ಕರ್ನಾಟಕ

ಬಿಪಿಎಲ್‌ಗೆ ಆಧಾರ್ ಕಡ್ಡಾಯ

Pinterest LinkedIn Tumblr

aadhar-cardsಬೆಂಗಳೂರು, ಸೆ. ೧೦- ನಗರ ಪ್ರದೇಶದಲ್ಲಿ ಈ ತಿಂಗಳ ಅಂತ್ಯದೊಳಗೆ ಬಿಪಿಎಲ್ ಕಾರ್ಡ್‌ದಾರರು ಆಧಾರ್ ಕಾರ್ಡ್‌ಗಳನ್ನು ಜೋಡಿಸದಿದ್ದರೆ, ಅಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗುವುದು. ಆನ್ ಲೈನ್ ಮೂಲಕ ಬಿಪಿಎಲ್‌ಗೆ ಅರ್ಜಿ ಹಾಕುವ ವ್ಯವಸ್ಥೆ ಗ್ರಾಮೀಣ ಭಾಗದಲ್ಲಿ ಈ ತಿಂಗಳ ಅಂತ್ಯಕ್ಕೆ ಆರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಇಂದು ಇಲ್ಲಿ ತಿಳಿಸಿದ್ದಾರೆ.

ಬಿಪಿಎಲ್ ಕಾರ್ಡ್‌ದಾರರ ಎಲ್ಲಾ ಸದಸ್ಯರು ತಮ್ಮ ಆಧಾರ್ ಸಂಖ್ಯೆಗಳನ್ನು ಕಾರ್ಡ್‌ನೊಂದಿಗೆ ಜೋಡಿಸುವಂತೆ ತಿಳಿಸಲಾಗಿತ್ತು. ಒಟ್ಟಾರೆ ಶೇ. 72 ರಷ್ಟು ಮಂದಿ ಆಧಾರ್ ಸಂಖ್ಯೆ ಜೋಡಣೆ ಮಾಡಿದ್ದಾರೆ. ಇನ್ನು ಕೆಲವೆಡೆ ಜೋಡಣೆ ಮಾಡಿಲ್ಲ. ಈ ತಿಂಗಳ ಅಂತ್ಯದೊಳಗೆ ಜೋಡಿಸದಿದ್ದರೆ, ಅಂತಹ ಕಾರ್ಡ್‌ಗಳನ್ನು ಬೋಗಸ್ ಕಾರ್ಡ್‌ಗಳೆಂದು ರದ್ದು ಮಾಡಲಾಗುವುದು ಎಂದು ಅವರು ವಿವರಿಸಿದರು.

ಮೂರು ತಿಂಗಳಿಗೊಮ್ಮೆ ಕೂಪನ್
ಕೂಪನ್ ವಿತರಣೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದು, ಮುಂದಿನ ತಿಂಗಳಿನಿಂದ ಮೂರು ತಿಂಗಳ ಕೂಪನ್‌ಗಳನ್ನು ಒಟ್ಟಿಗೆ ನೀಡಲಾಗುವುದು. ಗ್ರಾಮೀಣ ಮಟ್ಟದಲ್ಲಿ ವಿದ್ಯುತ್ ಸಂಪರ್ಕ ಸಮಸ್ಯೆ, ಅಂತರ್ಜಾಲ ಸಮಸ್ಯೆಯಿಂದಾಗಿ ಕೂಪನ್ ವಿತರಣೆ ಸರಿಯಾಗಿ ಆಗಿಲ್ಲ. ಇದರಿಂದ ಗ್ರಾಹಕರಿಗೆ ತೊಂದರೆಯಾಗಿದೆ. ಆದ್ದರಿಂದ ಮೊಬೈಲ್ ಮೂಲಕ ಕೂಪನ್ ವಿತರಿಸುವ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು.
ಒಂದು ಜಿಲ್ಲೆಗೆ ಹತ್ತು ಮೊಬೈಲ್ ಯಂತ್ರಗಳನ್ನು ವಿತರಿಸಲಾಗುವುದು. ನಿರ್ದಿಷ್ಟ ಸ್ಥಳದಲ್ಲಿ ಗ್ರಾಹಕರು ತಮ್ಮ ಕೂಪನ್‌ಗಳನ್ನು ಬಯೋಮೆಟ್ರಿಕ್ ಸಲ್ಲಿಸಿ ಕೂಪನ್‌ಗಳನ್ನು ಸ್ವೀಕರಿಸಬಹುದು ಎಂದು ಹೇಳಿದರು.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಗ್ರಾಮೀಣ ಭಾಗದಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲಿ ಅಲ್ಲಿನ ಪಿಡಿಒ ಅರ್ಜಿಯ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಕೊಡಲಿದ್ದಾರೆ. ಈ ವರದಿ ಪರಿಶೀಲಿಸಿ ವಾರದೊಳಗೆ ಪಡಿತರ ಚೀಟಿಗಳನ್ನು ವಿತರಿಸಲಾಗುವುದು.
ನಗರ ಪ್ರದೇಶದಲ್ಲಿ ಈ ವ್ಯವಸ್ಥೆ ಇನ್ನಷ್ಟು ವಿಳಂಬವಾಗಬಹುದು. ನಗರಾಭಿವೃದ್ಧಿ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಂದ ಇನ್ನೂ ಸಕಾರಾತ್ಮಕ ಸ್ಪಂದನೆ ಬಂದಿಲ್ಲ. ಇನ್ನೊಂದು ಸುತ್ತಿನ ಮಾತುಕತೆ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದರು.‌
ಗ್ರಾಮೀಣ ಭಾಗದಲ್ಲಿ ಅರ್ಜಿ ಸಲ್ಲಿಸಿದವರಿಗೆ ಅಂಚೆ ಮೂಲಕ ಬಿಪಿಎಲ್ ಕಾರ್ಡ್‌ಗಳನ್ನು ಪೋಸ್ಟ್ ಮಾಡಲಾಗುವುದು. ಒಟ್ಟಾರೆ ಬಿಪಿಎಲ್ ಕಾರ್ಡ್‌ದಾರರು 70 ರೂ. ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

Comments are closed.