ಧಾರವಾಡ: ‘ಪೊಲೀಸ್ ಇಲಾಖೆಯಲ್ಲಿ ಕೆಲಸದ ಒತ್ತಡ ಹೆಚ್ಚು ಇರುವ ಪ್ರದೇಶಗಳಲ್ಲಿ ಎಂಟು ಗಂಟೆಗಳ ಒಂದು ಹೆಚ್ಚುವರಿ ಪಾಳಿಯನ್ನು ಜಾರಿಗೆ ತರುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಅದು ಜಾರಿಗೆ ಬರಲಿದೆ’ ಎಂದು ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ ಹೇಳಿದರು.
ಇಲ್ಲಿನ ಪೊಲೀಸ್ ತರಬೇತಿ ಶಾಲೆಯಲ್ಲಿ ಗುರುವಾರ ನಡೆದ ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್‌ಗಳ ಮೊದಲ ತಂಡದ ನಿರ್ಗಮನ ಪಥ ಸಂಚಲನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಆರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಇದು ಜಾರಿಗೆ ಬರಲಿದೆ. ನಂತರ ರಾಜ್ಯದ ಕಮಿನಷನರೇಟ್ ವ್ಯಾಪ್ತಿಗೆ ಒಳಪಡುವ ಹುಬ್ಬಳ್ಳಿ–ಧಾರವಾಡ, ಮಂಗಳೂರು, ಮೈಸೂರು, ಬೆಳಗಾವಿಯ ನಗರಗಳಲ್ಲಿ ಹಾಗೂ ಮೂರನೇ ಹಂತದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿ ಬೇಕಿದ್ದು, ಸರ್ಕಾರಕ್ಕೆ ಆರ್ಥಿಕ ಹೊರೆಯೂ ಆಗಲಿದೆ. ಹೀಗಾಗಿ ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರುವ ಕುರಿತು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.
‘ಸದ್ಯ ಇಲಾಖೆಯಲ್ಲಿರುವ 25 ಸಾವಿರ ಪೊಲೀಸ್ ಸಿಬ್ಬಂದಿ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಈ ವರ್ಷದ ಅಂತ್ಯದೊಳಗಾಗಿ 19ಸಾವಿರ ಪೊಲೀಸರ ನೇಮಕಾತಿ ಪೂರ್ಣಗೊಳ್ಳಲಿದೆ. ಈಗಾಗಲೇ ಆರು ಸಾವಿರ ಸಿಬ್ಬಂದಿ ತರಬೇತಿ ಮುಗಿಸಿ ತಮ್ಮ ಕರ್ತವ್ಯ ಸ್ಥಳಗಳಿಗೆ ನಿಯೋಜನೆಗೊಂಡಿದ್ದಾರೆ. ಉಳಿದಂತೆ ಇನ್ನು ಆರು ಸಾವಿರ ಸಿಬ್ಬಂದಿಯ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದೆ. ಉಳಿದ ಸಿಬ್ಬಂದಿಗಳ ನಿಯೋಜನೆ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದರು.
‘ಜೂನ್ ತಿಂಗಳಿನಲ್ಲಿ ಇಲಾಖೆಯಲ್ಲಿ ಇಲಾಖೆಯಲ್ಲಿ ನಡೆಯಬಹುದಾಗಿದ್ದ ಕೆಲವೊಂದು ಅಹಿತಕರ ಘಟನೆಯು ಸಿಬ್ಬಂದಿಗಳ ಕಾಳಜಿಯಿಂದ ತಪ್ಪಿತು. ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಕಲ್ಯಾಣಕ್ಕಾಗಿ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಪೊಲೀಸ್ ಕಲ್ಯಾಣ ಸಮಿತಿ ರಚನೆಯಾಗಿದ್ದು, ಶೀಘ್ರದಲ್ಲಿ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡು ಶುಭ ಸುದ್ದಿ ಪ್ರಕಟಿಸಲಿದೆ. ಪಡಿತರ ವಿತರಣೆಗೆ ಸಂಬಂಧಿಸಿದಂತೆ ವಿತರಣೆಯಲ್ಲಿ ಸಮಸ್ಯೆ ಹಾಗೂ ಗುಣಮಟ್ಟದ ಆಹಾರ ಧಾನ್ಯಗಳು ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಪಡಿತರ ಮೊತ್ತವನ್ನು ಸಿಬ್ಬಂದಿ ಖಾತೆಗೆ ವರ್ಗಾಯಿಸುವ ವಿಷಯವೂ ಸಮಿತಿಯ ಮುಂದಿದೆ. ಮುಂದಿನ 15 ದಿನಗಳ ಒಳಗಾಗಿ ಈ ಕುರಿತು ತೀರ್ಮಾನವಾಗಲಿದೆ’ ಎಂದರು.
