ಬೆಂಗಳೂರು: ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ
ಪರಿಸ್ಥಿತಿ ಕನ್ನಡಿಗರದ್ದು. ಹೌದು, ಕಾವೇರಿ ನದಿ ನೀರಿಗಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ದೊಡ್ಡ ಇತಿಹಾಸವೇ ಇದೆ. ಇತ್ತೀಚಿನ ವರ್ಷಗಳಲ್ಲಂತೂ ಪ್ರತಿ ವರ್ಷ ಹೋರಾಟ, ಪ್ರತಿಭಟನೆ, ಹರತಾಳಗಳು ನಡೆಯುತ್ತಲೇ
ಇವೆ. ಸಾಕಷ್ಟು ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿಗಳಾದರೂ ಕಾವೇರಿ ವಿಚಾರದಲ್ಲಂತೂ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ. ಅದರಲ್ಲೂ ಕಾವೇರಿ ನದಿ ನೀರಿನ ಹಂಚಿಕೆಗಾಗಿ ನ್ಯಾಯಾಧಿಕರಣ ಸ್ಥಾಪನೆಯಾದ ಮೇಲೆ ಕರ್ನಾಟಕಕ್ಕೆ
ಅನ್ಯಾಯವಾಗಿದ್ದೇ ಹೆಚ್ಚು. ಅದೇ ರೀತಿ ಹೋರಾಟಗಳೂ ನಡೆದವು. ನ್ಯಾಯಾಧಿಕರಣ ಆರಂಭವಾಗುವ ಮುನ್ನವೇ ಆರಂಭವಾದ ಹೋರಾಟ ತೀವ್ರ ಸ್ವರೂಪ ಪಡೆದಿದ್ದು 1991ರಲ್ಲಿ ತಮಿಳುನಾಡಿಗೆ ವಾರ್ಷಿಕ 205 ಟಿಎಂಸಿ ನೀರು ಬಿಡುವಂತೆ ನ್ಯಾಯಾಧಿಕರಣ ಮಧ್ಯಂತರ ಆದೇಶ ನೀಡಿದ ಮೇಲೆ. ನಂತರ ನಡೆದ ಭಾರೀ ಪ್ರಮಾಣದ ಹೋರಾಟ, ಬಂದ್‌ಗಳ ಚಿತ್ರಣ ಇಲ್ಲಿದೆ.
1991: ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿ ವರ್ಷ 205 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿ ಕಾವೇರಿ ನ್ಯಾಯಾಧಿಕರಣ 1991ರ ಡಿ.11ರಂದು ಮಧ್ಯಂತರ ತೀರ್ಪು ಪ್ರಕಟಿಸಿತ್ತು. ಇದನ್ನು ಖಂಡಿಸಿ ಡಿ.13ರಂದು ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಹಳೇ ಮೈಸೂರು ಭಾಗದಲ್ಲಿ ನಡೆದ ಹೋರಾಟ
ಹಿಂಸಾರೂಪಕ್ಕಿಳಿದಿತ್ತು. ಆಕ್ರೋಶಗೊಂಡಿದ್ದ ಜನತೆ ತಮಿಳುನಾಡು ಮತ್ತು ಆ ರಾಜ್ಯದವರ ವಿರುದ್ಧ ಮುಗಿಬಿದ್ದಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಗೋಲಿಬಾರ್ ನಡೆಸಿದ್ದರು. ಇದರಿಂದ 16 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದರು. ಕರ್ಫ್ಯೂ ಜಾರಿ ಮಾಡಲಾಗಿತ್ತು.
