ಕರ್ನಾಟಕ

ಮೇಯರ್ ಪಟ್ಟ: ಇಬ್ಬರ ಜಗಳ- ಯಾರಿಗೆ ಲಾಭ

Pinterest LinkedIn Tumblr

bbmp-1ಬೆಂಗಳೂರು, ಸೆ. ೧೫- ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಇದೇ ತಿಂಗಳ 28 ರಂದು ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತೆ ಜಯಂತಿ ಇಂದು ಅಧಿಸೂಚನೆ ಹೊರಡಿಸಿದ್ದಾರೆ.
ಅಂದು ಮಧ್ಯಾಹ್ನ 11.30ಕ್ಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಲಿದೆ. ಅಗತ್ಯ ಬಿದ್ದಲ್ಲಿ 12 ಸ್ಥಾಯಿಸಮಿತಿಗಳ ಒಟ್ಟು 132 ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ, ಚುನಾವಣೆಯು ನಡೆಯಲಿದೆ.
ಪಕ್ಷಗಳಲ್ಲಿ ಗರಿಗೆದರಿದ ಉತ್ಸಾಹ
ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ, ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗಳಲ್ಲಿ ಚುನಾವಣಾ ಉತ್ಸಾಹ ಗರಿಗೆದರಿದೆ.
ಬಿಬಿಎಂಪಿಯಲ್ಲಿ ಯಾರು ಗದ್ದುಗೆಗೆ ಏರಬೇಕೆಂಬ ಲೆಕ್ಕಾಚಾರಗಳಿಗೆ ಚುನಾವಣಾ ದಿನಾಂಕ ಪ್ರಕಟವಾಗಿರುವುದರಿಂದ ಮತ್ತಷ್ಟು ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.
ಕಳೆದ ಬಾರಿ ಬಹುಮತ ಇಲ್ಲದಿದ್ದರೂ, ಪಕ್ಷೇತರ ಸದಸ್ಯರ ಬಹುಮತದೊಂದಿಗೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ ಈ ಬಾರಿಯೂ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಹಾಗಾಗಿ ಚಾಣುಕ್ಯನ ರೀತಿ ಅಧಿಕಾರದ ಗದ್ದುಗೆಗೆ ಏರಲು ಅನ್ಯ ಜಿಲ್ಲೆಗಳ ಶಾಸಕರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ ತನ್ನ ಮತದಾರರ ಸಂಖ್ಯೆಯನ್ನು ಹಿಗ್ಗಿಸಿಕೊಂಡಿದೆ.
ಇತ್ತ ಕಳೆದ ಬಾರಿ ಬಹುಮತವಿದ್ದರೂ, ತನ್ನದೇ ಆದ ಎಡವಟ್ಟಿನಿಂದಾಗಿ ಅಧಿಕಾರದ ಸೂತ್ರ ಹಿಡಿಯಲು ಕೂದಲೆಳೆಯ ಅಂತರದಲ್ಲಿ ವಂಚಿತವಾಗಿದ್ದ ಬಿಜೆಪಿ ಕೂಡ, ಬಿಬಿಎಂಪಿಯಲ್ಲಿ ಆಡಳಿತ ನಡೆಸಲು ಇನ್ನಿಲ್ಲದ ಕಸರತ್ತು ನಡೆಸಲಾರಂಭಿಸಿದೆ.
ಈಗಾಗಲೇ ಜೆಡಿಎಸ್ ಬೆಂಬಲ ತನಗೇ ಸಿಗುತ್ತದೆ ಎಂಬ ವಿಶ್ವಾಸ ಹೊಂದಿರುವ ಬಿಜೆಪಿ ನಾಯಕರು ಕೊನೆ ಗಳಿಗೆಯಲ್ಲಿ ಜೆಡಿಎಸ್ ಕೈ ಕೊಟ್ಟರೆ, ಪಕ್ಷೇತರ ಸದಸ್ಯರೊಂದಿಗೆ ಆಡಳಿತಕ್ಕೆ ಬರುವ ಕಾರ್ಯತಂತ್ರವನ್ನು ರೂಪಿಸಿದೆ.
ಈಗಾಗಲೇ ಬಿಜೆಪಿ ಪಕ್ಷದ ವರಿಷ್ಠರು ಜೆಡಿಎಸ್‌ನ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸದ್ದಿಲ್ಲದೆ, ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಜೆಡಿಎಸ್ ಮಾತ್ರ ಯಾರೊಂದಿಗೆ ಸಖ್ಯ ಬೆಳೆಸಲಿದೆ ಎಂಬುದು ಮಾತ್ರ ನಿಗೂಢವಾಗಿದೆ.
ಇತ್ತ ಕಾಂಗ್ರೆಸ್ ಸದಸ್ಯರು ಜೆಡಿಎಸ್‌ನೊಂದಿಗೆ ಮೈತ್ರಿ ಮುಂದುವರೆಸುವ ಆಶಯವನ್ನು ಇಟ್ಟುಕೊಂಡು ಕಾರ್ಯೋನ್ಮುಖರಾಗಿದ್ದಾರೆ.
ಜೆಡಿಎಸ್ ವರಿಷ್ಠರು ತಮಗೇ ಈ ಬಾರಿ ಮೇಯರ್ ಸ್ಥಾನವನ್ನು ನೀಡಬೇಕೆಂದು ಪಟ್ಟು ಹಿಡಿದಿರುವುದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿದೆ.
ಒಂದು ವೇಳೆ ಜೆಡಿಎಸ್‌ನೊಂದಿಗೆ ಮೈತ್ರಿ ಸಾಧಿಸಿದರೂ, ಮೇಯರ್ ಸ್ಥಾನ ನಮಗೇ ಸೇರಬೇಕು. ಜೆಡಿಎಸ್‌ಗೆ ಉಪಮೇಯರ್ ಸ್ಥಾನ ಹಾಗೂ ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಸ್ಥಾನವನ್ನು ಬಿಟ್ಟುಕೊಡುವುದಾಗಿ ಈಗಾಗಲೇ ಜೆಡಿಎಸ್ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.
ಆದರೆ ಜೆಡಿಎಸ್ ಮುಖಂಡರು ಇದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ. ಆದರೂ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳು ತಮಗೆ ಅನುಕೂಲಕರವಾದ ರೀತಿಯಲ್ಲಿ ನಡೆದುಕೊಂಡಲ್ಲಿ ಮೈತ್ರಿಯ ಮಾತು ಎಂದು ದಾಳ ಉರುಳಿಸಿದ್ದಾರೆ.
ಮೇಯರ್ ಚುನಾವಣೆಗೆ ಇನ್ನೂ 13 ದಿನಗಳು ಬಾಕಿ ಉಳಿದಿವೆ. ಹಾಗಾಗಿ ಕೊನೆ ಗಳಿಗೆಯವರೆಗೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿ – ಜೆಡಿಎಸ್ ಮೈತ್ರಿಯಾಗಲಿದೆಯೇ ಎಂಬುದನ್ನು ಮಾತ್ರ ಕಾದುನೋಡಬೇಕಾಗಿದೆ.

Comments are closed.