ಕರ್ನಾಟಕ

ಪರಿಹಾರಕ್ಕೆ ಪಟ್ಟು : ಕಾವೇರಿ ಕಣಿವೆಯ ಮೇಲೆ ಗೌಡರು, ಕೆಳಗೆ ಬಿಎಸ್‌ವೈ

Pinterest LinkedIn Tumblr

deve-bsy

ಮಂಡ್ಯ,/ಹಾಸನ, ಸೆ.೧೧: ಕಾವೇರಿ ಹೋರಾಟದ ಕಿಚ್ಚು ದಿನದಿಂದ ದಿನ್ಕಕೆ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾವೇರಿ ಜಲಾನಯನ ಪ್ರದೇಶಗಳಲ್ಲಿರುವ ಜಲಾಶಯಗಳ ವಾಸ್ತವ ಸ್ಥಿತಿಗತಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿ ಮಮ್ಮಲ ಮರುಗಿದರೆ, ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರೈತರ ಹೋರಾಟಕ್ಕೆ ಕೈಜೋಡಿಸುವ ಮೂಲಕ ಮತ್ತಷ್ಟು ಬಲ ತಂದುಕೊಟ್ಟಿದ್ದಾರೆ.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೆಲಿಕಾಪ್ಟರ್ ಮೂಲಕ ತೆರಳಿ ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳ ವೈಮಾನಿಕ ಸಮೀಕ್ಷೆ ನಡೆಸಿ, ಅಲ್ಲಿನ ವಾಸ್ತವ ಸ್ಥಿತಿ-ಗತಿ ಹಾಗೂ ರೈತರಿಗೆ ನೀರಿಲ್ಲದಿರುವುದ್ನು ಕಣ್ಣಾರೆ ಕಂಡು ಮಮ್ಮಲ ಮರುಗಿದರು.
ಕಾವೇರಿ ಹೋರಾಟ ಸಮಿತಿ ಅಧ್ಯಕ್ಷ ಮಾಜಿ ಸಂಸದ ಜಿ.ಮಾದೇಗೌಡ ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಡ್ಯದಲ್ಲಿ ಸಾಥ್ ನೀಡುವ ಮೂಲಕ ರೈತರೊಂದಿಗೆ ನಾನಿರುತ್ತೇನೆ ಎನ್ನುವ ಅಭಯ ನೀಡಿದ್ದಾರೆ.
ದೇವೇಗೌಡರು ಜಲಾಶಯಗಳಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಯಡಿಯೂರಪ್ಪ ಮಂಡ್ಯದಲ್ಲಿ ರೈತರೊಂದಿಗೆ ಹೋರಾಟಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಎರಡೂ ಕಡೆ ಭಾರಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು.
ವೈಮಾನಿಕ ಸಮೀಕ್ಷೆ ಆರಂಭಿಸುವುದಕ್ಕೂ ಮುನ್ನ ಜಕ್ಕೂರು ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ರಾಜ್ಯದ ರೈತರಿಗೆ ಒಂದು ಬೆಳೆ ಬೆಳೆಯಲು ಜಲಾಶಯಗಳಲ್ಲಿ ನೀರಿಲ್ಲ .ಹೀಗಿರುವಾಗ ತಮಿಳುನಾಡು ಸರ್ಕಾರ ಮೂರು ಬೆಳೆಗಳಿಗೆ ನೀರು ಕೇಳಿರುವುದು ದುರದುಷ್ಟಕರ. ಕನ್ನಡಿಗರು ದೇಶದಲ್ಲಿ ಯಾವುದೇ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಂಡಿಲ್ಲ. ಸದಾ ಶಾಂತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಅಗೌರವ ತೋರಬಾರದು ಎನ್ನುವ ಕಾರಣಕ್ಕೆ ತಮಿಳುನಾಡಿಗೆ ನೀರು ಬಿಡಲಾಗಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ರಾಜ್ಯದ ೬ ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲದಂತಾಗಿದೆ. ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರೈತರ ಬೆಳೆಗಳಿಗೆ ಪರಿಹಾರ ನೀಡಬೇಕು. ಈ ಮೂಲಕ ಸಂಕಷ್ಟದಲ್ಲಿರುವ ರೈತರನ್ನು ಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಅಕ್ಕಪಕ್ಕದ ರಾಜ್ಯಗಳು ಸುಖ-ದುಃಖಗಳನ್ನು ಹಂಚಿಕೊಂಡು ಬದುಕಬೇಕಾಗಿದೆ. ಅದನ್ನು ಬಿಟ್ಟು ಸುಖ ನನಗಿರಲಿ, ಕಷ್ಟ ಮಾತ್ರ ನಿನಗಿರಲಿ ಎನ್ನುವ ತಮಿಳುನಾಡು ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಪರವಾಗಿ ಇಲ್ಲಿಗೆ ಬಂದಿದ್ದೇನೆ. ಯಾರ ವಿರುದ್ಧವೂ ಟೀಕೆ ಮಾಡುವುದಿಲ್ಲ. ನೀರಿನ ವಸ್ತುಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಲಿದ್ದೇನೆ. ಈಗಾಗಲೇ ನೀರಿನ ಸಮಸ್ಯೆ ಬಗ್ಗೆ ಪ್ರಧಾನಿ ಹಾಗೂ ನಾರಿಮನ್ ಜೊತೆ ಚರ್ಚೆ ನಡೆಸಿದ್ದೇನೆ ಎಂದರು.
ಮಂಡ್ಯದ ಸಂಜಯ್ ವೃತ್ತದ ಬಳಿ ಇರುವ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಎಸ್ ಯಡಿಯೂರಪ್ಪ , ಕೆಆರ್‌ಎಸ್ ಸುತ್ತಮುತ್ತ ಎಲ್ಲೂ ನೀರಿಲ್ಲ. ಆದರೂ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಸರ್ಕಾರದ ಬೇಜವಾಬ್ದಾರಿತನದಿಂದ ಹೋರಾಟ ನಡೆಯುತ್ತಿದೆ. ತುರ್ತು ಅಧಿವೇಶನ ಕರೆದು ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು. ಕೂಡಲೇ ರೈತರ ಮೇಲೆ ಹೂಡಿರುವ ಪ್ರಕರಣ ಹಿಂಪಡೆಯಬೇಕು ಹಾಗೂ ರೈತರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಸರ್ವ ಪಕ್ಷ ಸಭೆಯಲ್ಲಿ ನೀರು ಬಿಡದಂತೆ ತೀರ್ಮಾನವಾಗಿತ್ತು. ಆದರೆ ಅದನ್ನು ಉಲ್ಲಂಘಿಸಿ ನೀರು ಬಿಡಲಾಗುತ್ತಿದೆ. ವಾಸ್ತವ ಸ್ಥಿತಿ ಸುಪ್ರೀಂ ಕೋರ್ಟ್‌ಗೆ ತಿಳಿಸಲು ಸರ್ಕಾರ ವಿಫಲವಾಗಿದೆ. ನಮ್ಮ ರೈತರು ಕಣ್ಣೀರಿಡುವ ದಾರುಣ ಸ್ಥಿತಿ ಬಂದಿದೆ. ಇದಕ್ಕೆ ಸರ್ಕಾರವೇ ಕಾರಣ. ಜನರು ಶಾಂತಿಯುತ ಹೋರಾಟ ನಡೆಸಬೇಕು. ಇದಕ್ಕೆ ನಮ್ಮ ಬೆಂಬಲವಿದೆ. ರೈತರಿಗೆ ನಾವು ಪ್ರಾಣ ಕೊಡಲು ಸಿದ್ಧರಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.