ಆಗ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ಅವರು ನ್ಯಾಯಾಧಿಕರಣದ ಮಧ್ಯಂತರ ಆದೇಶ ಧಿಕ್ಕರಿಸಿ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಘೋಷಿಸಿದರು. ಈ ಕುರಿತು ಸುಗ್ರೀವಾಕ್ಷೆಯನ್ನೂ ಹೊರಡಿಸಿದರು. ಬಳಿಕ ಸುಪ್ರೀಂಕೋರ್ಟ್ ಈ ಸುಗ್ರೀವಾಜ್ಞೆ ಕಾನೂನು ಬಾಹಿರ ಎಂದು ಘೋಷಿಸಿ, ಗೆಜೆಟ್ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಕೊನೆಗೆ ಸರ್ಕಾರ ಒಪ್ಪಬೇಕಾಯಿತು.
2002: ರಾಜ್ಯದಲ್ಲಿ ಮಳೆ ಕೊರತೆಯಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ತಮಿಳುನಾಡಿನ ಕೋರಿಕೆ ಪರಿಗಣಿಸಿದ ಸುಪ್ರೀಂಕೋರ್ಟ್, ಪ್ರತಿದಿನ 1.25 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿತ್ತು. ಇದನ್ನು ವಿರೋಧಿಸಿ ರಾಜ್ಯಾದ್ಯಂತ ತೀವ್ರ ಹೋರಾಟ, ಪ್ರತಿಭಟನೆಗಳು ನಡೆದು ಹಿಂಸಾಚಾರ
ಶುರುವಾಯಿತು. ರಾಜ್ಯ ಬಂದ್ ಕೂಡ ನಡೆಯಿತು. ಇದರ ಮಧ್ಯೆಯೇ ಸರ್ಕಾರ ನೀರು ಬಿಟ್ಟಿದ್ದರಿಂದ ರೈತ ಗುರುಸ್ವಾಮಿ
ಎಂಬಾತ ಕಬಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಯಿತು.
ಈ ಮಧ್ಯೆ ರೈತರ ಹೋರಾಟಕ್ಕೆ ಮಣಿದ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಘೋಷಿಸಿ ತಾವೇ ಕೆಆರ್‌ಎಸ್‌ಗೆ ಪಾದಯಾತ್ರೆ ನಡೆಸಿದರು. ಹೀಗಾಗಿ ತಮಿಳುನಾಡು ಸರ್ಕಾರ
ಕರ್ನಾಟಕದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಕೊನೆಗೆ ಬೆದರಿದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿತು.
2007: ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಅಂತಿಮ ತೀರ್ಪು ಪ್ರಕಟಿಸಿದ ಕಾವೇರಿ ನ್ಯಾಯಾಧಿಕರಣ ತಮಿಳುನಾಡಿಗೆ ವಾರ್ಷಿಕ 192 ಟಿಎಂಸಿ ನೀರು ಹರಿಸುವಂತೆ ಸೂಚಿಸಿತ್ತು. ಇದನ್ನು ವಿರೋಧಿಸಿ ಮತ್ತೆ ಪ್ರತಿಭಟನೆ, ಬಂದ್ ಹೋರಾಟ ಆರಂಭವಾಯಿತು. ಸುಮಾರು 40 ದಿನಗಳ ಕಾಲ ತೀವ್ರ ಸ್ವರೂಪದ ಹೋರಾಟ ನಡೆಯಿತು. ರೈಲ್ ರೋಖೋ ಚಳವಳಿ, ಕೇಂದ್ರ ಸರ್ಕಾರದ ಕಚೇರಿಗಳಿಗೆ ಮುತ್ತಿಗೆ ಹೀಗೆ ನಾನಾ ರೀತಿಯ ಪ್ರತಿಭಟನೆಗಳಾದವು.
ಅದೇನೇ ಆದರೂ ರಾಜ್ಯಕ್ಕೆ ನ್ಯಾಯ ಮಾತ್ರ ಸಿಗಲಿಲ್ಲ.
