
ಮಡಿಕೇರಿ: ಆಯುಧ ಪೂಜೆ ಹಿನ್ನೆಲೆಯಲ್ಲಿ ಬೇಗನೆ ತೊಳೆದುಕೊಡು ಎಂದು ಒತ್ತಾಯಿಸಿದ್ದಕ್ಕೆ ಸರ್ವಿಸ್ ಸ್ಟೇಷನ್ ಮಾಲೀಕ ಕಾರು ಮಾಲೀಕನ ಮೇಲೆ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ನಡೆದಿದೆ.
ಟಿಂಬರ್ ವ್ಯಾಪಾರಿ ಶೇಖರ್(45)ಕೊಲೆಯಾದ ವ್ಯಕ್ತಿ. ಗುಂಡುರಾವ್ ಬಡಾವಣೆ ನಿವಾಸಿಯಾದ ಶೇಖರ್ ಇಂದು ಬೆಳಗ್ಗೆ 10 ಗಂಟೆಗೆ ತಮ್ಮ ಮಹೀಂದ್ರಾ ಟಿಯುವಿ ಕಾರನ್ನು ತೊಳೆಯಲೆಂದು ಅಬ್ದುಲ್ ನಡೆಸುತ್ತಿದ್ದ ಸರ್ವಿಸ್ ಸ್ಟೇಷನ್ಗೆ ಬಿಟ್ಟು ಹೋಗಿದ್ದರು. ಕಾರನ್ನು ಮತ್ತೆ ತೆಗೆದುಕೊಂಡು ಹೋಗಲು ಎರಡು ಬಾರಿ ಶೇಖರ್ ಬಂದಾಗಲೂ ಕಾರು ತೊಳೆದಿರಲಿಲ್ಲ.
ಮೂರನೇ ಬಾರಿ ಬಂದಾಗ ಬೇರೆ ಕಾರನ್ನು ತೊಳೆಯುತ್ತಿದ್ದನ್ನು ಪ್ರಶ್ನಿಸಿ ಶೇಖರ್ ಸರ್ವಿಸ್ ಸೆಂಟರ್ನಲ್ಲಿದ್ದ ಕೆಲಸಗಾರರ ಜೊತೆ ಗಲಾಟೆ ನಡೆಸಿದ್ದಾರೆ. ಕೆಲಸಗಾರರು ಈ ವಿಚಾರವನ್ನು ಮಾಲೀಕ ಅಬ್ದುಲ್ಗೆ ತಿಳಿಸಿದ್ದಾರೆ. ಸರ್ವಿಸ್ ಸೆಂಟರ್ಗೆ ಬಂದ ಬಳಿಕ ಅಬ್ದುಲ್ ಮತ್ತು ಶೇಖರ್ ಜೊತೆ ಜೋರಾಗಿ ಜಗಳ ನಡೆದಿದೆ. ಸಿಟ್ಟಾದ ಅಬ್ದುಲ್ ಪತ್ನಿ ಶಾಜಿದಾಗೆ ಕರೆ ಮಾಡಿ ರಿವಾಲ್ವರ್ ತರುವಂತೆ ಹೇಳಿದ್ದಾನೆ. ಪತಿಯ ಸೂಚನೆಯಂತೆ ಶಾಜಿದಾ ರಿವಾಲ್ವರ್ ತಂದು ಕೊಟ್ಟಿದ್ದಾಳೆ. ರಿವಾಲ್ವರ್ ಸಿಕ್ಕಿದ ಕೂಡಲೇ ಅಬ್ದುಲ್ ಶೇಖರ್ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದಾನೆ. ಶೇಖರ್ ಮೇಲೆ ಅಲ್ಲದೇ ಇಬ್ಬರ ಜಗಳ ಬಿಡಿಸಲು ಪ್ರಯತ್ನಿಸುತ್ತಿದ್ದ ಸೈಯದ್ ನೇಮದ್ ಮತ್ತು ಶೇಖರ್ ಅವರ ಮಗ ಧನುಷ್ ಮೇಲೆಯೂ ಜಗಳ ಬಿಡಿಸಲು
ಘಟನೆ ನಡೆದ ಕೂಡಲೇ ಶೇಖರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ವಿಚಾರ ತಿಳಿದು ಶೇಖರ್ ಕಡೆಯವರು ಅಬ್ದುಲ್ ನಡೆಸುತ್ತಿದ್ದ ಸರ್ವಿಸ್ ಸ್ಟೇಷನ್, ಮನೆ ಮತ್ತು ವಾಹನದ ಮೇಲೆ ಬೆಂಕಿ ಹಾಕಿದ್ದಾರೆ.
ಪೋಲೀಸರು ಪ್ರಕರಣದ ಸಂಬಂಧ ಅಬ್ದುಲ್ ಮತ್ತು ಆತನ ಸಹೋದರ ಅಕ್ರಂನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಅಬ್ದುಲ್ ನನಗೆ ಸಿಟ್ಟು ಸ್ವಲ್ಪ ಜಾಸ್ತಿ, ಈ ಸಿಟ್ಟಿನಲ್ಲಿ ಕೊಲೆ ಮಾಡಿದ್ದೇನೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು ಪತ್ನಿ ಶಾಜಿದಾಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Comments are closed.