ಬೆಂಗಳೂರು: ಎಬಿವಿಪಿ ಕಾರ್ಯಕರ್ತರು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆಯ ಕಚೇರಿಗೆ ಮುತ್ತಿಗೆ ಹಾಕಲು ಉದ್ದೇಶಿಸಿದ್ದರಿಂದ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ (work from home) ಸಂಸ್ಥೆ ತನ್ನ ಸಿಬ್ಬಂದಿಗೆ ಸೂಚಿಸಿದೆ.
ಇಂದಿರಾನಗರದಲ್ಲಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆಯ ಕಚೇರಿಗೆ ಗುರುವಾರ ಮುತ್ತಿಗೆ ಹಾಕಲು ಎಬಿವಿಪಿ ಕಾರ್ಯಕರ್ತರು ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಪೊಲೀಸರು ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಎಬಿವಿಪಿ ಕಾರ್ಯಕರ್ತರು ಕಚೇರಿಗೆ ನುಗ್ಗಿ ಗದ್ದಲ ಎಬ್ಬಿಸಬಹುದೆಂಬ ಕಾರಣಕ್ಕೆ ಗುರುವಾರ ಕಚೇರಿ ತೆರೆಯದಂತೆ ಪೊಲೀಸರು ಸಂಸ್ಥೆಗೆ ಸಲಹೆ ನೀಡಿದ್ದರು. ಹೀಗಾಗಿ ಗುರುವಾರ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸಂಸ್ಥೆ ತನ್ನ ಸಿಬ್ಬಂದಿಗೆ ಸೂಚನೆ ನೀಡಿದೆ.
ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆಯ ಬೆಂಗಳೂರು ಕಚೇರಿಯಲ್ಲಿ 80ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಇದ್ದಾರೆ.
‘ಯಾವಾಗ ಕಚೇರಿ ತೆರೆಯುವುದು ಸೂಕ್ತ ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಸೋಮವಾರದವೆರೆಗೆ ಕಚೇರಿ ತೆರೆಯುವುದು ಅನುಮಾನ. ಮುಂದಿನ ಬೆಳವಣಿಗೆ ನೋಡಿಕೊಂಡು ಕಚೇರಿ ಕಾರ್ಯನಿರ್ವಹಿಸಲಿದೆ’ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.
Comments are closed.