ಕರ್ನಾಟಕ

ಬಿಜೆಪಿಯಿಂದ ವಿಧಾನಸಭಾ ಚುನಾವಣೆ ಕುರಿತು ಕಾರ್ಯಕಾರಿಣಿ ಸಭೆಯಲ್ಲಿ ಸುದೀರ್ಘ ಚಿಂತನ-ಮಂಥನ

Pinterest LinkedIn Tumblr

BJP-logoಬೆಳಗಾವಿ, ಅ. ೩ – ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತಂತೆ ಇಲ್ಲಿ ನಡೆದ ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸುದೀರ್ಘ ಚಿಂತನ – ಮಂಥನ ನಡೆಸಲಾಯಿತು.
ಕಾರ್ಯಕಾರಿಣಿಯಲ್ಲಿ ಮಾತನಾಡಿದ ನಾಯಕರು ವಿಧಾನಸಭಾ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಿದ್ದೇ ಹೆಚ್ಚು ಜತೆಗೆ ಮಹದಾಯಿ ವಿವಾದ, ಕಾವೇರಿ ಬಿಕ್ಕಟ್ಟು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಕುರಿತಂತೆ ಚರ್ಚೆ ನಡೆಸಲಾಯಿತು.
ದೇಶದಲ್ಲಿ ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ಅಭಿವೃದ್ಧಿಯ ಗಂಗೆ ನಿರಾತಂಕವಾಗಿ ಹರಿಯುತ್ತಿದ್ದಾಳೆ. ಕರ್ನಾಟಕದಲ್ಲೂ ಈ ಕೆಲಸ ಆಗಬೇಕಾಗಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಹೇಳಿದರು.
ಬಿಜೆಪಿಯಿಂದ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಕೇಂದ್ರ ವಾಣಿಜ್ಯ ಸಚಿವ ನಿರ್ಮಲ ಸೀತಾರಾಮನ್ ಹೇಳಿದರು.
ಸಭೆಯ ಆರಂಭದಲ್ಲಿ ಪ್ರಾಸ್ತಾವಿತ ಬಹುತೇಕ ಅಂಶಗಳೂ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ವಿಶ್ಲೇಷಣೆಯನ್ನು ಬಿಂಬಿಸುವಂತಿದ್ದವು.
ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಅಧಿವೇಶನ ಕಾಲಕ್ಕೆ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದಾದ ವಿಷಯಗಳು ಯಾವುವು? ಅವುಗಳ ಸಮರ್ಥ ಬಳಕೆ ಹೇಗೆ? ಎಂಬ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಕಾವೇರಿ ಸಮಸ್ಯೆ ಮಹದಾಯಿ ನದಿ ವಿವಾದಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಶಾಸಕ ಸ್ಥಾನ ಗೆಲ್ಲುವ ಸಂಬಂಧ ಅರ್ಹರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.
ಪಾಕಿಸ್ತಾನದ ಕುಚೋದ್ಯಕ್ಕೆ ತಕ್ಕ ಕ್ರಮ ಕೈಕೊಂಡಿರುವ ಪ್ರಧಾನಿ ನರೇಂದ್ರಮೋದಿಯವರಿಗೆ ಅಭಿನಂದನೆ, ಪಕ್ಷದ ಎಂಟು ಮೋರ್ಚಾಗಳ ಕಾರ್ಯ ಚಟುವಟಿಕೆ, ಮುಂದಿನ ಯೋಜನೆಗಳ ಕುರಿತಂತೆಯೂ ಚರ್ಚೆ ಭರ್ಜರಿಯಾಗಿ ನಡೆಯಿತು.
“ರಾಬ್ರಿ” ಚರ್ಚೆ
ಸಭೆಯಲ್ಲಿ ಈ ಎಲ್ಲಕ್ಕಿಂತ ಪ್ರಮುಖವಾಗಿ ಪಕ್ಷದಲ್ಲಿ ಹೆಚ್ಚು ಗೊಂದಲಕ್ಕೆ ಕಾರಣವಾಗಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಉದ್ಭವದ ಸ್ಥಿತಿಗತಿಯ ಚರ್ಚೆ ನಡೆಯಿತು.
ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ, ಸದಾನಂದಗೌಡ, ರಮೇಶ್ ಜಿಗಜಿಣಗಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರು ಸೇರಿದಂತೆ ಮತ್ತಿತರರು ಸಭೆಯಲ್ಲಿ ಮಾತನಾಡಿದರು.

Comments are closed.