ಅತ್ತ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಯುತ್ತಿದ್ದರೆ, ಇತ್ತ ಹಳೆ ಮೈಸೂರು ಭಾಗದಲ್ಲಿ ಪ್ರತಿಭಟನೆ ಕಾವು ಕೂಡ ಏರುತ್ತಲೇ ಇದೆ. ಕೆ.ಆರ್‌ಎಸ್ ಬಳಿ ರೈತರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಅದೇ ರೀತಿ ಹಾಸನದಲ್ಲೂ ಹೋರಾಟ ಮುಂದುವರಿದಿದೆ.
ಮಂಡ್ಯದ ಸಂಜಯ್ ಸರ್ಕಲ್ ಪ್ರತಿಭಟನೆಯ ತಾಣವಾಗಿದ್ದು, ಇಲ್ಲಿ ದಿನಂಪ್ರತಿ ಕನ್ನಡಪರ ಸಂಘಟನೆಗಳ ವಿಭಿನ್ನ ಪ್ರತಿಭಟನೆ ನಡೆಸುವ ಮೂಲಕ ಹೋರಾಟವನ್ನು ಜೀವಂತವಾಗಿಟ್ಟಿವೆ.
ಮಂಡ್ಯ ಮಾತ್ರವಲ್ಲದೇ ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ಹಲವೆಡೆಯೂ ಕಾವೇರಿ ಉಳಿಸಿ ಹೋರಾಟ ಜೋರಾಗಿದೆ. ಇನ್ನೂ ಸೆಪ್ಟೆಂಬರ್ ೧೬ರವರೆಗೆ ಬೃಂದಾವನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಬಸ್ ಸಂಚಾರ ಸುಗಮ
ಕಾವೇರಿ ನದಿ ವಿಚಾರದಲ್ಲಿ ವಿವಾದ ಭುಗಿಲೆದ್ದಿದ್ದ ಕಾರಣ ಸ್ಥಗಿತಗೊಂಡಿದ್ದ ತಮಿಳುನಾಡು-ಕರ್ನಾಟಕ ನಡುವಿನ ಬಸ್ ಸಂಚಾರ ಮತ್ತೆ ಆರಂಭವಾಗಿದೆ.
ಕಳೆದ ಮಂಗಳವಾರದಿಂದ ಉಭಯ ರಾಜ್ಯಗಳ ನಡುವಿನ ಬಸ್ ಸಂಚಾರ ನಿಂತಿತ್ತು. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ತಮಿಳುನಾಡಿಗೆ ತೆರಳಿದ್ದರೂ ತಮಿಳುನಾಡಿನಿಂದ ಬಸ್‌ಗಳು ರಾಜ್ಯಕ್ಕೆ ಬರುತ್ತಿರಲಿಲ್ಲ. ಕರ್ನಾಟಕದ ಗಡಿ ಭಾಗವಾದ ಹೊಸೂರಿನಿಂದ ಕೂಡ ಬಸ್ ಸಂಚಾರ ನಿಂತು ಹೋಗಿತ್ತು.
ಇಂದು ಬೆಳಗ್ಗೆ ತಮಿಳುನಾಡಿನಿಂದ ನಗರಕ್ಕೆ ೩೫ಕ್ಕೂ ಅಧಿಕ ಬಸ್‌ಗಳು ಆಗಮಿಸಿವೆ. ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಚೆನ್ನೈ ಮುಂತಾದ ಭಾಗಗಳಿಂದ ಬಸ್‌ಗಳು ನಗರಕ್ಕೆ ಬಂದು ತಲುಪಿವೆ. ಇವೆಲ್ಲವೂ ಅತ್ತಿಬೆಲೆ ಟೋಲ್ ಕೇಂದ್ರದ ಮೂಲಕ ನಗರ ಪ್ರವೇಶಿಸಿವೆ.

