ನವದೆಹಲಿ: ಒಮ್ಮೆಗೆ ಮೂರು ತಲಾಖ್ ಹೇಳಿ ವಿಚ್ಛೇದನ ಪಡೆಯುವ ಮುಸ್ಲಿಂ ಸಮುದಾಯದಲ್ಲಿರುವ ಪದ್ಧತಿ ಬಗ್ಗೆ ತೀವ್ರ ಚರ್ಚೆ ಆರಂಭವಾಗಿದೆ. ವೈಯಕ್ತಿಕ ಕಾನೂನಿನ ವಿರುದ್ಧ ಸರ್ಕಾರ ‘ಸಮರ’ ಸಾರಿದೆ ಎಂದು ಕೆಲವು ಮುಸ್ಲಿಂ ಸಂಘಟನೆಗಳು ಆರೋಪಿಸಿವೆ. ಆದರೆ ವಿವಿಧ ಪಕ್ಷಗಳ ಕೆಲವು ನಾಯಕಿಯರು ಈ ಪದ್ಧತಿ ನಿರ್ಮೂಲನವಾಗುವುದೇ ಒಳ್ಳೆಯದು ಎಂದಿದ್ದಾರೆ.
ಒಮ್ಮೆಗೆ ಮೂರು ತಲಾಖ್ ಹೇಳುವ ಪದ್ಧತಿ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದ ಬಗ್ಗೆ ಯಾರೂ ನೇರವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಒಮ್ಮೆಗೆ ಮೂರು ತಲಾಖ್ ಮೂಲಕ ವಿಚ್ಛೇದನ ಪಡೆಯುವ ಪದ್ಧತಿಯನ್ನು ಟೀಕಿಸಿದ್ದಾರೆ.
ಮಣಿಪುರ ರಾಜ್ಯಪಾಲೆಯಾಗಿರುವ ನಜ್ಮಾ ಹೆಫ್ತುಲ್ಲಾ ಅವರು ಕೇಂದ್ರದ ನಿಲುವಿನ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ, ಮೂರು ತಲಾಖ್‌ಗೆ ಇಸ್ಲಾಂನಲ್ಲಿ ಇಲ್ಲದ ವ್ಯಾಖ್ಯಾನ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸಿಪಿಎಂ ನಾಯಕಿ ಸುಭಾಷಿಣಿ ಅಲಿ ಅವರು ಮೂರು ತಲಾಖ್, ಬಹುಪತ್ನಿತ್ವವನ್ನು ವಿರೋಧಿಸಿದ್ದು ಅವುಗಳನ್ನು ನಿಷೇಧಿಸಬೇಕು ಎಂದಿದ್ದಾರೆ.
ಒಮ್ಮೆಗೆ ಮೂರು ತಲಾಖ್ ನೀಡಿ ವಿಚ್ಛೇದನ, ಬಹುಪತ್ನಿತ್ವದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಕೇಂದ್ರ ನೀಡಿರುವ ಪ್ರಮಾಣಪತ್ರವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ವಿರೋಧಿಸಿದೆ. ಕಾನೂನು ಆಯೋಗವು ಆರಂಭಿಸಿರುವ ಅಭಿಪ್ರಾಯ ಸಂಗ್ರಹವನ್ನು ಬಹಿಷ್ಕರಿಸುವುದುದಾಗಿ ಎಐಎಂಪಿಎಲ್‌ಬಿ ಮತ್ತು ಇತರ ಕೆಲವು ಮುಸ್ಲಿಂ ಸಂಘಟನೆಗಳು ಹೇಳಿವೆ. ಗಂಡು ಏಕಪಕ್ಷೀಯವಾಗಿ ಒಮ್ಮೆಗೆ ಮೂರು ತಲಾಖ್ ಹೇಳಿ ವಿಚ್ಛೇದನ ಪಡೆಯುವುದು ಸರಿಯಾದ ಕ್ರಮ ಅಲ್ಲ ಎಂದಿರುವ ಸುಭಾಷಿಣಿ ಅವರು, ಮೌಲ್ವಿಗಳು ತಮ್ಮ ಧೋರಣೆ ಬದಲಿಸಿಕೊಳ್ಳಬೇಕು ಎಂದಿದ್ದಾರೆ.
ಒಮ್ಮೆಗೆ ಮೂರು ತಲಾಖ್ ಹೇಳುವ ಪದ್ಧತಿಯನ್ನು ನಿಷೇಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಶಬ್ನಂ ಹಾಶ್ಮಿ ಅವರು ನೇರವಾಗಿ ಹೇಳಿದ್ದಾರೆ.
ತ್ರಿವಳಿ ತಲಾಖ್‌ನ ವಿಚಾರವನ್ನು ಸುಪ್ರೀಂ ಕೋರ್ಟ್‌ನ ತೀರ್ಮಾನಕ್ಕೆ ಬಿಡಬೇಕು ಎಂದು ಕಾಂಗ್ರೆಸ್ ವಕ್ತಾರೆ ಶೋಭಾ ಓಜಾ ಹೇಳುತ್ತಾರೆ. ಆದರೆ ಏಕರೂಪ ನಾಗರಿಕ ಸಂಹಿತೆಗೆ ಅವರು ವಿರೋಧ ವ್ಯಕ್ತಪಡಿಸುತ್ತಾರೆ.
