ಬೆಂಗಳೂರು: ಮೂವತ್ತು ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ ನಡೆಸುವ ತೀರ್ಮಾನ ಕೈಗೊಳ್ಳುವ ಮುನ್ನ ಸರ್ಕಾರ ಪೂರ್ವಭಾವಿ ಅಧ್ಯಯನ ನಡೆಸಿರಲಿಲ್ಲ. ಸಾಧ್ಯಾಸಾಧ್ಯತೆ ವರದಿ, ಹವಾಮಾನ ತಜ್ಞರ ಸಲಹೆಯನ್ನೂ ಪಡೆದಿರಲಿಲ್ಲ! ಹೌದು. ಮಳೆ ಕೊರತೆ ಹಿನ್ನೆಲೆಯಲ್ಲಿ ಮಳೆ ಮೋಡಗಳು ಇವೆಯೇ ಎಂಬುದನ್ನಷ್ಟೇ ಆಧಾರವಾಗಿಟ್ಟುಕೊಂಡು ಮೋಡ ಬಿತ್ತನೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. 2003 ಹಾಗೂ 2009ರಲ್ಲಿ ಮೋಡ ಬಿತ್ತನೆ ಮಾಡಿದ್ದರಿಂದ ಹೇಳಿಕೊಳ್ಳುವಂತಹ ಪ್ರಯೋಜನವಾಗಿಲ್ಲ ಎಂಬುದು ಗೊತ್ತಿದ್ದರೂ ಅದೇ ತಂತ್ರಜ್ಞಾನಕ್ಕೆ ಮೊರೆ ಹೋಗಿ ಮತ್ತೆ ಮೋಡ ಬಿತ್ತನೆ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿತ್ತು. ಹೀಗೆ ಮೋಡ ಬಿತ್ತನೆ ಮಾಡಿಸಿಯೇ ಬಿಡಲು ಸರ್ಕಾರದಲ್ಲಿ ಉನ್ನತ ಮಟ್ಟದಲ್ಲಿರುವ ಕೆಲವರು ಟೊಂಕ ಕಟ್ಟಿ ನಿಂತಿದ್ದರು. ಅದಕ್ಕಾಗಿಯೇ ತರಾತುರಿಯಲ್ಲಿ ಮೂವತ್ತು ಕೋಟಿ ರೂ. ಮೊತ್ತದ ಪ್ರಸ್ತಾವನೆಯನ್ನೂ ಸಿದ್ಧಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಬೇಕೆಂದಾಗ ಮೋಡ ಬಿತ್ತನೆ ನಡೆಸಲಾಗದು. ಅದಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕು. ಮಳೆ ಮೋಡಗಳು ನಿಂತಲ್ಲೇ ನಿಂತಿರುವುದಿಲ್ಲ. ಪೂರ್ವಭಾವಿ ಸಿದ್ಧತೆ ಇಲ್ಲದೆ ಮೋಡ ಬಿತ್ತನೆಯಂತಹ ಕಾರ್ಯಕ್ಕೆ ಮುಂದಾಗುವುದು ಸರಿಯಲ್ಲ. ಈಗಿನ ಸ್ಥಿತಿನಲ್ಲಿ ಮೂವತ್ತು ಕೋಟಿ ರೂ. ವೆಚ್ಚ ಮಾಡಿ ಮೋಡ ಬಿತ್ತನೆ ಮಾಡಿದರೂ ಪ್ರಯೋಜನವಾಗದು ಎಂದು ಹವಾಮಾನ ತಜ್ಞರ ಸಮಿತಿ ಸರ್ಕಾರಕ್ಕೆ ತಿಳಿಸಿದ್ದರಿಂದ ನಿರ್ಧಾರದಿಂದ ಹಿಂದೆ ಸರಿಯಲಾಯಿತು ಎಂದು ಹೇಳಲಾಗಿದೆ.
