ಕರ್ನಾಟಕ

ಕಾವೇರಿ ಜಲ ವಿವಾದ: ಸುಪ್ರೀಂ ಆದೇಶಕ್ಕೆ ಫೇಸ್‌ಬುಕ್‌ ನಲ್ಲಿ ಕಟ್ಜು ವ್ಯಂಗ್ಯ

Pinterest LinkedIn Tumblr

katjuಬೆಂಗಳೂರು: ಕಾವೇರಿ ಜಲ ವಿವಾದದ ಬಗ್ಗೆ ಸುಪ್ರೀಂಕೋರ್ಟ್‌ ಮಂಗಳವಾರ ನೀಡಿರುವ ಆದೇಶದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ವ್ಯಂಗ್ಯವಾಡಿದ್ದಾರೆ. ನ್ಯಾಯಮೂರ್ತಿಗಳ ನಡೆಯನ್ನು ಟೀಕಿಸಿರುವ ಕಟ್ಜು ಈ ಬಗ್ಗೆ ವ್ಯಂಗ್ಯಚಿತ್ರಗಳನ್ನು ಆಹ್ವಾನಿಸಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಡೆನ್ಮಾರ್ಕ್‌ನ ಅರಸ ಕನೂಟ್‌ನಂತೆ ವರ್ತಿಸಿದೆ’ ಎಂದಿರುವ ಕಟ್ಜು, ‘ಕನೂಟ್‌ನ ಮಾದರಿಯಲ್ಲಿ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ‘ದಿನವೂ 6 ಸಾವಿರ ಕ್ಯುಸೆಕ್‌ ನೀರು ತಮಿಳುನಾಡಿಗೆ ಹರಿಯಬೇಕು’ ಎಂದು ಆದೇಶಿಸುತ್ತಿರುವಂಥ ವ್ಯಂಗ್ಯಚಿತ್ರಗಳನ್ನು ಆದಷ್ಟು ಬೇಗ ಕಳುಹಿಸಿ’ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಜತೆಗೆ ತಮ್ಮ ಇಮೇಲ್‌ ಐಡಿಯನ್ನೂ ನೀಡಿದ್ದರು.

ತಮಗೆ ಬಂದ ಕೆಲವು ವ್ಯಂಗ್ಯಚಿತ್ರಗಳನ್ನು ಕಟ್ಜು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಟ್ಜು ಅವರ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ‘ನೀವು ನ್ಯಾಯಾಂಗವನ್ನು ಟೀಕಿಸುತ್ತೀರಾ?’ ಎಂದು ಕೇಳಿರುವ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಕಟ್ಜು, ‘ಯಾಕೆ? ಅವರೇನು ದೇವರಲ್ಲ’ ಎಂದು ರಿಪ್ಲೆ ಮಾಡಿದ್ದಾರೆ.

‘ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಕೇಳಿರುವ ಪ್ರಶ್ನೆಗೆ ಕಟ್ಜು, ‘ಅವರ ಬಗ್ಗೆ ಈಗಲೇ ಹೇಳುವಂಥದ್ದೇನಿಲ್ಲ. ಅವರ ಹಾರ್ವರ್ಡ್‌ ಪದವಿ ನನ್ನ ಮೇಲೇನು ಪ್ರಭಾವ ಬೀರಿಲ್ಲ’ ಎಂದು ರಿಪ್ಲೆ ಮಾಡಿದ್ದಾರೆ.

Comments are closed.