ಕಾಂಗ್ರೆಸ್ ಸೇರಿದ ಒಬೈದುಲ್ಲಾ ಅಜ್ಮಿ: ತ್ರಿವಳಿ ತಲಾಖ್ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ‘ಷಾ ಬಾನು’ ಪ್ರಕರಣದಲ್ಲಿ ಭಾರಿ ಚರ್ಚೆಗೆ ಕಾರಣರಾಗಿದ್ದ ಇಸ್ಲಾಂ ವಿದ್ವಾಂಸ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಒಬೈದುಲ್ಲಾ ಅಜಂ ಅವರನ್ನು ಕಾಂಗ್ರೆಸ್ ಮತ್ತೆ ಪಕ್ಷಕ್ಷೆ ಸೇರ್ಪಡೆಗೊಳಿಸಿದೆ. ಷಾ ಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ತೀಕ್ಷ್ಣ ಮಾತುಗಳಲ್ಲಿ ವಿರೋಧಿಸಿದ್ದ ಅಜಂ ಅವರು ಕೇಂದ್ರ ಸರ್ಕಾರದ ಒಮ್ಮೆಗೆ ತ್ರಿವಳಿ ತಲಾಖ್ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ಹೇಳಿದ್ದರು.
ಉತ್ತರಪ್ರದೇಶ ಚುನಾವಣೆ ಉಸ್ತುವಾರಿ ಹೊತ್ತಿರುವ ಗುಲಾಂ ನಬಿ ಆಜಾದ್ ಅವರು ಅಜಂ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಮಾತಿನಲ್ಲೇ ಬೆಂಕಿಯುಗುಳುವ ಅಜಂ ಅವರ ನೇಮಕದ ಮೂಲಕ ತಲಾಖ್ ಬಗೆಗಿನ ಕೇಂದ್ರದ ನಿಲುವಿನ ವಿರುದ್ಧ ಹೋರಾಟ ತೀವ್ರಗೊಳಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ.
ಸರ್ಕಾರದ ನಿಲುವು ಸ್ಪಷ್ಟ: ಜೇಟ್ಲಿ
ವೈಯಕ್ತಿಕ ಕಾನೂನುಗಳು ಸಂವಿಧಾನಕ್ಕೆ ಅನುಗುಣವಾಗಿರಬೇಕು ಮತ್ತು ಲಿಂಗ ಸಮಾನತೆ ಹಾಗೂ ಘನತೆಯಿಂದ ಬದುಕುವ ಹಕ್ಕಿಗೆ ಪೂರಕವಾಗಿರಬೇಕು ಎಂಬುದು ಸರ್ಕಾರದ ಸ್ಪಷ್ಟ ನಿಲುವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
‘ತ್ರಿವಳಿ ತಲಾಖ್ ಮತ್ತು ಸರ್ಕಾರದ ಪ್ರಮಾಣಪತ್ರ’ ಎಂಬ ಶೀರ್ಷಿಕೆಯಲ್ಲಿ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಜೇಟ್ಲಿ ಪ್ರಕಟಿಸಿದ್ದಾರೆ. ವೈಯಕ್ತಿಕ ಕಾನೂನುಗಳು ಮೂಲಭೂತ ಹಕ್ಕುಗಳಿಗೆ ಅನುಗುಣವಾಗಿರಬೇಕು ಎಂಬ ಬಗ್ಗೆ ಹಿಂದಿನ ಸರ್ಕಾರಗಳು ಸ್ಪಷ್ಟವಾದ ನಿಲುವು ತಳೆಯಲು ಹಿಂಜರಿದಿವೆ. ಆದರೆ ಈಗಿನ ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿದೆ ಎಂದು ಅವರು ಹೇಳಿದ್ದಾರೆ.
* ಒಮ್ಮೆಗೆ ಮೂರು ತಲಾಖ್ ಹೇಳುವುದು ಇಸ್ಲಾಂನಲ್ಲಿ ಇಲ್ಲವೇ ಇಲ್ಲ. ಯಾವುದೇ ಧರ್ಮ ಅಥವಾ ಧರ್ಮ ಗ್ರಂಥ ಲಿಂಗ ಅಸಮಾನತೆಯನ್ನು ಪ್ರತಿಪಾದಿಸವುದಿಲ್ಲ.
-ಶಬ್ನಂ ಹಾಶ್ಮಿ, ಸಾಮಾಜಿಕ ಕಾರ್ಯಕರ್ತೆ
* ಒಮ್ಮೆಗೆ ಮೂರು ತಲಾಖ್ ಮೂಲಕ ವಿಚ್ಛೇದನ ಪಡೆಯುವವರು ಇಸ್ಲಾಮನ್ನು ಸರಿಯಾಗಿ ವ್ಯಾಖ್ಯಾನಿಸುತ್ತಿಲ್ಲ. ಧರ್ಮಕ್ಕೆ ಕೆಟ್ಟ ಹೆಸರು ತರಲು ಇಂಥವರಿಗೆ ಯಾವ ಹಕ್ಕೂ ಇಲ್ಲ.
-ನಜ್ಮಾ ಹೆಫ್ತುಲ್ಲಾ, ಮಣಿಪುರ ರಾಜ್ಯಪಾಲೆ
Comments are closed.