
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಎಸ್ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ಕೃಷ್ಣ ಅವರು ಸಿದ್ದರಾಮಯ್ಯನವರಿಗೆ ನಾಲ್ಕು ಸಲಹೆಗಳನ್ನು ನೀಡಿದ್ದಾರೆ.
ಕಾಂಗ್ರೆಸ್ ನ ಹಿರಿಯ ಮುಖಂಡರು ಆಗಿರುವ ಎಸ್ ಎಂ ಕೃಷ್ಣ ಅವರ ಸದಾಶಿವನಗರ ನಿವಾಸಕ್ಕೆ ತೆರಳಿ ಸಿದ್ದರಾಮಯ್ಯ ನವರು 15 ನಿಮಿಷಗಳ ಕಾಲ ಚರ್ಚೆ ನಡೆಸಿದರು.
ಚರ್ಚೆ ವೇಳೆ ಎಸ್ಎಂ ಕೃಷ್ಣ ಅವರು ಕಾವೇರಿ ಜಲಾನಯನ ಪ್ರದೇಶದಲ್ಲಿ ಹೂಳು ತೆಗೆಯಿರಿ. ಕಾವೇರಿ ಜಲಭಾಗ್ಯ ನಿಗಮಕ್ಕೆ ಆರ್ಥಿಕ ಶಕ್ತಿ ತುಂಬಿ. ಕಾವೇರಿ ಜಲಾನಯನ ವ್ಯಾಪ್ತಿಯ ರೈತರಿಗೆ ಪರಿಹಾರ ನೀಡಿ. ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಅವಧಿ ವಿಸ್ತರಣೆ ಮಾಡಿ ಎಂದು ನಾಲ್ಕು ಸಲಹೆಗಳನ್ನು ಸಿದ್ದರಾಮಯ್ಯನವರಿಗೆ ನೀಡಿದ್ದಾರೆ.
ಕಾವೇರಿ ನದಿ ನೀರು ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಹಾಗೂ ಸರ್ಕಾರ ತೆಗೆದುಕೊಂಡ ನಿರ್ಧಾರ ಬಗ್ಗೆ ಚರ್ಚೆ ನಡೆಸಿದರು.
ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಎಂ ಕೃಷ್ಣ ಅವರು ಕಾನೂನು ಅನುಪಯುಕ್ತವಾದಾಗ ವಿರೋಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಕಾವೇರಿ ವಿವಾದದ ವಿಚಾರದಲ್ಲಿ ಮೂಲಭೂತ ಅವಶ್ಯಕತೆಗಳನ್ನು ಬಹಳಷ್ಟು ಗೌರವಿಸಿದ್ದಾರೆ. ಬೆಂಗಳೂರು ಮತ್ತು ಇತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇಂತಹ ಸಂದರ್ಭದಲ್ಲಿ ನೀಡಿರುವ ಆದೇಶವನ್ನು ಪ್ರತಿರೋಧಿಸುವಂತಹದ್ದೇ ನಮ್ಮ ಧರ್ಮ. ಕಾನೂನು ನಮಗೆ ಅನುಪಯುಕ್ತವಾದಾಗ ಅದನ್ನು ಉಲ್ಲಂಘಿಸುವುದೇ ನಮ್ಮ ಧರ್ಮ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದಾರೆ ಎಂದರು.
Comments are closed.