
ಬೆಂಗಳೂರು: ಕಾವೇರಿ ಹೋರಾಟದಿಂದ ದೂರ ಉಳಿದಿದ್ದ ಮಂಡ್ಯ ಕ್ಷೇತ್ರದ ಹಾಲಿ ಶಾಸಕರಾಗಿರುವ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಜಿ ಸಚಿವ ಅಂಬರೀಶ್ ಅವರು ಕಾವೇರಿ ವಿಚಾರ ಸಂಬಂಧ ರಾಜ್ಯ ಸರ್ಕಾರ ಕರೆದಿರುವ ವಿಶೇಷ ಅಧಿವೇಶನಕ್ಕೂ ಗೈರು ಆಗಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಕಾವು ಹೆಚ್ಚಿದ್ದು, ರೈತರ ಸಂಕಷ್ಟದಲ್ಲಿ ಭಾಗಿಯಾಗಿ ಹೋರಾಟದಲ್ಲಿ ಪಾಲ್ಗೊಳ್ಳಬೇಕಿದ್ದ ಶಾಸಕ ಹಾಗೂ ನಟ ಅಂಬರೀಶ್ ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.
ಈವರೆಗೆ ನಡೆದ ಯಾವುದೇ ಪ್ರತಿಭಟನೆಯಲ್ಲಿ ಅಂಬರೀಶ್ ಕಾಣಿಸಿಕೊಂಡಿಲ್ಲ. ಇಂದು ಕಾವೇರಿ ನೀರು ಬಿಡುಗಡೆ ಕುರಿತು ಮಹತ್ವದ ವಿಶೇಷ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದಲ್ಲೂ ಮಂಡ್ಯದ ಗಂಡಿನ ಗೈರು ಎದ್ದು ಕಾಣುತ್ತಿದೆ.
ಕಾವೇರಿ ಹೋರಾಟದಲ್ಲಿ ಮಂಡ್ಯದ ಬಹುತೇಕ ಮುಖಂಡರು ಭಾಗವಹಿಸಿದ್ದರು. ಆದರೆ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂಬರೀಶ್ ಅಮೆರಿಕದಲ್ಲಿ ಕಾಲ ಕಳೆಯುತ್ತಿರುವುದು ತೀವ್ರ ಆಕ್ರೋಶಕ್ಕೆ ತುತ್ತಾಗಿದೆ.
ಮೂಲಗಳ ಪ್ರಕಾರ ಇಂದು ಸಂಜೆ ಅಂಬರೀಶ್ ಅಮೆರಿಕದಿಂದ ಮರಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
Comments are closed.