ಬೆಂಗಳೂರು, ಸೆ. ೧೦- ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದ್ದು, ತಮಿಳುನಾಡಿಗೆ ನೀರು ಬಿಡುವ ಇಂದಿನ ಸ್ಥಿತಿಗೆ ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪ ಹರಿಹಾಯ್ದಿದ್ದಾರೆ.
ಬಿಜೆಪಿ ಕಛೇರಿಯಲ್ಲಿಂದು ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾವೇರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತಜ್ಞರ ಸಮಿತಿ ಕಳುಹಿಸಲು ಸಿದ್ಧವಾಗಿತ್ತು. ಆದರೆ, ರಾಜ್ಯಸರ್ಕಾರ ತಾನೇ ಮುಂದಾಗಿ 10 ಸಾವಿರ ಕ್ಯೂಸೆಕ್ ನೀರನ್ನು 6 ದಿನಗಳ ಕಾಲ ಬಿಡುವುದಾಗಿ ಅಫಿಡೆವಿಟ್ ಸಲ್ಲಿಸಿ ತಪ್ಪು ಮಾಡಿತು ಎಂದರು ಸರ್ಕಾರದ ಈ ನಿಲುವಿನಿಂದ ಸುಪ್ರೀಂಕೋರ್ಟ್ 15 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶಿಸಿತು. ಸರ್ಕಾರದ ಮೂರ್ಖತನದಿಂದ ಕಾವೇರಿ ಕಣಿವೆ ರೈತರು ಕಷ್ಟಕ್ಕೆ ಸಿಲುಕುವಂತಾಗಿದೆ ಎಂದರು.
ತಮಿಳುನಾಡಿನ ಜತೆಗೆ ರಾಜ್ಯದ ರೈತರಿಗೂ ಕಾವೇರಿ ನೀರನ್ನು ಬಿಡುಗಡೆ ಮಾಡಿರುವುದು ಕೇವಲ ಕಣ್ಣೊರೆಸುವ ತಂತ್ರ ಎಂದವರು ಟೀಕಿಸಿದರು.
ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವರು ಮನಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಸರ್ಕಾರದ ತಪ್ಪು ನಿರ್ಧಾರಗಳಿಂದ ತಮಿಳುನಾಡಿಗೆ ನೀರು ಬಿಡುವಂತಹ ಪರಿಸ್ಥಿತಿ ಸೃಷ್ಟಿಯಾಯಿತು. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದವರು ದೂರಿದರು.
ರಾಜ್ಯದಲ್ಲಿ ಈ ವರ್ಷವೂ ಬರ ಕಾಣಿಸಿಕೊಂಡಿದೆ. ಕೆರೆ ಕಟ್ಟೆಗಳು ಒಣಗಿ ಹೋಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಕ್ಷೇತ್ರ ಬಿಟ್ಟು ಅಲುಗಾಡದೆ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.
ಸಮಾವೇಶ
ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವನ್ನು ನ. 27 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಸುಮಾರು 3 ಲಕ್ಷ ಜನರು ಸಮಾವೇಶಕ್ಕೆ ಸೇರಲಿದ್ದು, ಈ ಸಮಾವೇಶ ಯಶಸ್ವಿಯಾಗಿ ನಡೆಸಲು ಈಗಿನಿಂದಲೇ ಸಿದ್ಧತೆ ನಡೆಸಿ ಎಂದವರು ಕಾರ್ಯಕರ್ತರಿಗೆ ಸೂಚಿಸಿದರು.
ಹಿಂದುಳಿದ ವರ್ಗಗಳ ಮೋರ್ಚಾ ಇರುವುದು ಕೇವಲ ಸಭೆ ಸಮಾರಂಭ ನಡೆಸಲು ಅಲ್ಲ. ಸಮಾಜದ ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಪಡಿಸಬೇಕು ಎಂದರು.
ಮಿಷನ್ 150
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಬೇಕಿದೆ. ಪ್ರಧಾನಿ ನರೇಂದ್ರಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿ, ಮುಖಂಡರಾದ ಅರವಿಂದ ಲಿಂಬಾವಳಿ, ಹಾಲಪ್ಪ, ಸಂಸದ ಪಿ.ಸಿ ಮೋಹನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಕರ್ನಾಟಕ
Comments are closed.