೫ನೆ ದಿನಕ್ಕೆ ಅಹೋರಾತ್ರಿ ಧರಣಿ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಜೆಡಿಎಸ್ ಪಕ್ಷದ ವತಿಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಇಂದು ೫ನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಮಾಜಿ ಸಚಿವ, ಶಾಸಕ ಹೆಚ್.ಡಿ. ರೇವಣ್ಣ ಅವರ ನೇತೃತ್ವದಲ್ಲಿ ಶಾಸಕರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು, ಬೆಂಬಲಿಗರು ಧರಣಿಯಲ್ಲಿ ಭಾಗವಹಿಸಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ನೀರು ಹರಿಸುವುದನ್ನು ನಿಲ್ಲಿಸದಿದ್ದಲ್ಲಿ ಹಾಸನದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಾಗುವುದೆಂದು ರೇವಣ್ಣ ಎಚ್ಚರಿಸಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಹೇಮಾವತಿ ಜಲಾಶಯದಿಂದ ನೀರು ಹರಿಸುತ್ತಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿರುವ ರೇವಣ್ಣ, ನೀರು ಹರಿಸುವುದನ್ನು ನಿಲ್ಲಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ನಾಳೆ ಪಕ್ಷದ ಶಾಸಕರು, ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪ್ರತಿ ತಾಲೂಕಿನಿಂದ ಒಂದು ಸಾವಿರ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು ರೇವಣ್ಣ.
ಈಗಾಗಲೇ ಹೇಮಾವತಿ ಜಲಾಶಯದಿಂದ ನೀರು ತಮಿಳುನಾಡಿಗೆ ಹರಿಯುತ್ತಿದ್ದು, ಸೆ. ೧೬ರ ತನಕ ನೀರು ಹರಿದರೆ, ಜಲಾಶಯದಲ್ಲಿ ನೀರು ಉಳಿಯುವುದು ೩ ರಿಂದ ೪ ಟಿಎಂಸಿ ನೀರು ಮಾತ್ರ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರು ಜಿಲ್ಲೆಯ ಜನರಿಗೆ ಬೇಕು, ರೈತರು ಬೆಳೆದ ಬೆಳೆಗಳು ಒಣಗುತ್ತಿದ್ದು, ಇದನ್ನು ರಕ್ಷಿಸಲು ನೀರು ಎಲ್ಲಿಂದ ತರುವುದು ಎಂದು ಪ್ರಶ್ನೆ ಮಾಡಿದರು.
ಇಂದು ಮಧ್ಯಾಹ್ನ ಜಾತ್ಯತೀತ ಜನತಾದಳ ಮಹಿಳಾ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯೆ ಭವಾನಿ ರೇವಣ್ಣ ಅವರ ನೇತೃತ್ವದಲ್ಲಿ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಜೆಡಿಎಸ್ ಪಕ್ಷದ ಮಹಿಳಾ ಕಾರ್ಯಕರ್ತರು, ಬೆಂಬಲಿಗರು ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತ, ವಿವಿಧ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಆಗಮಿಸಿ ಧರಣಿ ನಡೆಸಿದರು. ಕಾವೇರಿ ನಮ್ಮದು, ಹೇಮಾವತಿ ನದಿಯಿಂದ ನೀರು ಬಿಡುತ್ತಿರುವುದನ್ನು ರಾಜ್ಯ ಸರ್ಕಾರ ತಕ್ಷಣ ನಿಲ್ಲಿಸಬೇಕೆಂದು ಭವಾನಿ ರೇವಣ್ಣ ಆಗ್ರಹಿಸಿದರು.
ಧರಣಿ; ಅಹೋರಾತ್ರಿ ನಡೆಯುತ್ತಿರುವ ಧರಣಿಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ ಜಾನಪದ ಸಂಗೀತಗಾರರು ಭಜನೆ, ಹರಿಕಥೆ, ಜಾನಪದ ಹಾಡುಗಳನ್ನು ಹೇಳುವ ಮೂಲಕ ಧರಣಿಗೆ ರಂಗು ನೀಡಿದರು.

Comments are closed.