ಮೋಡ ಬಿತ್ತನೆ ಬಗ್ಗೆ ಸರ್ಕಾರಕ್ಕೆ ಹವಾಮಾನ ತಜ್ಞರು ನೀಡಿರುವ ವರದಿಯಲ್ಲಿ, ತಕ್ಷಣಕ್ಕೆ ಇಷ್ಟೊಂದು ವೆಚ್ಚದಲ್ಲಿ ಮೋಡ ಬಿತ್ತನೆ ಮಾಡುವುದು ಬೇಡ. ಆದರೆ, ಮೋಡ ಬಿತ್ತನೆಗೆ ಒಂದು ವ್ಯವಸ್ಥೆಯನ್ನು ಸರ್ಕಾರ ಸ್ವಯಂ ರೂಪಿಸಿಕೊಳ್ಳುವುದು ಸೂಕ್ತ. ಹೆಲಿಕಾಪ್ಟರ್ ಮೂಲಕ ಮೋಡ ಬಿತ್ತನೆಯಷ್ಟೇ ಅಲ್ಲದೆ, ನೆಲ ಮಟ್ಟದಿಂದ ರಾಕೆಟ್ ಚಿಮ್ಮಿಸಿ ಮೋಡ ಬಿತ್ತನೆ ನಡೆಸುವ ತಂತ್ರಜ್ಞಾನದ ಬಗ್ಗೆಯೂ ಚಿಂತನೆ ನಡೆಸಬೇಕು. ಚೀನಾ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಮೋಡ ಬಿತ್ತನೆಯನ್ನು ಮಳೆ ಕೊರತೆಯುಂಟಾದಾಗ ಮಳೆ ಮೋಡ ಗಮನಿಸಿ ಪ್ರತಿವರ್ಷ ಮಾಡುತ್ತಾರೆ. ಆದರೆ, ಅದಕ್ಕೆ ಬೇಕಾದ ವ್ಯವಸ್ಥೆ, ತಂತ್ರಜ್ಞಾನ ಹೊಂದಿರಬೇಕಾಗುತ್ತದೆ. ಬೆಟ್ಟ, ಗುಡ್ಡಗಾಡು ಪ್ರದೇಶಗಳಲ್ಲಿ ನೆಲ ಮಟ್ಟದಿಂದ ಮೋಡ ಬಿತ್ತನೆ ನಡೆಸುವುದು ಕಡಿಮೆ ಖರ್ಚು. ಪರಿಣತರ ತಂಡದ ನೆರವಿನೊಂದಿಗೆ ರೈತರು ಸಹ ಇದನ್ನು ಮಾಡಬಹುದು. ಈ ಬಗ್ಗೆಯೂ ಸರ್ಕಾರ ಯೋಚಿಸಬೇಕು. ಮೋಡ ಬಿತ್ತನೆಗೆ ನಮ್ಮದೇ ಆದ ವ್ಯವಸ್ಥೆ ಹೊಂದಿದ್ದರೆ ಮೋಡದ ಮಳೆ ಇದ್ದಾಗ ತತಕ್ಷಣ ಕೈಗೊಳ್ಳಲು ಸಾಧ್ಯ. ಒಂದೆರಡು ಹೆಲಿಕಾಪ್ಟರ್, ರಾಡಾರ್ ಇಟ್ಟಕೊಂಡು ರಾಜ್ಯವ್ಯಾಪಿ ಅಥವಾ ಚದರ ಕಿ.ಮೀ.ಗಟ್ಟಲೆ ಮಾಡಲಾಗದು ಎಂದು ತಜ್ಞರು ತಿಳಿಸಿದರು ಎಂದು ಹೇಳಲಾಗಿದೆ.