2012: ಕಾವೇರಿ ಕೊಳ್ಳದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಆ ವರ್ಷವೂ ಜಲಾಶಯಗಳಲ್ಲಿ ನೀರಿನ ಸಂಗ್ರಹ
ಕಡಿಮೆಯಾಗಿತ್ತು. ಹೀಗಾಗಿ ತಮಿಳುನಾಡಿಗೆ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಪ್ರಧಾನಿಯವರ ಮೊರೆ ಹೋಗಿದ್ದು, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಪ್ರತಿನಿತ್ಯ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದ್ದರು. ಇದನ್ನು ವಿರೋಧಿಸಿ
ಮತ್ತೆ ಕರ್ನಾಟಕ ಬಂದ್ ನಡೆಯಿತು.
ಹೋರಾಟ, ಚಳವಳಿಗಳು ತೀವ್ರಗೊಂಡವು. ಕೊನೆಗೆ ಕಾವೇರಿ ಮೇಲುಸ್ತುವಾರಿ ಸಮಿತಿ 10 ದಿನಗಳ ಕಾಲ ಪ್ರತಿನಿತ್ಯ 11 ಕ್ಯೂಸೆಕ್ ನೀರು ಬಿಡುವಂತೆ ನಿರ್ದೇಶನ ನೀಡಿತ್ತು. ಆದರೂ ಕರ್ನಾಟಕ ಒಪ್ಪದ ಕಾರಣ ತಮಿಳುನಾಡು ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನೀರು ಹರಿಸಲೇಬೇಕಾದ
ಅನಿವಾರ್ಯತೆ ಉಂಟಾಯಿತು. ಉಳಿದಂತೆ 2007ರಲ್ಲಿ ಕಾವೇರಿ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿದ ಬಳಿಕ 2008 ಮತ್ತು 2009 ಹೊರತುಪಡಿಸಿ ಪ್ರತಿ ವರ್ಷ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಹೋರಾಟ ನಡೆಯುತ್ತಲೇ ಇದೆ. ಪ್ರತಿ ಬಾರಿಯೂ ಕರ್ನಾಟಕ ಅನ್ಯಾಯಕ್ಕೆ ಒಳಗಾಗುತ್ತಲೇ ಇದೆ. ಇದೀಗ ಮತ್ತೆ 2016ರಲ್ಲಿ ಭಾರೀ ಪ್ರಮಾಣದ ಹೋರಾಟ ಆರಂಭವಾಗಿದೆ.
ವಿವಾದ- ಬೆಳೆದುಬಂದ ಹಾದಿ
1803- ಮುಮ್ಮಡಿ ಕೃಷ್ಣರಾಜ ಒಡೆಯರ್ ಕೆರೆ ಮೂಲಕ ನೀರಾವರಿ ಆರಂಭಿಸಿದರು. ಅದಕ್ಕೆ ಮದ್ರಾಸ್ ಪ್ರಸಿಡೆನ್ಸಿ ಆಕ್ಷೇಪ.
1892- ಮೈಸೂರು- ಮದ್ರಾಸ್ ನಡುವೆ ಒಪ್ಪಂದ. ನೀರಾವರಿ ಯೋಜನೆ ಕೈಗೊಳ್ಳಬೇಕಾದರೆ ಮದ್ರಾಸ್ ಆಡಳಿತದ
ಅನುಮತಿ ಪಡೆಯುವ ಷರತ್ತು.
1911- ಕೃಷ್ಣರಾಜಸಾಗರ ನಿರ್ಮಾಣಕ್ಕೆ ನಡೆದ ಶಿಲಾನ್ಯಾಸಕ್ಕೆ ತಮಿಳುನಾಡು ಆಕ್ಷೇಪ.
1924- ಹಲವು ಷರತ್ತುಗಳೊಂದಿಗೆ ಕೆಆರ್‌ಎಸ್ ನಿರ್ಮಾಣಕ್ಕೆ ಒಪ್ಪಂದ. ಮೆಟ್ಟೂರು ಜಲಾಶಯ ನಿರ್ಮಾಣಕ್ಕೆ ಅನುಮತಿ.
