ಕರ್ನಾಟಕ

ಈ ವರ್ಷ 40 ದಲಿತ ವಸತಿ ಶಾಲೆ: ಆಂಜನೇಯ

Pinterest LinkedIn Tumblr

H-Anjaneyaಬೆಂಗಳೂರು, ಅ. ೧೫- ಈ ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಈ ವರ್ಷ 40 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಹೆಚ್. ಆಂಜನೇಯ ಅವರು ಇಂದಿಲ್ಲಿ ತಿಳಿಸಿದರು.
ವಿಧಾನಸೌಧದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸತಿ ಶಾಲೆಗಳನ್ನು ನಿರ್ಮಿಸಲು ನಿವೇಶನಗಳನ್ನು ಗುರುತಿಸಲಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಾಲ್ಮೀಕಿ ಭವನಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ 300 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು ಎಂದರು.
ಚಿತ್ರದುರ್ಗದಲ್ಲಿ ಭವ್ಯವಾದ ವಾಲ್ಮೀಕಿ ಭವನವನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಈ ಸಮುದಾಯದ ಬೇಡಿಕೆಯಂತೆ ಶಾಸಕರ ಭವನದ ಎದುರಿಗಿರುವ ವಾಲ್ಮೀಕಿ ತಪೋವನದಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಅದೇ ರೀತಿ ವಾಲ್ಮೀಕಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲು 10 ಎಕರೆ ಜಮೀನನ್ನು ಗುರುತಿಸಲಾಗಿದೆ ಎಂದರು.
ಪರಿಶಿಷ್ಟ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸುವ ಕ್ರಾಂತಿಕಾರಕ ಕಾಯ್ದೆಯೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿ, ಜನಾಂಗದ ಅಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ನ್ನು ಉದ್ಘಾಟಿಸಿದರು. ಈ ಸಮುದಾಯಗಳ ಅಭಿವೃದ್ಧಿಗಾಗಿ ರೂಪಿಸಿರುವ 2016-17ನೇ ಕ್ರಿಯಾ ಯೋಜನೆಯ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಸ್ವಸಹಾಯ ಗುಂಪುಗಳ ಫಲಾನುಭವಿಗಳಿಗೆ ಸಹಾಯ ಧನದ ಚೆಕ್ ವಿತರಣೆ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್‌ಗಳನ್ನು ವಿತರಿಸಿದರು.

Comments are closed.