‘ಆರೋಗ್ಯ ಭಾಗ್ಯ ಯೋಜನೆಯಲ್ಲಿ ಹಣ ಪಾವತಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಸಲುವಾಗಿ ಹೊಸ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಆಸ್ಪತ್ರೆಗೆ ದಾಖಲಾಗುವ ಸಿಬ್ಬಂದಿಯ ಆಸ್ಪತ್ರೆ ರಶೀದಿಗಳು ನೇರವಾಗಿ ಕೇಂದ್ರ ಕಚೇರಿಗೆ ಬರಲಿವೆ. ಅಲ್ಲಿಂದ 60 ದಿನಗಳ ಒಳಗಾಗಿ ಆಸ್ಪತ್ರೆಗೆ ಹಣ ಪಾವತಿಯಾಗಲಿದೆ. ಇದಕ್ಕಾಗಿ ಸ್ಮಾರ್ಟ್ ಕಾರ್ಡ್ ಜಾರಿಗೆ ತರುವ ಉದ್ದೇಶವೂ ಇಲಾಖೆಗೆ ಇದೆ’ ಎಂದರು.
‘ಒತ್ತಡ ನಿವಾರಣೆಗಾಗಿ ಆಪ್ತಸಲಹೆಗಾರರು ಹಾಗೂ ಹಿರಿಯ ಆಪ್ತಸಲಹೆಗಾರರ ನೇಮಕ ಶೀಘ್ರದಲ್ಲಿ ಆಗಲಿದೆ. ಯೋಗಕ್ಷೇಮ ಅಧಿಕಾರಿ ಎಂದು ಕರೆಯಲಾಗುವ ಈ ಹುದ್ದೆಗಾಗಿ 100 ಜನರನ್ನು ಇಲಾಖೆ ನೇಮಕ ಮಾಡಿಕೊಳ್ಳಲಿದೆ. ಇಲಾಖೆಯಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತಿರುವುದರಿಂದ ಯೋಗಕ್ಷೇಮ ಅಧಿಕಾರಿಗಳ ನೇಮಕ ಅಗತ್ಯವಿದೆ. ಇವರು ಪ್ರತಿ ಜಿಲ್ಲೆ, ಕಮಿಷನರೇಟ್‌್ ವ್ಯಾಪ್ತಿ, ಕೆಎಸ್‌ಆರ್‌ಪಿ ಬೆಟಾಲಿಯನ್ ಮುಂತಾದ ಕಡೆ ಕಾರ್ಯ ನಿರ್ವಹಿಸಲಿದ್ದಾರೆ’ ಎಂದು ತಿಳಿಸಿದರು.
‘ಇಲಾಖೆಗೆ 100 ಹೊಸ ಬಸ್‌ಗಳ ಖರೀದಿ ನಡೆದಿದ್ದು, ಹದಿನೈದು ದಿನಗಳ ಒಳಗಾಗಿ ಅವರು ಆಯಾ ವ್ಯಾಪ್ತಿಗೆ ಸೇರಲಿವೆ. ಕೆಎಸ್‌ಆರ್‌ಪಿಗೆ 50 ಹಾಗೂ ಉಳಿತ ವಿಭಾಗಗಳಿಗೆ 50 ಬಸ್‌ಗಳನ್ನು ಹಂಚಲಾಗುವುದು. ಅದರಂತೆಯೇ ಹೊಯ್ಸಳ ತುಕಡಿಗಾಗಿ 222 ಮಾರುತಿ ಸುಜುಕಿ ಎರ್ಟಿಗಾ ಕಾರು ಖರೀದಿಯೂ ಪ್ರಗತಿಯಲ್ಲಿದೆ. ಕಮಿನಷನರೇಟ್ ವ್ಯಾಪ್ತಿಗೂ ಇಂಥ ವಾಹನ ನೀಡಲಾಗುವುದು’ ಎಂದು ಓಂಪ್ರಕಾಶ ತಿಳಿಸಿದರು.
Comments are closed.