ಕರ್ನಾಟಕ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌‌ನ ಸಮಾವೇಶ: ಈಶ್ವರಪ್ಪಗೆ ರಾಂಲಾಲ್ ಕಿವಿಮಾತು

Pinterest LinkedIn Tumblr

Eshwarappa-3-600ಬೆಂಗಳೂರು, ಅ. ೬- ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌‌ನ ಸಮಾವೇಶ ಸಂಘಟನೆಯ ಸಾಧಕ- ಬಾಧಕಗಳ ಕುರಿತಂತೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಹಿಂದ ಸಮಾವೇಶಗಳಿಂದ ಪಕ್ಷ ಲಾಭಕ್ಕಿಂತ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಈ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದಲೇ ಸಮಾವೇಶಗಳನ್ನು ಆಯೋಜಿಸಿ ಅದರಲ್ಲಿ ಸಕ್ರೀಯವಾಗುವಂತೆ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಈಶ್ವರಪ್ಪನವರಿಗೆ ವರಿಷ್ಠ ನಾಯಕ ರಾಮ್‌ಲಾಲ್ ಸೂಚನೆ ನೀಡಿದರು ಎಂದು ಉನ್ನತ ಮೂಲಗಳು ಹೇಳಿವೆ.

ಪಕ್ಷದ ಕಚೇರಿಯಲ್ಲಿ ಇಂದು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ನೇತೃತ್ವದಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಆಂತರಿಕ ಸಂಘರ್ಷಕ್ಕೆ ಕೊನೆ ಹಾಡುವಂತೆ ರಾಮಲಾಲ್ ನಾಯಕರುಗಳಿಗೆ ಕಿವಿಮಾತು ಹೇಳಿದ್ದಾರೆ.

ಎರಡು ದಿನದ ಹಿಂದೆ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಪಕ್ಷದ ನಾಯಕರು ಬಹಿರಂಗವಾಗಿ ಪಕ್ಷದ ನಾಯಕತ್ವದ ಬಗ್ಗೆ ಮಾತನಾ‌ಡದಂತೆ ಖಡಕ್ ಸೂಚನೆ ನೀಡಿದ್ದ ಬೆನ್ನಲ್ಲೇ ರಾಮಲಾಲ್‌ರವರು ಪಕ್ಷದ ಕೋರ್ ಕಮೀಟಿ ಸಭೆಯಲ್ಲಿ ಆಂತರಿಕ ಸಂಘರ್ಷಕ್ಕೆ ಕೊನೆ ಹಾಡುವಂತೆ ನಾಯಕರುಗಳಿಗೆ ಸೂಚನೆ ನೀ‌ಡಿದರು.

ಬಿಜೆಪಿಯಿಂದಲೇ ಸಮಾವೇಶ
ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪನವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದಿಂದ ಪಕ್ಷಕ್ಕೆ ಲಾಭವಾಗಬೇಕು. ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವ ಸಮಾವೇಶಗಳು ಬೇಡ. ಹಾಗಾಗಿ ಇನ್ನು ಮುಂದೆ ಸಮಾವೇಶಗಳನ್ನು ಪಕ್ಷದಿಂದಲೇ ನಡೆಸಬೇಕು ಎಂಬ ಹಿತವಚನವನ್ನು ರಾಮಲಾಲ್ ಈಶ್ವರಪ್ಪನವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವ ವಾತಾವರಣ ಇದೆ. ಅದನ್ನು ಹಾಳು ಮಾಡುವುದು ಬೇಡ. ಎಲ್ಲ ನಾಯಕರು ಪರಸ್ಪರ ಹೊಂದಿಕೊಂಡು ಹೋಗಿ ಎಂದು ರಾಮಲಾಲ್ ಸಲಹೆ ಮಾಡಿದ್ದಾರೆ.

ಕೋರ್ ಕಮಿಟಿಯ ತೀರ್ಮಾನಗಳಿಂದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಸಮಾವೇಶಗಳು ರದ್ದಾಗುವ ಸಾಧ್ಯತೆಗಳಿವೆ.

ಕಾರ್ಯಕ್ರಮಗಳು
ಪಕ್ಷದ ಸಂಘಟನೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವರ್ಗದವರನ್ನು ಸೆಳೆಯುವ ಸಮಾವೇಶಗಳನ್ನು ನಡೆಸುವ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

ಬಿಜೆಪಿ ರಾಜ್ಯ ಉಸ್ತುವಾರಿ ನೋಡಿಕೊಳ್ಳುವ ರಾಷ್ಟ್ರೀಯ ಕಾರ್ಯದರ್ಶಿ ಮುರಳಿಧರರಾವ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕರುಗಳಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಕೇಂದ್ರ ಸಚಿವರುಗಳಾದ ಅನಂತ್ ಕುಮಾರ್, ಡಿ.ವಿ. ಸದಾನಂದಗೌಡ, ಸಂಸದ ಪ್ರಹ್ಲಾದ್ ಜೋಷಿ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಅರವಿಂದ ಲಿಂಬಾವಳಿ, ಆರ್.ಎಸ್. ಮುಖಂಡರಾದ ಅರುಣ್ ಕುಮಾರ್, ಸಂತೋಷ್ ಇವರುಗಳು ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Comments are closed.