಸಾದ್‌ ರಾಜೀನಾಮೆ ಸಲ್ಲಿಕೆ

Pinterest LinkedIn Tumblr
Mysuru district incharge minister V Srinivasaprasad during Dr B R Ambedkar’s 124th birthday celebration organized by Karnataka State Open University and Dr B R Ambedkar study and research centre at Kaveri Auditorium, Mukthagangotri in Mysuru on Friday. . -Photo / IRSHAD MAHAMMAD
Mysuru 

ಬೆಂಗಳೂರು/ಮೈಸೂರು: ಶಾಸಕ ಸ್ಥಾನಕ್ಕೆ ವಿ. ಶ್ರೀನಿವಾಸ ಪ್ರಸಾದ್‌ ರಾಜೀನಾಮೆ ನೀಡಲಿರುವುದರಿಂದ ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವಾಗಲೇ ಉಪಚುನಾವಣೆಯ ಸವಾಲನ್ನು ಎದುರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಜ್ಜಾಗಬೇಕಾಗಿದೆ.

14 ನೇ ವಿಧಾನಸಭೆ ಅವಧಿ 2018ರ ಮೇ 13ಕ್ಕೆ ಕೊನೆಯಾಗಲಿದೆ. ಅದಕ್ಕೂ ಮೊದಲೇ ಸರ್ಕಾರದ ಜನಪ್ರಿಯತೆಯನ್ನು ಪರೀಕ್ಷೆಗೆ ಒಡ್ಡುವ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಶ್ರೀನಿವಾಸ ಪ್ರಸಾದ್ ರಾಜಿನಾಮೆಯಿಂದ ಸೃಷ್ಟಿಯಾಗಲಿದೆ.

ವಿಧಾನಸಭೆ ಅವಧಿ ಆರು ತಿಂಗಳು ಬಾಕಿ ಇರುವಾಗ ಶಾಸಕ ಸ್ಥಾನ ಖಾಲಿಯಾದರೆ ಉಪಚುನಾವಣೆ ನಡೆಯುವುದಿಲ್ಲ. ಇನ್ನೂ ಒಂದೂವರೆ ವರ್ಷ ಬಾಕಿ ಇರುವುದರಿಂದ ಆಯೋಗ ಚುನಾವಣೆ ನಡೆಸಲೇಬೇಕಾಗುತ್ತದೆ.

ಸಿದ್ದರಾಮಯ್ಯ ಅವರ ವಿರುದ್ಧ ಸಿಡಿದೆದ್ದು, ಬಹಿರಂಗವಾಗಿಯೇ ಕೆಂಡ ಕಾರುತ್ತಿರುವ ಶ್ರೀನಿವಾಸ ಪ್ರಸಾದ್‌ ಅವರು ಶಾಸಕ ಸ್ಥಾನ ಹಾಗೂ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಲಿದ್ದಾರೆ.

ಸಿದ್ದರಾಮಯ್ಯ ಅವರ ತವರು ಜಿಲ್ಲೆ ವ್ಯಾಪ್ತಿಯಲ್ಲಿರುವ ನಂಜನಗೂಡು ಕ್ಷೇತ್ರದ ಶಾಸಕರಾದ ಶ್ರೀನಿವಾಸ ಪ್ರಸಾದ್‌ ಅವರು ರಾಜೀನಾಮೆ ನೀಡುವ ನಿರ್ಧಾರದಿಂದ ರಾಜ್ಯದಲ್ಲಿ ಚುನಾವಣೆ ಕಾವು ಆರಂಭವಾಗಲಿದೆ. ಕಾಂಗ್ರೆಸ್‌ ಪಕ್ಷಕ್ಕೆ ಈ ಕ್ಷೇತ್ರ ಉಳಿಸಿಕೊಳ್ಳುವುದು ಪ್ರತಿಷ್ಠೆಯೂ ಆಗಲಿದೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2014ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದ ಬಿ.ಎಸ್‌. ಯಡಿಯೂರಪ್ಪ, ಶ್ರೀರಾಮುಲು, ಪ್ರಕಾಶ್‌ ಹುಕ್ಕೇರಿ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಉಪಚುನಾವಣೆ ನಡೆದಿತ್ತು. ದೇವದುರ್ಗ ಶಾಸಕ ವೆಂಕಟೇಶ ನಾಯಕ್‌, ಬೀದರ್‌ನ ಗುರುಪಾದಪ್ಪ ನಾಗಮಾರಪಳ್ಳಿ, ಹೆಬ್ಬಾಳದ ಜಗದೀಶ ಕುಮಾರ್‌ ಅಕಾಲಿಕ ನಿಧನದಿಂದಾಗಿ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು. ಇದೀಗ ಮತ್ತೊಂದು ಉಪಚುನಾವಣೆ ಎದುರಾಗಲಿದೆ.

