ಬಾಗಲಕೋಟೆ: ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ ಗಂಡನಿಗೆ ವಿಷ ಉಣಿಸಿ, ಕತ್ತು ಹಿಸುಕಿ ಕೊಲೆಗೈದ ನೀಚ ಪತ್ನಿ. ಮನೆಹಾಳು ಕೆಲಸಕ್ಕೆ ಸ್ನೇಹಿತೆಯ ಸಾಥ್. ಹೆಂಡತಿ ಹಾಗೂ ಆಕೆಯ ಸ್ನೇಹಿತೆಯ ಮಸಲತ್ತಿಗೆ ಕೊಲೆಯಾದ ಮುಗ್ಧ ಗಂಡ. ಅಂದಹಾಗೆ ಇಂತಹ ವಿಚಿತ್ರ ಘಟನೆ ನೆಡೆದಿರುವುದು ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ.
ಪತ್ನಿಯ ನೀಚ ಕೆಲಸಕ್ಕೆ ವಿವೇಕ್ ಮೆಹರ್ವಾಡೆ(42) ಕೊಲೆಯಾಗಿದ್ದಾರೆ. ಶುಕ್ರವಾರ ರಾತ್ರಿ ಪತ್ನಿ ತನ್ನ ಸ್ನೇಹಿತೆ ಜೊತೆ ಪತಿಯನ್ನು ಕೊಲೆ ಮಾಡಿದ್ದು ಮುಧೋಳ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ದಾವಣಗೆರೆ ಮೂಲದ ವಿವೇಕ್ ಮತ್ತು ಶಿಲ್ಪಾ 12 ವರ್ಷದ ಹಿಂದೆ ಮದುವೆಯಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಗರದಲ್ಲಿ ಆಯಿಲ್ ಅಂಗಡಿ ಇಟ್ಟುಕೊಂಡು ವಿವೇಕ್ ಜೀವನ ಸಾಗಿಸುತ್ತಿದ್ದರು. ಪತ್ನಿ ಶಿಲ್ಪಾ ಎಂಕಾಂ ಪದವಿಧರೆಯಾಗಿದ್ದು ವಿವೇಕ್ ಬೇರೆ ಕಡೆ ಹೋಗಿದ್ದ ಸಮಯದಲ್ಲಿ ಅಂಗಡಿಯಲ್ಲಿ ಕುಳಿತುಕೊಂಡು ವ್ಯವಹಾರ ನೋಡಿಕೊಳ್ಳುತ್ತಿದ್ದಳು.
ಸ್ನೇಹಿತೆಯ ಪರಿಚಯ: ಶಿಲ್ಪಾಗೆ ಅದೇ ಪ್ರದೇಶದಲ್ಲಿ ವಾಸವಾಗಿದ್ದ ಗಂಗಾಳ ಪರಿಚಯವಾಗುತ್ತದೆ. ಇವರಿಬ್ಬರ ಸಂಬಂಧ ಎಷ್ಟು ಅನ್ಯೋನ್ಯವಾಗಿತ್ತು ಎಂದರೆ ಕಳೆದ 4 ವರ್ಷಗಳಿಂದ ಗಂಗಾ ಶಿಲ್ಪಾ ಮನೆಯಲ್ಲೇ ವಾಸವಾಗಿದ್ದುಕೊಂಡು ಆಕೆಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದ್ದಳು.
ಡೌಟ್ ಆರಂಭ: ಶಿಲ್ಪಾ ಅಂಗಡಿಯಲ್ಲಿ ಒಬ್ಬಳೇ ಕುಳಿತುಕೊಂಡಿದ್ದಾಗ ಹಲವು ಪುರುಷರು ಬರುತ್ತಿರುವುದನ್ನು ಅನುಮಾನಗೊಂಡ ಸಮೀಪದ ಅಂಗಡಿ ಮಾಲೀಕರು ವಿವೇಕ್‍ಗೆ ಈ ವಿಚಾರವನ್ನು ತಿಳಿಸಿ ಆಕೆಗೆ ಬುದ್ಧಿ ಹೇಳುವಂತೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಶಿಲ್ಪಾಳ ನಡತೆ ಸರಿ ಇಲ್ಲ ಎನ್ನುವುದು ವಿವೇಕ್ ಗೊತ್ತಾಗಿ ಮನೆಯಲ್ಲಿ ಕ್ಯಾತೆ ತೆಗೆದಿದ್ದಾರೆ. ಈ ವಿಚಾರವಾಗಿ ಇವರಿಬ್ಬರ ನಡುವೆ ಜಗಳ ಆರಂಭವಾಗತೊಡಗಿತು.