1972- ಕೇಂದ್ರದಿಂದ ಕಾವೇರಿ ಸತ್ಯಶೋಧನಾ ಸಮಿತಿ ರಚನೆ. ವರದಿ ಸಲ್ಲಿಕೆ.
1973- ತಮಿಳುನಾಡಿನಿಂದ ಸಮಿತಿ ವರದಿ ತಿರಸ್ಕಾರ.
1990- ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರದಿಂದ ಕಾವೇರಿ ನ್ಯಾಯಮಂಡಳಿ ರಚನೆ.
1991- ನ್ಯಾಯಮಂಡಳಿಯಿಂದ ಮಧ್ಯಂತರ ತೀರ್ಪು. ತಮಿಳುನಾಡಿಗೆ 205 ಟಿಎಂಸಿ ನೀರು ಹರಿಸಲು ಆದೇಶ.
1991- ನ್ಯಾಯಮಂಡಳಿ ತೀರ್ಪು ಧಿಕ್ಕರಿಸಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರಿಂದ ಸುಗ್ರೀವಾಜ್ಞೆ. ರಾಜ್ಯಾದ್ಯಂತ
ತೀವ್ರ ಹೋರಾಟ. ಇದರ ನಡುವೆಯೇ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶ.
1995- ಬರದ ನಡುವೆಯೂ ತಮಿಳುನಾಡಿಗೆ 11 ಟಿಎಂಸಿ ನೀರು ಬಿಡಲು ಆದೇಶ. ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ. ಪ್ರಧಾನಿ ಅಧ್ಯಕ್ಷತೆಯಲ್ಲಿ ಸಭೆ ನಡೆದು ಆರು ಟಿಎಂಸಿ ನೀರು ಬಿಡಲು ಸೂಚನೆ.
1997- ಕಾವೇರಿ ನದಿ ಪ್ರಾಧಿಕಾರ ರಚನೆ.
2002- ಪ್ರಾಧಿಕಾರದ ಸಭೆಯಲ್ಲಿ ನಿರ್ಧಾರವಾಗುವವರೆಗೂ ತಮಿಳುನಾಡಿಗೆ ನಿತ್ಯ 1.25 ಟಿಎಂಸಿ ನೀರು ಹರಿಸಲು
ಸುಪ್ರೀಂಕೋರ್ಟ್ ಆದೇಶ. ಪ್ರಾಧಿಕಾರದ ಸಭೆ ನಂತರ 9 ಸಾವಿರ ಕ್ಯೂಸೆಕ್ ನೀರು ಬಿಡಲು ರಾಜ್ಯದ ನಿರ್ಧಾರ.
ಬೀಚನಹಳ್ಳಿ ಗ್ರಾ.ಪಂ. ಸದಸ್ಯ ಗುರುಸ್ವಾಮಿ ಕಬಿನಿಗೆ ಹಾರಿ ಹುತಾತ್ಮ.
2007- ನ್ಯಾಯಮಂಡಳಿ ಅಂತಿಮ ತೀರ್ಪು. ಕರ್ನಾಟಕದಿಂದ ತಮಿಳುನಾಡಿಗೆ 192 ಟಿಎಂಸಿ ನೀರು ಬಿಡಲು ಆದೇಶ.
2012- ಕಾವೇರಿ ನದಿ ಪ್ರಾಧಿಕಾರದಿಂದ ನಿತ್ಯ 9 ಸಾವಿರ ಕ್ಯೂಸೆಕ್ ಬಿಡಲು ಸೂಚನೆ. ಬರದ ಕಾರಣ ರಾಜ್ಯ ಸರ್ಕಾರದಿಂದ ನಕಾರ. ಸುಪ್ರೀಂಕೋರ್ಟ್‌ಗೆ ತಮಿಳುನಾಡು ಮೊರೆ. ನ್ಯಾಯಾಲಯದ ಆದೇಶಕ್ಕೆ ಮಣಿದು ನೀರು ಬಿಡುಗಡೆ.
-ಉದಯವಾಣಿ
Comments are closed.