ವಾಷಿಂಗ್ಟನ್ : ಅನುಮತಿ ಇಲ್ಲದೇ ಬೇರೊಬ್ಬರ ಹೊಚ್ಚ ಹೊಸ ಕಾರನ್ನು ಒಯ್ದು, ನಿರ್ಲಕ್ಷ್ಯದಿಂದ ಚಲಾಯಿಸಿ, ತೋಡಿಗೆ ಬೀಳಿಸಿ, ಬಳಿಕ ಅದನ್ನು ಮೇಲೆತ್ತಲು ನೆರವಿಗೆ ಕರೆಸಿಕೊಂಡ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಹದಿಹರೆಯದ ಕಪ್ಪು ವರ್ಣೀಯ ತರುಣರಿಬ್ಬರನ್ನು ದಕ್ಷಿಣ ಕೆರೋಲಿನಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ತರುಣರನ್ನು 19ರ ಹರೆಯದ ಮೈಕಲ್ ಓಡೆಲ್ ಆ್ಯಂಥನಿ ಹಾಗೂ 17ರ ಹರೆಯದ ಡಿಯೋನ್ ಅಂಟೋನಿಯೋ ಫ್ರೆಸಿಯರ್ ಎಂದು ಗುರುತಿಸಲಾಗಿದೆ.
ತಾವು ವಾಸಿಸಿಕೊಂಡಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಮಹಿಳೆಗೆ ಸೇರಿದ ಹೊಚ್ಚ ಹೊಸ ಡಾಜ್ ಡ್ಯುರಾಂಗೋ ಎಸ್‌ಯುವಿ ಕಾರನ್ನು ಇವರು ಆಕೆಯ ಅನುಮತಿ ಇಲ್ಲದೆ, ಆಕೆಗೆ ಗೊತ್ತಾಗದಂತೆ, ಒಯ್ದಿದ್ದರು. ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆಯ ಪರಿಣಾಮವಾಗಿ ಇವರ ಕಾರು ರಸ್ತೆ ಬದಿಯ ತೋಡಿಗೆ ಬಿದ್ದಿತ್ತು.
ತೋಡಿಗೆ ಬಿದ್ದ ಕಾರನ್ನು ಮೇಲೆತ್ತಲು ಈ ಕಪ್ಪುವರ್ಣೀಯ ತರುಣರು ದಾರಿಹೋಕ, 45 ರ ಹರೆಯದ ಚ್ಯಾಡ್‌ವಿಕ್ ಗ್ಯಾರೆಟ್ ಎಂಬಾತನನ್ನು ಸಹಾಯಕ್ಕೆ ಬರುವಂತೆ ಕೋರಿದರು. ತನಗೆ 20 ಡಾಲರ್ ಶುಲ್ಕ ಕೊಡುವುದಾದರೆ ತಾನು ನೆರವಿಗೆ ಬರುವೆನೆಂದು ಆತ ಹೇಳಿದ. ಅದಕ್ಕೆ ಈ ಯುವಕರು ಒಪ್ಪಿದರು.
ಕಾರನ್ನು ತೋಡಿನಿಂದ ಮೇಲೆತ್ತಿ ಕೊಟ್ಟ ಬಳಿಕ ಚ್ಯಾಡ್‌ವಿಕ್ ತರುಣರಲ್ಲಿ ತನ್ನ ಶುಲ್ಕವನ್ನು ಕೇಳಿದ. ಆಗ ತರುಣ ಫ್ರೆಸಿಯರ್ ತನ್ನ ಬಂದೂಕನ್ನು ಹೊರತೆಗೆದು ಗ್ಯಾರೆಟ್‌ಗೆ ಗುಂಡಿಟ್ಟು ಸಾಯಿಸಿದ. ಬಳಿಕ ಚ್ಯಾಡ್‌ವಿಕ್‌ನ ಬಳಿ ಇದ್ದ ಆತನ ಅಮೂಲ್ಯ ಸೊತ್ತು ಹಾಗೂ ನಗದನ್ನು ಲೂಟಿ ಮಾಡಿ ಕಾರಿನಲ್ಲಿ ಕುಳಿತ; ಡ್ಯುಪ್ರಿ ಟಯ್ಲರ್ ಕಾರನ್ನು ಚಲಾಯಿಸಿಕೊಂಡು ಹೋದ.
ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ಈ ಘಟನೆಯನ್ನು ತಿಳಿಸಿದರು. ಅದೇ ಹೊತ್ತಿಗೆ ಕಾರು ಕಳೆದುಕೊಂಡಿದ್ದ ಮಹಿಳೆ ಕೂಡ ಪೊಲೀಸರಿಗೆ ದೂರು ನೀಡಿದಳು. ಪಾತಕಿ ತರುಣರಿಬ್ಬರೂ ಈಕೆಯ ಅಪಾರ್ಟ್‌ಮೆಂಟಲ್ಲೇ ವಾಸವಾಗಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಅವರನ್ನು ಕೊಲೆ ಕೃತ್ಯದ ಅಪರಾಧಕ್ಕಾಗಿ ಕೂಡಲೇ ಬಂಧಿಸಿದರು.
ಕೋರ್ಟಿನ ಮಂದೆ ಈ ಪಾತಕಿ ತರುಣರಿಬ್ಬರನ್ನು ಹಾಜರುಪಡಿಸಲಾದಾಗ ಬಾಂಡ್ ಆಧಾರದಲ್ಲಿ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡುವುದಕ್ಕೆ ನ್ಯಾಯಾಧೀಶರು ನಿರಾಕರಿಸಿದರು. .
-ಉದಯವಾಣಿ
Comments are closed.