
ಬೆಂಗಳೂರು, ಸೆ. ೨೨ – ತಮಿಳುನಾಡಿಗೆ ಹೆಚ್ಚಿನ ಕಾವೇರಿ ನೀರು ಹರಿಸುವುದು ಹಾಗೂ ಕಾವೇರಿ ನೀರು ಹಂಚಿಕೆ ನಿರ್ವಹಣಾ ಮಂಡಳಿ ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ವಿಧಾನ ಸೌಧದ ಬಳಿಯ ಮಹತ್ಮಾ ಗಾಂಧಿ ಪ್ರತಿಮೆ ಎದುರು ಇಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಲೋಕಸಭೆಯ ಹಿರಿಯ ಸದಸ್ಯರಾದ ಕೆ. ಎಚ್. ಮುನಿಯಪ್ಪ, ಮುದ್ದುಹನುಮೇಗೌಡ, ಧೃವನಾರಾಯಣ್, ಡಿ.ಕೆ.ಸುರೇಶ್, ರಾಜ್ಯ ಸಭೆ ಸದಸ್ಯ ಪ್ರೊ. ರಾಜೀವ್‌ಗೌಡ, ಕೆ.ಸಿ. ರಾಮಮೂರ್ತಿ, ಚಂದ್ರಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದು, ನಾಳಿನ ವಿಧಾನ ಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿಯೂ, ಸಂಸತ್‌ನಲ್ಲಿ ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದಾಗಿಯೂ ಹೇಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಸುಪ್ರೀಂ ಕೋರ್ಟ್ ತೀರ್ಪಿನಿಂದ ರಾಜ್ಯದ ಜನತೆ ಆತಂಕ ಮತ್ತು ಆಘಾತಕ್ಕೊಳಗಾಗಿದ್ದಾರೆ. ರಾಜ್ಯದ ಪಾಲಿಗೆ ಇದು ಮಾರಕವಾಗಿದ್ದು, ಜನತೆ ಮತ್ತು ರೈತ, ಕಾನೂನು ಪರಿಣಿತರು ಸರರಿದಂತೆ ಎಲ್ಲರ ಅಭಿಪ್ರಾಯವೂ ಇದೇ ಆಗಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ತಮಿಳುನಾಡು ಅಥವಾ ಕರ್ನಾಟಕ ಮನವಿ ಸಲ್ಲಿಸದಿದ್ದರೂ ನ್ಯಾಯಾಲಯ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾವೇರಿ ನೀರಿನ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿಂದೆ ಯಾವುದೋ ಕಾಣದ ಕೈಗಳು ಕೆಲಸ ಮಾಡಿರುವ ಸಾಧ್ಯತೆ ಇದೆ. ಬೆಂಗಳೂರಿನ ಅಭಿವೃದ್ಧಿ ಸಹಿಸದೆ, ಇಲ್ಲಿಗೆ ಹರಿದು ಬರುತ್ತಿರುವ ಬಂಡವಾಳವನ್ನು ತಡೆಯುವ ಸಲುವಾಗಿ ಇಂತಹ ತೀರ್ಪು ನೀಡಿರಬಹುದು ಎಂಬುವ ಅನುಮಾನ ಕಾಡುತ್ತಿದೆ. ಯಾವುದೇ ಮಾನದಂಡ ಅನುಸರಿಸದೆ ಇಂತಹ ತೀರ್ಪು ನೀಡಿರುವುದನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ. ರಾಜ್ಯದ ಎಲ್ಲ ಕಾಂಗ್ರೆಸ್ ಸಂಸದರೂ ಗಟ್ಟಿ ಧ್ವನಿ ಎತ್ತುವ ಮೂಲಕ ಲೋಕಸಭೆ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲಾಗುವುದು ಎಂದು ಅವರು ಇದೇ ಸಂದಭ್ದಲ್ಲಿ ತಿಳಿಸಿದರು.
ಮೋದಿ ಮಧ್ಯ ಪ್ರವೇಶಿಸಲಿ: ಪ್ರಧಾನಿ ನರೇಂದ್ರ ಮೋದಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೈ ಚೆಲ್ಲಿ ಕೂರುವುದು ಸರಿಯಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎರಡು ರಾಜ್ಯಗಳ ನಡುವೆ ನದೀ ನೀರಿನ ಹಂಚಿಕೆ ವಿಚಾರವಾಗಿ ಬೃಹತ್ ಪ್ರತಿಭಟನೆಗಳು, ಗಲಭೆಗಳು ನಡೆಯುತ್ತಿದ್ದರೂ, ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸುಮ್ಮನೆ ಕೂರುವುದರಲ್ಲಿ ಅರ್ಥವಿಲ್ಲ. ಒಕ್ಕೂಟ ವ್ಯವಸ್ಥೆ ಮುಖ್ಯಸ್ಥರಾಗಿರುವ ಅವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ಸಮಸ್ಯೆ ಎದುರಾದಾಗ ಇಂದಿರಾಗಾಂಧಿ, ಪಿ.ವಿ. ನರಸಿಂಹರಾವ್, ವಾಜಪೇಯಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿದ್ದರು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ಕೆ. ಎಚ್. ಮುನಿಯಪ್ಪ, ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟ ಅರಿಯದೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಕನಿಷ್ಟ ಪಕ್ಷ ಸಮಿತಿ ರಚಿಸಿ, ಅದು ನೀರಿನ ಲಭ್ಯತೆ ಪರಿಶೀಲಿಸಿದ ನಂತರ ನ್ಯಾಯಸಮ್ಮತ ತೀರ್ಪು ನೀಡಬಹುದಿತ್ತು ಎಂದು ಹೇಳಿದರು.
Comments are closed.