ಮೈಸೂರು: ರಾಜ್ಯದಲ್ಲಿ ಕಾವೇರಿ ವಿವಾದ ಸೃಷ್ಟಿಯಾಗಿದ್ದು, ಅದು ಆದಷ್ಟು ಬೇಗನೆ ನಿವಾರಣೆಗೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡ ದೇವತಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿದರು.
ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ 2016 ದಸರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆಯು ಕಳೆದ 125 ವರ್ಷಗಳಿಂದಲೂ ಇದೆ. ಈ ಹಿಂದೆ ನೀರಿನ ಹಂಚಿಕೆ ವಿಷಯವಾಗಿ ರಾಜಮನೆತನ ಮತ್ತು ಬ್ರಿಟಿಷರ ನಡುವೆ 1922 ಹಾಗೂ 1924 ರಲ್ಲಿ ಎರಡು ಬಾರಿ ಒಪ್ಪಂದವಾಗಿತ್ತು. ಅಂದು ಬ್ರಿಟೀಷರು ಆಡಳಿತ ನಡೆಸುತ್ತಿದ್ದುದ್ದರಿಂದ ಮದರಾಸಿಗೆ ಅನುಕೂಲವಾಗುವಂತೆ ಹೆಚ್ಚಿನ ನೀರು ಹರಿಸುವಂತೆ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದವು 50 ವರ್ಷಗಳ ವರೆಗೆ ಮಾತ್ರ ಜಾರಿಯಲ್ಲಿರುವಂತೆ ಒಪ್ಪಂದದಲ್ಲಿ ಸೂಚಿಸಿದ್ದರೂ ಅದನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿರುವುದು ದುರದೃಷ್ಟಕರ ಎಂದರು.
1950 ರಲ್ಲಿ ಮಧ್ಯಂತರ ತೀರ್ಪು ಹೊರಬಿದ್ದ ಸಂದರ್ಭದಲ್ಲಿ ತಮಿಳುನಾಡಿಗೆ 250 ಟಿ.ಎಂ.ಸಿಗಳಷ್ಟು ನೀರು ಹರಿಸಬೇಕೆಂದು ಸೂಚಿಸಲಾಗಿತ್ತು. ಈ ರೀತಿ ತೀರ್ಪು ನೀಡಿರುವುದು ಇತಿಹಾಸದಲ್ಲೆ ಪ್ರಥಮ. ನಂತರ ನಡೆದ ಮತ್ತೊಂದು ವಾದ ವಿವಾದದಲ್ಲಿ 192 ಟಿ.ಎಂ.ಸಿ ಗಳಷ್ಟು ನೀರು ಹರಿಸುವಂತೆ ಸೂಚಿಸಲಾಗಿತ್ತು. ಆದರೇ ನಾವು 192 ಟಿ.ಎಂ.ಸಿ.ಗಳಿಗಿಂತಲೂ ನೀರು ಬಿಟ್ಟಿದ್ದೇವೆ ಎಂದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ಕಡಿಮೆ ಮಳೆಯಾಗಿರುವುದರಿಂದ ಈ ವ್ಯಾಪ್ತಿಯಲ್ಲಿ ಬರುವ 4 ಜಲಾಶಯಗಳಲ್ಲಿ ವಾಡಿಕೆಯಂತೆ 257 ಟಿ.ಎಂ.ಸಿ ನೀರು ಸಂಗ್ರಹವಾಗಬೇಕಿತ್ತು. ಆದರೇ ಮಳೆ ಕಡಿಮೆ ಬಿದ್ದಿರುವುದರಿಂದ 129 ಟಿ.ಎಂ.ಸಿಗಳಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಇದರಲ್ಲಿಯೇ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಇನ್ನಿತರೆ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಆಗಬೇಕಾಗಿದೆ. ಇಷ್ಟು ಕಡಿಮೆ ಪ್ರಮಾಣದ ನೀರು ಇರುವುದರಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಅವರು, ಸುಪ್ರಿಂ ಕೋರ್ಟ್ ಕಳೆದ ತಿಂಗಳು 5 ಮತ್ತು 12 ರಂದು ನೀಡಿರುವ ಆದೇಶದಂತೆ 16 ಟಿ.ಎಂ.ಸಿ.ಗಳಷ್ಟು ನೀರು ಬಿಡುಗಡೆ ಮಾಡಬೇಕಾಗಿದೆ. ಅದರಂತೆ ನೀರು ಬಿಡಲಾಗಿದೆ. ಆದರೇ ಸೆ.27 ರ ಆದೇಶವನ್ನು ಪಾಲಿಸಲಾಗಿಲ್ಲ. ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣದ ವಿವರಗಳನ್ನು ಸಲ್ಲಿಸಿದ್ದರು ಸುಪ್ರಿಂ ಕೋರ್ಟ್ ಮತ್ತೆ ನೀರು ಹರಿಸುವಂತೆ ಆದೇಶಿಸಿರುವುದು ಎಷ್ಟು ಸರಿ ಎಂದರು.
ರಾಷ್ಟ್ರೀಯ ಜಲನೀತಿಯ ಪ್ರಕಾರ ಮೊದಲ ಆಧ್ಯತೆ ಕುಡಿಯುವ ನೀರಿಗೆ ಇದೆ. ಎರಡನೇ ಆಧ್ಯತೆ ಕೃಷಿ ಚಟುವಟಿಕೆಗಳಿಗೆ ಇದೆ ಎಂದು ತಿಳಿದಿದ್ದರೂ ಸುಪ್ರಿಂ ಕೋರ್ಟ್ ಮತ್ತೆ ಇಂದಿನಿಂದ 6 ದಿನಗಳ ಕಾಲ ಪ್ರತೀ ದಿನ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ. ನೀರು ಹರಿಸುವ ಬಗ್ಗೆ ಇಂದು ಮಧ್ಯಾಹ್ನ ಸರ್ವ ಪಕ್ಷಗಳ ಸಭೆಯಲ್ಲಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದರು.
ಕಳೆದ ವರ್ಷ ಬರಗಾಲವಿದ್ದ ಕಾರಣ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಿದ್ದೆವು, ಈ ಬಾರಿ ಕಾವೇರಿ ಸಮಸ್ಯೆ ತಲೆದೋರಿರುವುದರಿಂದ ಅದೇ ರೀತಿ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾವನ್ನು ಆಚರಿಸಲಾಗುತ್ತಿದೆ. ನಾಡಿನ ನೆಲ, ಜಲ ಭಾಷೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬದ್ಧರಾಗಿರುತ್ತೇವೆ. ರಾಜ್ಯದ 6 ಕೋಟಿ ಜನತೆಯ ಆಶಯದಂತೆ ನಡೆಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಣವಿ ಅವರಿಗೆ ಪೂರ್ಣ ಕುಂಭ ಸ್ವಾಗತ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಸಚಿವರುಗಳಾದ ಎಚ್.ಸಿ ಮಹದೇವಪ್ಪ, ಎಚ್.ಎಸ್ ಮಹದೇವಪ್ರಸಾದ್, ತನ್ವೀರ್ ಸೇಠ್, ರುದ್ರಪ್ಪ ಮಲಾಣಿ, ಪ್ರಿಯಾಂಗ ಖರ್ಗೆ, ಶಾಸಕರುಗಳು ಹಾಜರಿದ್ದರು.