ಕರ್ನಾಟಕ

ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ತತ್ತರಗೊಂಡ ಜನ; ತಗ್ಗುಪ್ರದೇಶಗಳು ಜಲಾವೃತ

Pinterest LinkedIn Tumblr

pravaaha

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಹಿಂಗಾರು ಮಳೆಯ ಅಬ್ಬರಕ್ಕೆ ಜಲಪ್ರಳಯವೇ ಉಂಟಾಗಿದೆ. ಬೀದರ್, ಕಲಬುರಗಿ, ರಾಯಚೂರಿನಲ್ಲಿ ಪ್ರವಾಹದಿಂದ ಜನಜೀವನ ತತ್ತರಗೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬೀದರ್‍ನ ಬಹುತೇಕ ಸೇತುವೆಗಳು ಮುಳುಗಿದ್ದು, 4 ಕೆರೆಗಳು ಒಡೆದು ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ತಗ್ಗುಪ್ರದೇಶಗಳು ಜಲಾವೃತವಾಗಿವೆ. 4 ಕೋಟಿ ವೆಚ್ಚದಲ್ಲಿ ರಿಪೇರಿಯಾಗಿದ್ದ ಔರಾದ್‍ನ ಆಲೂರು ಬೇಲೂರು ಕೆರೆ ಕಳಪೆ ಕಾಮಗಾರಿಯಿಂದ ಒಡೆದುಹೋಗಿದೆ.

ಇತ್ತ ನಾರಾಯಣಪುರ ಡ್ಯಾಂನಿಂದ ನೀರು ಬಿಟ್ಟಿರೋದ್ರಿಂದ ರಾಯಚೂರಿನಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಲಿಂಗಸಗೂರಿನ ನಡುಗುಡ್ಡೆಯಲ್ಲಿ ನೂರಕ್ಕೂ ಹೆಚ್ಚು ಮೇಕೆಗಳು ನೀರಲ್ಲಿ ಕೊಚ್ಚಿಹೋಗಿವೆ. ಹಲವು ಸೇತುಗಳ ಜಖಂಗೊಂಡಿದ್ದು, ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಕಲಬುರಗಿಯಲ್ಲಿ ಕಳೆದ 50 ವರ್ಷದ ನಂತರ ದಾಖಲೆಯ 164 ಮಿಲಿ ಮೀಟರ್ ಮಳೆಯಾಗಿದ್ದು, ಡ್ಯಾಂಗಳೆಲ್ಲ ಭರ್ತಿಯಾಗಿ ಹಲವು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ಇನ್ನು ಕಲಬುರಗಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಸೇಡಂನ ಗರ್ಭಿಣಿ ರಾಧಿಕಾ ಎಂಬಾಕೆ ತ್ರಿವಳಿ ಮಕ್ಕಳಿಗೆ ಅಂಬುಲೆನ್ಸ್‍ನಲ್ಲಿಯೇ ಜನ್ಮ ನೀಡಿದ್ದಾರೆ. 108 ಸಿಬ್ಬಂದಿ ಸುಲಭ ಹೆರಿಗೆ ಮಾಡಿಸಿದ್ದರು. ತಾಯಿ-ಮಕ್ಕಳು ಆರೋಗ್ಯವಾಗಿದ್ದು, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಯಲ್ಲಿ ಪಡೆಯುತ್ತಿದ್ದಾರೆ. ಈ ನಡುವೆ ಅತ್ತ ಆಂಧ್ರ ಹಾಗೂ ತೆಲಂಗಾಣದಲ್ಲಿ ಮಳೆಗೆ 13 ಮಂದಿ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲೂ ರಾತ್ರಿಯಿಂದ ಮಳೆ ಸುರಿಯುತ್ತಿದೆ. ಮುಂಜಾನೆಯೂ ತುಂತುರು ವರ್ಷಧಾರೆ ಆಗುತ್ತಿದೆ.

