
ಬೆಂಗಳೂರು: ‘ಮಹಾದಾಯಿ ವಿವಾದಕ್ಕೆ ಸಂಬಂಧಿಸಿ ಮಾತುಕತೆ ನಡೆಸಲು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ತೆಲುಗು ವಿಜ್ಞಾನ ಸಮಿತಿಯ ಆಶ್ರಯದಲ್ಲಿ ನಗರದಲ್ಲಿ ಶನಿವಾರ ನಡೆದ ಕೃಷ್ಣದೇವರಾಯ ಕಲಾಮಂದಿರ, ಡಾ. ಟಿ. ಸುಬ್ಬರಾಮಿ ರೆಡ್ಡಿ ಕಲಾವೇದಿಕೆ ಉದ್ಘಾಟನೆ, ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿವಾದಕ್ಕೆ ಸಂಬಂಧಿಸಿ ಪ್ರಧಾನಿ, ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ನೀವು ಹೇಳಿದ ದಿನ, ಹೇಳಿದ ಸ್ಥಳದಲ್ಲಿ ಮಾತುಕತೆಗೆ ಸಿದ್ಧ ಎಂದೂ ಪತ್ರದಲ್ಲಿ ತಿಳಿಸಿದ್ದೇನೆ. ಮಹಾರಾಷ್ಟ್ರ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪರ್ಸೇಕರ್ ಯಾವುದಕ್ಕೂ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.
‘ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಇರುವುದು 45 ಟಿಎಂಸಿ ಅಡಿ ನೀರು ಮಾತ್ರ. ಆದರೆ, ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲೇ 36 ಟಿಎಂಸಿ ಅಡಿ ನೀರು ಇದೆ. ಆದರೂ, ಹಟ ಹಿಡಿದು ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ’ ಎಂದರು.
‘ಸುಪ್ರೀಂ ಕೋರ್ಟ್‌ಗೆ ಪುನರ್‌ಪರಿಶೀಲನಾ ಅರ್ಜಿಯನ್ನು ಇವತ್ತು (ಶನಿವಾರ) ಹಾಕಿದ್ದೇವೆ. 12ರಂದು ಮೇಲ್ವಿಚಾರಣಾ ಸಮಿತಿಯ ಸಭೆ ಇದ್ದು, ನಮ್ಮ ಸ್ಥಿತಿಯನ್ನು ಸಮಿತಿಗೆ ಮನವರಿಕೆ ಮಾಡಿಕೊಡುತ್ತೇವೆ’ ಎಂದರು.
ರಾಷ್ಟ್ರೀಯ ಜಲನೀತಿಗೆ ಆಗ್ರಹ: ‘ಅನೇಕ ರಾಜ್ಯಗಳ ನಡುವೆ ಜಲ ವಿವಾದ ಇದೆ. ಇದನ್ನು ಬಗೆಹರಿಸಲು ರಾಷ್ಟ್ರೀಯ ಜಲನೀತಿಯನ್ನು ಕೂಡಲೇ ರೂಪಿಸಬೇಕು’ ಎಂದು ಅವರು ಆಗ್ರಹಿಸಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ದೇಶ ವಿಶ್ವಾಸಾರ್ಹತೆಯ ಬಿಕ್ಕಟ್ಟು ಎದುರಿಸುತ್ತಿದೆ. ಒಕ್ಕೂಟ ವ್ಯವಸ್ಥೆ ಈಗ ತಿಕ್ಕಾಟ ವ್ಯವಸ್ಥೆ ಆಗಿದೆ. ಇದಕ್ಕೆ ತಮಿಳುನಾಡಿನ ನಡೆಯೇ ಸಾಕ್ಷಿ’ ಎಂದು ಅಭಿಪ್ರಾಯಪಟ್ಟರು.
‘ಕನ್ನಡ ಕಲಿತ ವಿದ್ಯಾರ್ಥಿಗಳು ಬಾವಿಯ ಕಪ್ಪೆಗಳಾಗುತ್ತಾರೆ ಎಂದು ನ್ಯಾಯಮೂರ್ತಿಯೊಬ್ಬರು ಹೇಳಿದ್ದಾರೆ. ದೇಶದ ಬಾವಿಗಳಲ್ಲಿ ಸಾಕಷ್ಟು ಕಪ್ಪೆಗಳು ಇವೆ. ನಾವು ಯಾರೂ ಕೂಪ ಮಂಡೂಕಗಳು ಆಗಿಲ್ಲ. ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗವೂ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ತೆಲುಗು ವಿಜ್ಞಾನ ಸಮಿತಿಯ ಅಧ್ಯಕ್ಷ ಡಾ. ಎ. ರಾಧಾಕೃಷ್ಣ ರಾಜು ಮಾತನಾಡಿ, ‘₹3 ಕೋಟಿ ವೆಚ್ಚದಲ್ಲಿ ಕಲಾಮಂದಿರ ನಿರ್ಮಾಣ ಮಾಡಲಾಗಿದೆ. ದಿನದ ಬಾಡಿಗೆ ₹20 ಸಾವಿರ ನಿಗದಿ ಮಾಡಲಾಗಿದೆ’ ಎಂದರು.
ತೆಲುಗು ಸಾಹಿತಿ ಡಾ. ಯಾರ್ಲಗುಡ್ಡ ಲಕ್ಷ್ಮಿಪ್ರಸಾದ್, ನಟಿ ಜಯಪ್ರದ, ಬರಗೂರು ರಾಮಚಂದ್ರಪ್ಪ, ನಟ ಸಾಯಿಕುಮಾರ್ ಅವರಿಗೆ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
Comments are closed.