ಬೆಳಗಾವಿ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾಗಿರುವ ಫಾಲಿ ನಾರಿಮನ್ ಹಾಗೂ ವಕೀಲರ ತಂಡವನ್ನು ಬದಲಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಲ್ಲಿ ಆಗ್ರಹಿಸಿದ್ದಾರೆ.
ಸೋಮವಾರದಿಂದ ನಗರದ ಧರ್ಮನಾಥ ಭವನದಲ್ಲಿ ಆರಂಭವಾಗಲಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಅಗಮಿಸಿರುವ ಅವರು ರಾಣಿ ಚನ್ನಮ್ಮ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ
ಅವರು ಕಾವೇರಿ ವಿವಾದ ನಮ್ಮ ಕೈಮೀರಿ ಹೋಗುತ್ತಿದೆ. ವಿವಾದ ಬಗೆಹರಿಸಲು ಬಿಜೆಪಿ ನೀಡಿದ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ ತೊಂದರೆಯಾಗಿದೆ. ನ್ಯಾಯಪೀಠದ ಮುಂದೆ ಹೋಗಬೇಡಿ ಎಂದಿದ್ದೆವು. ನಮ್ಮ ಮಾತನ್ನು ಸರ್ಕಾರ ಕೇಳಲಿಲ್ಲ ಎಂದು ದೂರಿದರು.
ಕಾವೇರಿ ನೀರು ನಿರ್ವಹಣೆ ಮಂಡಳಿ ರಚಿಸುವುದಕ್ಕೂ ನಮ್ಮ ವಿರೋಧವಿದೆ. ಈ ಸಂಬಂಧ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರವನ್ನು ಸರ್ಕಾರಕ್ಕೆ ನೀಡಲಾಗುವುದು. ನಾಳೆ ನಡೆಯುವ ವಿಶೇಷ ಅಧಿವೇಶನದಲ್ಲಿ ಭಾಗವಹಿಸಲಾಗುವುದು ಎಂದರು.
ಸುಪ್ರೀಂ ಕೋರ್ಟ್ ನಿಂದ ನ್ಯಾಯ ಸಿಕ್ಕಿಲ್ಲ. ಹೀಗಾಗಿ ವಿರೋಧಿಸುತ್ತಿದ್ದೇವೆ. ಕಾವೇರಿಯಿಂದ ತಮಿಳುನಾಡಿಗೆ ಹನಿ ನೀರನ್ನೂ ಬಿಡಬಾರದು ಎಂದರು.
ಎರಡು ದಿನಗಳ ಕಾರ್ಯಕಾರಿಣಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡುವರು. 500ಕ್ಕೂ ಹೆಚ್ಚು ಮಂದಿ ಪಕ್ಕದ ಪದಾಧಿಕಾರಿಗಳು ಭಾಗವಹಿಸುವರು ಎಂದು ಅವರು ಹೇಳಿದರು.