‌‌ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್‌ ಅವರು ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಕಳೆದುಕೊಂಡಿದ್ದರು. ಬಳಿಕ ಪಕ್ಷದ ಚಟುವಟಿಕೆ, ವಿಧಾನಸಭೆ ಕಲಾಪದಿಂದ ದೂರ ಉಳಿದಿದ್ದರು.

ವಿಧಾನಸಭಾ ಸ್ಪೀಕರ್‌ ಕೆ.ಬಿ.ಕೋಳಿವಾಡ ಅವರನ್ನು ಸೋಮವಾರ ಮಧ್ಯಾಹ್ನ 12 ಗಂಟೆಗೆ ಭೇಟಿಯಾಗಲಿರುವ ಪ್ರಸಾದ್ ಅವರು, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂದು ಅವರ ಆಪ್ತರು ಖಚಿತ ಪಡಿಸಿದ್ದಾರೆ.

ಚಾಮರಾಜನಗರ ಮೀಸಲು ಕ್ಷೇತ್ರದಿಂದ ಸಮತಾ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿ, ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಸಾದ್‌ ಅವರು ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಿಂದ (ಎಸ್ಸಿ) ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಬಿಜೆಪಿಯ ಎಸ್‌.ಮಹದೇವಯ್ಯ ಅವರನ್ನು ಮಣಿಸಿದ್ದರು. 2013ರಲ್ಲಿ ಜೆಡಿಎಸ್‌ನ ಕಳಲೆ ಎನ್‌.ಕೇಶವಮೂರ್ತಿ ವಿರುದ್ಧ ಗೆದ್ದಿದ್ದಾರೆ.

ಪ್ರಸಾದ್ ಗಾಗಿ ಬಿಜೆಪಿ, ಜೆಡಿಎಸ್‌ ಯತ್ನ

ರಾಜಿನಾಮೆ ನೀಡಲಿರುವ ಶ್ರೀನಿವಾಸ ಪ್ರಸಾದ್ ಅವರನ್ನು ಸೆಳೆಯಲು ಬಿಜೆಪಿ, ಜೆಡಿಎಸ್‌ ಹಾಗೂ ಬಿಎಸ್‌ಪಿ ಮುಂದಾಗಿವೆ.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಈಗಾಗಲೇ ಶ್ರೀನಿವಾಸ ಪ್ರಸಾದ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪಕ್ಷಕ್ಕೆ ಬರುವಂತೆ ಆಮಂತ್ರಣ ನೀಡಿದ್ದಾರೆ.

ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಶ್ರೀನಿವಾಸ ಪ್ರಸಾದ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸುವುದಾಗಿ ಹೇಳಿದ್ದಾರೆ.

ಭಾನುವಾರ ಮಧ್ಯಾಹ್ನ ಪ್ರಸಾದ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಘಟಕದ ಎಸ್ಸಿ ಮೋರ್ಚಾ ಅಧ್ಯಕ್ಷ ಡಿ.ಎಸ್‌.ವೀರಯ್ಯ, ಬಿಎಸ್ಪಿ ರಾಜ್ಯ ಘಟಕದ ಮುಖಂಡರಾದ ಮಹೇಶ್‌ ಅವರು ತಮ್ಮ ಪಕ್ಷಕ್ಕೆ ಬರುವಂತೆ ಆಮಂತ್ರಣ ನೀಡಿದರು. ಈ ಮಧ್ಯೆ, ಪ್ರಸಾದ್‌ ಅವರ ಮನವೊಲಿಸಲು ಕಾಂಗ್ರೆಸ್‌ ಮುಖಂಡರು ತೆರೆಮರೆಯ ಯತ್ನ ನಡೆಸಿದ್ದಾರೆ.

* ಎಲ್ಲಾ ಪಕ್ಷದಲ್ಲಿಯೂ ಸ್ನೇಹಿತರಿದ್ದಾರೆ. ವಿವಿಧ ಪಕ್ಷಗಳ ಮುಖಂಡರು ಭೇಟಿ ಮಾಡಿ ಮಾತನಾಡಿದ್ದಾರೆ. ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇನೆ

–ವಿ. ಶ್ರೀನಿವಾಸ ಪ್ರಸಾದ್‌
ನಂಜನಗೂಡು ಶಾಸಕ

Comments are closed.