ಮಧ್ಯರಾತ್ರಿ ವ್ಯವಹಾರ: ಪತ್ನಿಯ ಈ ನಡತೆಯಿಂದ ವಿವೇಕ್ ಜರ್ಜರಿತಗೊಂಡಿದ್ದರು. ಶಿಲ್ಪಾಳ ಪರ ಪುರುಷರ ಸಂಘ ಹೇಗಿತ್ತು ಎಂದರೆ ಪತಿ ಇದ್ದರೂ ಮಧ್ಯರಾತ್ರಿ ಮನೆಗೆ ಪುರುಷರು ಪ್ರವೇಶ ಮಾಡುತ್ತಿದ್ದರು. ಈ ವಿಚಾರದಲ್ಲಿ ದಂಪತಿ ಮಧ್ಯೆ ಸಾಕಷ್ಟು ಕಿತ್ತಾಟ ನಡೆಯುತ್ತಲೇ ಇತ್ತು.
ಮುಹೂರ್ತ ಫಿಕ್ಸ್: ತನ್ನ ಎಲ್ಲ ಕೆಲಸಕ್ಕೆ ಅಡ್ಡ ಬರುತ್ತಿರುವ ಹಿನ್ನೆಲೆಯಲ್ಲಿ ಶಿಲ್ಪಾ ವಿವೇಕ್ ಅವರನ್ನು ಹತ್ಯೆ ಮಾಡಲು ಸ್ಕೆಚ್ ರೂಪಿಸಿದಳು. ಅದರಂತೆ ಶುಕ್ರವಾರ ರಾತ್ರಿ ಸ್ನೇಹಿತೆ ಗಂಗಾಳ ಸಹಾಯ ಪಡೆದು ಊಟದಲ್ಲಿ ವಿಷ ಪ್ರಾಶನ ಮಾಡಿಸಿ ನಂತರ ಪತಿಯ ಕುತ್ತಿಗೆಗೆ ವೇಲ್‍ನಿಂದ ಬಿಗಿದು ಕೊಲೆಮಾಡಿದ್ದಾರೆ. ಮೃತ ದೇಹವನ್ನು ಹೂಳಿದರೆ ಮತ್ತು ಮನೆಯಲ್ಲೇ ಸುಟ್ಟರೆ ನೆರೆಮನೆಯವರಿಗೆ ಶಬ್ಧದಿಂದ ತಿಳಿಯುತ್ತದೆ ಎನ್ನುವದನ್ನು ಮನಗೊಂಡ ಕೊಲೆಗಾರ್ತಿಯರು ವಿವೇಕ್ ಶವನ್ನು ಮುಧೋಳ ಹೊರ ವಲಯದದಲ್ಲಿರುವ ಮುಕ್ತಧಾಮ ಸ್ಮಶನಕ್ಕೆ ಮೂಟೆಕಟ್ಟಿ ಹೊತ್ತುಕೊಂಡು ಸುಡಲು ತಂದಿದ್ದಾರೆ.
ಸಂಶಯವೇ ನಿಜವಾಯ್ತು: ಮಧ್ಯರಾತ್ರಿ ಮಹಿಳೆಯರಿಬ್ಬರು ಅತುರತುರವಾಗಿ ಶವವನ್ನು ಸುಡಲು ಮುಂದಾಗುತ್ತಿರುವುದನ್ನು ನೋಡಿದ ಮುಕ್ತಿಧಾಮದ ಸಿಬ್ಬಂದಿ ಏಕನಾಥ್ ಅವರಿಗೆ ಸಂಶಯ ಬಂದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯಿಂದ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ವಿವೇಕ್ ಕೊಲೆಯ ರಹಸ್ಯ ಬಯಲಾಗಿದೆ.