ಕರ್ನಾಟಕ

8 ಲಕ್ಷ ಬೋಗಸ್ ರೇಷನ್ ಕಾರ್ಡ್ ರದ್ದು

Pinterest LinkedIn Tumblr

Apl_ration_card

ಬೆಂಗಳೂರು, ಅ. ೨ – ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದ ಹಿನ್ನೆಲೆಯಲ್ಲಿ 8 ಲಕ್ಷದಷ್ಟು ಬೋಗಸ್ ಪಡಿತರ ಚೀಟಿಯನ್ನು ರದ್ದು ಮಾಡಲಾಗಿದೆ. ಇನ್ನು 1 ಲಕ್ಷದಷ್ಟು ನಕಲಿ ಪಡಿತರ ಚೀಟಿಯನ್ನು ರದ್ದು ಮಾಡುವ ಸಾಧ್ಯತೆಗಳಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದನ್ ಹೇಳಿದ್ದಾರೆ.
ನಕಲಿ ಪಡಿತರ ಚೀಟಿದಾರರನ್ನು ಪತ್ತೆಹಚ್ಚಿ ಅದಕ್ಕೆ ಕಡಿವಾಣ ಹಾಕದೇ ಸರ್ಕಾರ ಹೆಚ್ಚುವರಿಯಾಗಿ ಎಷ್ಟೇ ಆಹಾರ ಧಾನ್ಯಗಳನ್ನು ಪಡಿತರದಾರರಿಗೆ ನೀಡಿದರೂ ಅದು ಉಪಯೋಗಕ್ಕೆ ಬರುವುದಿಲ್ಲ ಇದರಿಂದಾಗಿಯೇ ಬೋಗಸ್ ಚೀಟಿಗಳನ್ನು ರದ್ದು ಮಾಡುವ ದಿಟ್ಟ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು.
ನಗರದಲ್ಲಿ ಹಮ್ಮಿಕೊಂಡಿದ್ದ ಮಾನಸ ಸಿಐ ಮತ್ತು ಆಂಟ್ ಸೆಂಟರ್‌ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 9 ಲಕ್ಷದಷ್ಟು ಬೋಗಸ್ ಪಡಿತರ ಚೀಟಿಗಳನ್ನು ರಾಜ್ಯದಾದ್ಯಂತ ರದ್ದು ಮಾಡುವುದರಿಂದ ಸರ್ಕಾರಕ್ಕೆ ನೂರಾರು ಕೋಟಿಯಷ್ಟು ಉಳಿತಾಯವಾಗಲಿದೆ. ಇದರಿಂದ ಪಡಿತರದಾರರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡಿ ಸಹಕಾರಿಯಾಗಲಿದೆ ಎಂದರು.
ಬೋಗಸ್ ಪಡಿತರ ಚೀಟಿಗಳನ್ನು ತಡೆಯುವುದರಿಂದ ಪಡಿತರ ಆಹಾರ ಧಾನ್ಯಗಳು ಕಾಳ ಸಂತೆಯಲ್ಲಿ ಮಾರಾಟವಾಗುವುದನ್ನು ತಪ್ಪಿಸಲು ಸಹಕಾರಿಯಾಗಲಿದೆ. ಪಡಿತರದಾರರು 161ಕ್ಕೆ ಕರೆ ಮಾಡಿ 4ನೇ ನಂಬರ್‌ ಒತ್ತಿದರೆ ಆಗ ನಿಮ್ಮ ಆಧಾರ್ ಸಂಖ್ಯೆಯ ನಂಬರ್ ಹಾಗೂ ನೊಂದಾಯಿತ ಮೊಬೈಲ್ ನಂಬರನ್ನು ನೊಂದಾಯಿಸಿದರೆ ಪಡಿತರ ಕೂಪನ್‌ಗಳು ಮೊಬೈಲ್‌ಗೆ ಮೆಸೇಜ್ ಮೂಲಕ ಬರಲಿದೆ. ಇದರಿಂದ ಅದನ್ನು ತೋರಿಸಿ ಆಹಾರ ಧಾನ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದರು.
ಸುಧಾರಣೆ ತರುವಾಗ ಕೆಲವೊಮ್ಮೆ ಸಮಸ್ಯೆ ಎದುರಾಗುತ್ತದೆ. 5-6 ತಿಂಗಳು ಕಳೆದ ನಂತರ ಎಲ್ಲವೂ ಸರಿಯಾಗಲಿದೆ. ಬೋಗಸ್ ಪಡಿತರ ಚೀಟಿಗಳಿಗೆ ಕಡಿವಾಣ ಹಾಕುವುದರಿಂದ ಅನೇಕರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
ನಿರ್ಗತಿಕರಿಗಾಗಿ ಕ್ಯಾಂಟಿನ್
`ಅಮ್ಮ ಕ್ಯಾಂಟಿನ್’ ಮಾದರಿಯಲ್ಲಿ ರಾಜ್ಯದಲ್ಲೂ ಕ್ಯಾಂಟಿನ್ ತೆರೆಯುವ ಯಾವುದೇ ಉದ್ದೇಶ ಸರ್ಕಾರದ ಮುಂದಿಲ್ಲ, ಆದರೆ ಬೆಂಗಳೂರಿನಲ್ಲಿ ನಿರ್ಗತಿಕರಿಗಾಗಿ ರಾತ್ರಿಯ ಸಮಯದಲ್ಲಿ ಉಚಿತವಾಗಿ ಊಟ ನೀ‌ಡುವ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದರು.
ಅಮ್ಮ ಕ್ಯಾಂಟಿನ್ ಮಾದರಿಯಲ್ಲಿ ಕ್ಯಾಂಟಿನ್ ಮಾಡಿದರೆ ಎಲ್ಲರಿಗೂ ಹಣ ಕೊಟ್ಟು ಊಟ ಮಾಡಲು ಆಗುವುದಿಲ್ಲ. ಹೀಗಾಗಿಯೇ ನಿರ್ಗತಿಕರಿಗಾಗಿ ಕ್ಯಾಂಟಿನ್ ತೆರೆಯಲು ಉದ್ದೇಶಿಸಿದ್ದು, ಇದಕ್ಕಾಗಿಯೇ ಬೆಂಗಳೂರಿನಲ್ಲಿ 150 ಕಡೆಗಳಲ್ಲಿ ಮಹಾನಗರ ಪಾಲಿಕೆ ಸ್ಥಳಗಳನ್ನು ಗುರುತಿಸಿದೆ ಎಂದು ಹೇಳಿದರು.

Comments are closed.