ಜಿಲ್ಲೆಯ ಬಹುತೇಕ ಹಳ್ಳ ಕೊಳ್ಳಗಳು ಭರ್ತಿಯಾಗಿದ್ದು, ಚಿತ್ತಾಪುರ ತಾಲ್ಲೂಕಿನ ದಂಡೋತಿ ಮತ್ತು ಸೇಡಂ ತಾಲ್ಲೂಕಿನ ಮಳಖೇಡ ಸೇತುವೆಗಳು ಮತ್ತೆ ಮುಳುಗಡೆಯಾಗಿವೆ. ಚಿಂಚೋಳಿ ತಾಲ್ಲೂಕಿನ ಅಲ್ಲಾಪುರ ಕೆರೆ ನೀರಿನಿಂದ ಮುಲ್ಲಾಮಾರಿ ಹಳ್ಳದಲ್ಲಿ ಪ್ರವಾಹ ಹೆಚ್ಚಾಗಿದ್ದು, ರಟಕಲ್–ಹಂಚನಾಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಚಿತ್ತಾಪುರದ ಕೊಡ್ಲಾದಿಂದ ರಟಕಲ್‌ಗೆ ಪರೀಕ್ಷೆ ಬರೆಯಲು ಬಂದಿದ್ದ ಐವರು ವಿದ್ಯಾರ್ಥಿಗಳು ರಟಕಲ್ ರೇವಣಸಿದ್ದೇಶ್ವರ ಮಠದಲ್ಲೇ ಉಳಿದುಕೊಳ್ಳುವಂತಾಯಿತು. ಸೇಡಂ ತಾಲ್ಲೂಕಿನ ಕುರಕುಂಟಾ ಗ್ರಾಮದ ರಾಧಿಕಾ ಎಂಬವರು ಆಂಬುಲೆನ್ಸ್‌ನಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದರು. ಮಳಖೇಡ ಸೇತುವೆ ಮುಳುಗಡೆಯಾದ್ದರಿಂದ ಚಿತ್ತಾಪುರ, ರಾವೂರ ಮಾರ್ಗವಾಗಿ ಅವರನ್ನು ಕಲಬುರ್ಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಮೂರೂ ಗಂಡು ಮಕ್ಕಳಾಗಿದ್ದು, ಸುರಕ್ಷಿತವಾಗಿವೆ.

ಚಿತ್ತಾಪುರ ತಾಲ್ಲೂಕಿನ ವಾಡಿ ಸಮೀಪದ ಬಳವಡ್ಗಿ ಗ್ರಾಮವು ಮತ್ತೊಮ್ಮೆ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದು, ಜನತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಡೀ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಸ್ಥಗಿತಗೊಂಡಿದೆ.

ಆಳಂದ ತಾಲ್ಲೂಕಿನ ನರೋಣಾ ವಲಯದ ಮುಖ್ಯ ಸಂಪರ್ಕ ರಸ್ತೆಗೆ ಹೊಂದಿಕೊಂಡಿರುವ ಬೆಣ್ಣೆತೊರಾ, ಗಂಡೋರಿ ನಾಲಾ ತುಂಬಿ ಹರಿಯುತ್ತಿರುವ ಪರಿಣಾಮ ಈ ವಲಯದ 10ಕ್ಕೂ ಹೆಚ್ಚು ರಸ್ತೆಗಳ ಸಂಪರ್ಕ ಸ್ಥಗಿತಗೊಂಡಿವೆ.

ನಾಲ್ಕು ಬಾರಿ ಸ್ಥಗಿತ: ಜುಲೈ 20 ಮತ್ತು ಸೆ.15 , ಸೆ. 21 ಮತ್ತು ಸೆ. 23 ರಂದು ರಂದು ಸೇಡಂ ತಾಲ್ಲೂಕಿನ ಕಾಗಿಣಾ ನದಿಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ಮಳಖೇಡ ಸೇತುವೆ ಮೇಲೆ ನೀರು ಹರಿದಿದ್ದರಿಂದ ನಾಲ್ಕು ಬಾರಿ ರಾಜ್ಯ ಹೆದ್ದಾರಿ ರಸ್ತೆ ಸಂಚಾರ ಸ್ಥಗಿತಗೊಂಡಂತಾಗಿದೆ.

