ಪಣಜಿ: ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳು ಮತ್ತು ಶಸ್ತ್ರಾಸ್ತ್ರಗಳ ಮಾರಾಟ ಸಂಬಂಧ ಯಾವುದೇ ಒಪ್ಪಂದಕ್ಕೆ ಸಹಿ ಮಾಡುತ್ತಿಲ್ಲ ಮತ್ತು ಮುಂದಿನ ದಿನಗಳಲ್ಲಿ ಮಾರಾಟ ಮಾಡುವ ಯೋಜನೆಗಳಿಲ್ಲ ಎಂದು ರಷ್ಯಾ ಭಾನುವಾರ ಸ್ಪಷ್ಟಪಡಿಸಿದೆ.
ಆತ್ಯಾಧುನಿಕ ಯುದ್ಧ ವಿಮಾನ ಸೇರಿದಂತೆ ಪಾಕಿಸ್ತಾನಕ್ಕೆ ಯಾವುದೇ ವಿಧದ ಯುದ್ಧ ವಿಮಾನಗಳನ್ನು ಪೂರೈಸುತ್ತಿಲ್ಲ. ಪಾಕ್ಗೆ ಹೆಲಿಕಾಪ್ಟರ್ಗಳನ್ನು ಮಾತ್ರ ಮಾರಾಟ ಮಾಡಿದ್ದೇವೆ. ಈ ಹೆಲಿಕಾಪ್ಟರ್ಗಳು ಯುದ್ಧದಲ್ಲಿ ಭಾಗವಹಿಸುವ ಸಾಮರ್ಥ್ಯ ಹೊಂದಿಲ್ಲ, ಅವು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಮಾತ್ರ ಹೊಂದಿವೆ. ಮುಂದಿನ ದಿನಗಳಲ್ಲಿ ಯುದ್ಧ ವಿಮಾನ ಮಾರಾಟ ಸಂಬಂಧ ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವ ಯೋಜನೆಗಳಿಲ್ಲ ಎಂದು ರೋಸ್ಟೆಕ್ ಕಾರ್ಪೆರೇಷನ್ನ ಸಿಇಒ ಸೆರ್ಜಿ ಚೆಮಿಜೋವ್ ಅವರು ತಿಳಿಸಿದ್ದಾರೆ.
ಇದೇ ವೇಳೆ ಕಳೆದ ತಿಂಗಳು ಪಾಕಿಸ್ತಾನ ಮತ್ತು ರಷ್ಯಾ ನಡೆಸಿದ ಜಂಟಿ ಸಮರಾಭ್ಯಾಸ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ನೈಪುಣ್ಯತೆ ಸಾಧಿಸುವ ಉದ್ದೇಶದಿಂದ ಮಾತ್ರ ಆಯೋಜಿಸಲಾಗಿತ್ತು. ಐಸಿಸ್ನಂತಹ ಉಗ್ರ ಸಂಘಟನೆಗಳ ವಿರುದ್ಧ ಹೋರಾಡಲು ಪಾಕ್ ಸೇನೆಗೆ ತರಬೇತಿ ನೀಡಿದ್ದೇವೆ. ಭಾರತದ ವಿರುದ್ಧ ಪಾಕ್ ಸೇನೆ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತಹ ಯಾವುದೇ ತರಬೇತಿಯನ್ನು ನೀಡಿಲ್ಲ ಎಂದು ಚೆಮಿಜೋವ್ ಅವರು ಸ್ಪಷ್ಟಪಡಿಸಿದ್ದಾರೆ.