ಕರ್ನಾಟಕ

ಸುಪ್ರೀಂ ಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಅಸಮಾಧಾನ

Pinterest LinkedIn Tumblr

Siddaramaiah_0clr-715x400ಬೆಂಗಳೂರು, ಅ. ೨- ಸುಪ್ರೀಂಕೋರ್ಟ್ ಆದೇಶಕ್ಕೆ ಗೌರವ ನೀಡಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದ್ದೇವೆ. ಇನ್ನೂ ನೀರು ಬಿಡಿ ಎಂದು ಪದೇಪದೇ ಆದೇಶ ನೀಡುವ ಸುಪ್ರೀಕೋರ್ಟ್‌ಗೆ ರಾಜ್ಯದ ಸಂಕಷ್ಟದ ಪರಿಸ್ಥಿತಿ ಏಕೆ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸುಪ್ರೀಂಕೋರ್ಟ್ ಆದೇಶಕ್ಕೆ ಮನ್ನಣೆ ನೀಡಿ ತಮಿಳುನಾಡಿಗೆ 53 ಟಿಎಂಸಿ ನೀರು ಹರಿಸಿದ್ದೇವೆ. ಈಗ ನಮ್ಮಲ್ಲಿ ಉಳಿದಿರುವುದು ಕೇವಲ 23 ಟಿಎಂಸಿ. ಕುಡಿಯಲು ಸಾಕಾಗುವಷ್ಟೇ ನೀರು ಮಾತ್ರ ಇದೆ. ಇದೆಲ್ಲವನ್ನೂ ಮನವರಿಕೆ ಮಾಡಿಕೊಟ್ಟರೂ ಸುಪ್ರೀಂಕೋರ್ಟ್ ನೀರು ಬಿಡಲು ಆದೇಶವನ್ನು ಏಕೆ ನೀಡುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಗಾಂಧಿಜಯಂತಿ ಕಾರ್ಯಕ್ರಮವನ್ನು ಚರಕದಲ್ಲಿ ನೂಲು ತೆಗೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ತಮಿಳುನಾಡಿಗೆ ಸಧ್ಯದ ಪರಿಸ್ಥಿತಿಯಲ್ಲಿ ನೀರು ಬೇಕಾಗಿಯೇ ಇಲ್ಲ. ಸಾಂಬಾ ಬೆಳೆಗೆ ನೀರು ಸಂಗ್ರಹದಲ್ಲಿಟ್ಟುಕೊಳ್ಳಲು ಕಾವೇರಿ ನೀರು ಬಿಡುವಂತೆ ತಮಿಳುನಾಡು ನ್ಯಾಯಾಲಯದ ಮೂಲಕ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಜಲಾಶಯಗಳಲ್ಲಿ ಮಳೆ ಕೊರತೆ ಎದುರಾಗಿದೆ. ಈ ಬಾರಿ ಶೇ. 45 ರಷ್ಟು ಮಳೆ ಬಾರದೆ 257 ಟಿಎಂಸಿ ನೀರು ತುಂಬವ ಬದಲು ಕೇವಲ 129 ಟಿಎಂಸಿ ನೀರಷ್ಟೇ ಇದೆ ಎಂದು ಹೇಳಿದರು.
ಕಳೆದ ಒಂದೂವರೆ ತಿಂಗಳಿನಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಕಾವೇರಿ ಜಲವಿವಾದ ಚರ್ಚೆಯಾಗುತ್ತಲೆ ಇದೆ. ಕರ್ನಾಟಕ ನೀರು ಬಿಡುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುತ್ತಿಲ್ಲ. ಹಾಗಾಗಿ ವಿಲನ್ ರೀತಿ ನಡೆದುಕೊಳ್ಳುತ್ತಿದೆ ಎಂದು ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದರು.
ಅನ್ಯಾಯಕ್ಕೆ ಪದೇ ಪದೇ ಒಳಗಾದವರು ಕರ್ನಾಟಕದವರೇ ಹೊರತು ತಮಿಳುನಾಡು ಅಲ್ಲ. 1892, 1924 ರಲ್ಲಿ ಆದ ಒಪ್ಪಂದದಂತೆ ಕಾವೇರಿ ಕೊಳದಲ್ಲಿ ಇಂದೂ ಕೂಡಾ ತಕರಾರು ನಡೆಯುತ್ತಲೇ ಇದೆ. ಕೆಆರ್ಎಸ್, ಹೇಮಾವತಿ, ಕಬಿನಿ, ಹಾರಂಗಿ ಕಟ್ಟಿದವರು ನಾವು. ಕೆಆರ್ಎಸ್ ಕಟ್ಟಲು ಕೇಂದ್ರ ಒಂದು ನಯಾಪೈಸೆ ನೀಡಿಲ್ಲ. ಮಹಾರಾಜರು ಚಿನ್ನ ಅಡವಿಟ್ಟು ಅಣೆಕಟ್ಟು ಕಟ್ಟಿದರು. ರಾಜ್ಯದ ರೈತರ ಕೃಷಿ ಭೂಮಿಗೆ ನೀರಿಲ್ಲ. ಹಾಗೂ ಜನತೆಗೆ ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಅಗೌರವ ಇಲ್ಲ. ಒಕ್ಕೂಟದ ವ್ಯವಸ್ಥೆ ಬಗ್ಗೆ ನಂಬಿಕೆ ಇದೆ. ಆದರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂದ ಅವರು, ಗಾಂಧೀಜ, ಅವರ ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಿಯೇ ನ್ಯಾಯ ಪಡೆಯಬೇಕಿದೆ ಎಂದು ಹೇಳಿದರು.

Comments are closed.