ಚಿತ್ತಾಪುರ ತಾಲ್ಲೂಕಿನ ಬೆಣ್ಣೆತೊರಾ ಜಲಾಯದಿಂದ 41ಸಾವಿರ ಕ್ಯುಸೆಕ್, ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿಯಿಂದ 18,500 ಕ್ಯುಸೆಕ್, ಚಂದ್ರಂಪಳ್ಳಿ ಜಲಾಶಯದಿಂದ 10ಸಾವಿರ ಹಾಗೂ ಗಂಡೋರಿ ಜಲಾಶಯದಿಂದ 13ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ.

ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಕಲಬುರ್ಗಿ ಜಿಲ್ಲೆಯಲ್ಲಿ 380 ಹಾಗೂ ರಾಯಚೂರಿನಲ್ಲಿ 4 ಮನೆಗಳು ಭಾಗಶಃ ಕುಸಿದಿವೆ.

ಬೀದರ್ ವರದಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಐದು ಕೆರೆಗಳು ಒಡೆದಿವೆ. ಮಾಂಜರಾ ನದಿ, ಹಳ್ಳ ಹಾಗೂ ಕೆರೆಗಳು ತುಂಬಿ ಹರಿಯುತ್ತಿದ್ದು, 10 ಪ್ರಮುಖ ಸೇತುವೆಗಳು ಮುಳುಗಡೆಯಾಗಿವೆ. ಮಳೆಯಿಂದಾಗಿ ನಿಜಾಂಪುರದಲ್ಲಿ ಹಳೆಯ ಶಾಲಾ ಕಟ್ಟಡ ಕುಸಿದಿದೆ. ಜಿಲ್ಲೆಯಾದ್ಯಂತ 1,152ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಮಳೆಯಿಂದಾಗಿ ತೀವ್ರ ಸಮಸ್ಯೆಗೆ ಒಳಗಾಗಿರುವ ಗ್ರಾಮಗಳ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ.

ಭಾಲ್ಕಿ ತಾಲ್ಲೂಕಿನ ರಾಚಪ್ಪ ಗೌಡಗಾಂವ್‌ನಲ್ಲಿ ಹಳ್ಳದ ಪ್ರವಾಹಕ್ಕೆ ಆರು ಎತ್ತುಗಳು ಕೊಚ್ಚಿಕೊಂಡು ಹೋಗಿವೆ. ಆನಂದವಾಡಿ ಗ್ರಾಮದಲ್ಲಿ ಮಾಂಜರಾ ನದಿ ನೀರು ನುಗ್ಗಿದ್ದು, ಗ್ರಾಮಸ್ಥರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕೃಷ್ಣಾ ನದಿಗೆ ಪ್ರವಾಹ: ಸೇತುವೆ ಜಲಾವೃತ
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿರುವುದರಿಂದ ರಾಜಾಪುರ ಬ್ಯಾರೇಜ್‌ ಮೂಲಕ ಕೃಷ್ಣಾ ನದಿಗೆ ನೀರು ಬಿಡಲಾಗಿದ್ದು, ತಾಲ್ಲೂಕಿನ ಕಲ್ಲೋಳ ಮತ್ತು ಯಡೂರ ಗ್ರಾಮಗಳ ಮಧ್ಯದ ಕೆಳಮಟ್ಟದ ಸೇತುವೆ ಶುಕ್ರವಾರ ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ಗುರುವಾರ ಕಲ್ಲೋಳ ಬಳಿ ಕೃಷ್ಣಾ ನದಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಶುಕ್ರವಾರ 49,318 ಕ್ಯುಸೆಕ್‌ ಇತ್ತು. ಇದರಿಂದಾಗಿ ಕಲ್ಲೋಳ–ಯಡೂರ ಸೇತುವೆ ಮೇಲೆ ಸುಮಾರು ಒಂದೂವರೆ ಅಡಿಯಷ್ಟು ನೀರು ಹರಿಯುತ್ತಿದ್ದು, ಜನರು ಸುತ್ತುಬಳಸಿ ಪ್ರಯಾಣಿಸುವಂತಾಗಿದೆ.

Comments are closed.