ಮೋಡಬಿತ್ತನೆ ಕುರಿತು “ಉದಯವಾಣಿ’ ಜತೆ ಮಾತನಾಡಿದ ಹವಾಮಾನ ತಜ್ಞ ಪ್ರಕಾಶ್, ಮಳೆ ಇಲ್ಲದ ಸಂದರ್ಭದಲ್ಲಿ ಮೋಡ ಬಿತ್ತನೆ ಮಾಡುವುದು ತಪ್ಪಲ್ಲ. ಆದರೆ, ಅದಕ್ಕೆ ಸುಧಾರಿತ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಬೇಕಾಗುತ್ತದೆ. “ಡಾಪ್‌ಲರ್ ವೆದರ್ ರಾಡಾರ್’ ಬಳಕೆ ಮಾಡಿದರೆ ಮೋಡ ಎಷ್ಟು ಎತ್ತರದಲ್ಲಿದೆ, ಮೋಡ ಬಿತ್ತನೆ ಮಾಡಿದರೆ ಎಷ್ಟು ಪ್ರಮಾಣದ ಮಳೆಯಾಗಬಹುದು, ಎಷ್ಟು ವ್ಯಾಪ್ತಿಗೆ ಮಳೆಯಾಗುತ್ತದೆ ಎಂಬುದರ ಸ್ಪಷ್ಟ ಮಾಹಿತಿ ನೀಡುತ್ತದೆ. ಅಂತಹ ತಂತ್ರಜ್ಞಾನ ಬೇಕಾಗುತ್ತದೆ. ಅದನ್ನು ಆಮದು ಮಾಡಿಕೊಳ್ಳುವ ಬದಲು ನಮ್ಮಲ್ಲೇ ಇದ್ದರೆ ಸೂಕ್ತ. ಎಚ್‌ಎಎಲ್, ಎನ್‌ಎಎಲ್‌ನಂತಹ ಸಂಸ್ಥೆಗಳು ಇರುವುದರಿಂದ ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದು ಕಷ್ಟವೇನಲ್ಲ ಎಂದು ಅವರು ಹೇಳುತ್ತಾರೆ.
ಮೋಡ ಬಿತ್ತನೆ ಎಂದಾಕ್ಷಣ ಹೆಲಿಕಾಪ್ಟರ್, ರಾಡಾರ್ ಕಲ್ಪನೆ ಬಿಟ್ಟು ನೆಲ ಮಟ್ಟದಿಂದ ಮೋಡ ಬಿತ್ತನೆ ಬಗ್ಗೆಯೂ ಸರ್ಕಾರ ಹೆಚ್ಚು ಚಿಂತನೆ ನಡೆಸಬೇಕು. ಏಕೆಂದರೆ ರಾಕೆಟ್ ಮೂಲಕ ಸೋಡಿಯಂ ಕ್ಲೋರೈಡ್ ಬಳಸಿ ನೆಲಮಟ್ಟದಿಂದ ಮೋಡ ಬಿತ್ತನೆ ಮಾಡುವುದು ಅತ್ಯಂತ ಕಡಿಮೆ ವೆಚ್ಚ. ಗುಡ್ಡಗಾಡು ಪ್ರದೇಶಗಳಲ್ಲಿ ಸುಲಭ ವಾಗಿ ಮಾಡಬಹುದು. ಬೇರೆಡೆ ಟವರ್‌ಗಳನ್ನು ನಿರ್ಮಾಣ ಮಾಡಿ ಕೈಗೊಳ್ಳಬಹುದು ಎಂದು ತಿಳಿಸುತ್ತಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹವಾಮಾನ ತಜ್ಞರ ತಂಡವೊಂದು ಚೀನಾಗೆ ಹೋಗಿ ಅಲ್ಲಿ ನೆಲಮಟ್ಟದಿಂದ ಮೋಡ ಬಿತ್ತನೆ ನಡೆಸುವ ತಂತ್ರಜ್ಞಾನ ಅಧ್ಯಯನ ನಡೆಸಿ ಬಂದು ಮಲೆನಾಡು ಭಾಗದಲ್ಲಿ ಟವರ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದರಿಂದ ಈ ಯೋಜನೆ ಕೈ ಬಿಡಲಾಗಿತ್ತು ಎಂದು ಹೇಳುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಬರ, ಮಳೆ ಕೊರತೆ ಸಾಮಾನ್ಯ.ಹೀಗಾಗಿ, ಯಾವಾಗಲೋ ತುರ್ತು ಎಂದು ಮೋಡ ಬಿತ್ತನೆಗೆ ಮುಂದಾಗುವುದಕ್ಕಿಂತ ಮೋಡಬಿತ್ತನೆ ಪರ್ಯಾಯ ಕ್ರಮ ಎಂದು ಪರಿಗಣಿಸಿ ಅದಕ್ಕೆ ಬೇಕಾದ ವ್ಯವಸ್ಥೆ, ತಂಡ ರಚಿಸಿಕೊಳ್ಳುವುದು ಉತ್ತಮ ಎಂದು ತಿಳಿಸುತ್ತಾರೆ.
ಎಸ್. ಲಕ್ಷ್ಮೀನಾರಾಯಣ
-ಉದಯವಾಣಿ
Comments are closed.