ಕರ್ನಾಟಕ

ಕೆಟ್ಟ ಮೇಲೆ ಬುದ್ಧಿ ಕಲಿತ ಸರ್ಕಾರ

Pinterest LinkedIn Tumblr

%e0%b2%b8%e0%b2%bb%e0%b2%b0%e0%b2%bb

ಬೆಂಗಳೂರು, ಸೆ. ೧೨- ಕಾವೇರಿ ನ್ಯಾಯಾಧೀಕರಣ ಮಂಡಳಿ ಮುಂದೆ ಸೂಕ್ತ ಅಂಕಿ ಅಂಶಗಳನ್ನು ಒದಗಿಸಲು ಎ‌ಡವಿದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಜ್ಞಾನೋದಯವಾದಂತಾಗಿದ್ದು, ಸಮರ್ಥ ವಾದ ಮಂಡಿಸಲು ಮುಂದಾಗಿರುವುದು ಸರ್ಕಾರದ ಕರ್ತವ್ಯ ಲೋಪಕ್ಕೆ ಹಿಡಿದ ಕೈಗನ್ನಡಿ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರು ಲೇವಡಿ ಮಾಡಿದ್ದಾರೆ.

ಆರಂಭದಿಂದಲೂ ಕಾವೇರಿ ನದಿ ನೀರು ನಿರ್ವಹಣೆಯನ್ನು ಸರಿದೂಗಿಸಿಕೊಂಡು ಬರಬೇಕಿತ್ತು. ಮಂಡಳಿಯ ಮುಂದೆಯೂ ಸಮರ್ಥ ಅಂಕಿ-ಅಂಶಗಳನ್ನು ನೀ‌ಡದೆ ಈಗ ಸರಿಪಡಿಸಲು ಮುಂದಾಗಿರುವುದು ತಡವಾಗಿದೆ ಎಂದು ಹೇಳಿದರು.

ನಗರದ ಕರೀಸಂದ್ರ ವಾರ್ಡ್‌ನಲ್ಲಿ ಸುಮಾರು 2 ಕೋಟಿ ರೂಪಾಯಿ ಮೊತ್ತದ ಉಮಾಮಹೇಶ್ವರಿ ಪಾರ್ಕ್ ಹಾಗೂ ಲಕ್ಷ್ಮಣರಾವ್ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಅಧಿಕಾರಿಗಳಿಗೆ ಸೂಕ್ತ ಮಾಹಿತಿಯೇ ಇಲ್ಲ ಎಂದು ಆರೋಪಿಸಿದರು.

ಪದ್ಮನಾಭನಗರ ಕ್ಷೇತ್ರದಲ್ಲಿ ಕರೀಸಂದ್ರ ವಾರ್ಡ್‌ನಲ್ಲಿ ಎಲ್ಲ ಪಾರ್ಕ್‌ಗಳ ನವೀಕರಣ ಕೈಗೆತ್ತಿಕೊಳ್ಳಲಾಗಿದೆ. ಕು‌ಡಿಯುವ ನೀರಿಗಾಗಿ ಘಟಕಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಸುಮಾರು 40 ವರ್ಷಗಳಷ್ಟು ಹಳೆಯದಾದ ಒಳಚರಂಡಿ ಪೈಪ್‌ಗಳನ್ನು ಬದಲಿಸಲಾಗುತ್ತಿದ್ದು, ಇದರಿಂದ ಸರಾಗವಾಗಿ ನೀರು ಹರಿದು ಹೋಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾರ್ಡ್‌ನ ಸದಸ್ಯೆ ಯಶೋಧ ಲಕ್ಷ್ಮಿಕಾಂತ ಅವರು ವಿವಿಧ ಬೃಹತ್ ಕಾಮಗಾರಿಗಳು ಹಾಗೂ ರಸ್ತೆಗಳಿಗೆ ಡಾಂಬರೀಕರಣ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಬೆಂಗಳೂರು ಮಹಾನಗರ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಲಕ್ಷ್ಮಿಕಾಂತ್ ಹಾಗೂ ವಾರ್ಡ್‌ನ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.