ರಾಷ್ಟ್ರೀಯ

ನೀವು ಉಪವಾಸ ನಿಲ್ಲಿಸಿದ್ದಕ್ಕೆ ಮಣಿಪುರದಲ್ಲಿ ಪ್ರತಿಭಟನೆ ನಡೆದಿದ್ದೇಕೆ

Pinterest LinkedIn Tumblr

ioಜಗತ್ತಿನ ಅತ್ಯಂತ ಸುದೀರ್ಘ‌ ಉಪವಾಸ ಎಂದು ಹೆಸರಾದ 16 ವರ್ಷಗಳ ನಿರಶನವನ್ನು ಮಣಿಪುರದ ಐರೋಮ್‌ ಚಾನು ಶರ್ಮಿಳಾ ಅಂತ್ಯಗೊಳಿಸಿದ್ದಾರೆ. ಸಶಸ್ತ್ರ ಮೀಸಲು ಪಡೆಗಳ ವಿಶೇಷಾಧಿಕಾರ ಕಾಯ್ದೆ ವಿರುದ್ಧ ಉಪವಾಸ ನಡೆಸಿ, ಅದರಿಂದ ಪ್ರಯೋಜನ ವಿಲ್ಲ ಎಂದು ಈಗ ಹೋರಾಟದ ಸ್ವರೂಪ ಬದಲಿಸಲು ನಿರ್ಧರಿಸಿದ್ದಾರೆ. ಆದರೆ, ಆಕೆ ಉಪವಾಸ ನಿಲ್ಲಿಸಿದ್ದಕ್ಕೆ ಮಣಿಪುರದಲ್ಲಿ ಪ್ರತಿಭಟನೆಗಳು ನಡೆದಿವೆ! ಇವೆಲ್ಲದರ ಬಗ್ಗೆ ಆಕೆ ಏನು ಹೇಳುತ್ತಾರೆ? ವಿವಿಧ ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳ ಆಯ್ದ ಭಾಗ ಇಲ್ಲಿದೆ.

16 ವರ್ಷದ ಉಪವಾಸ ಅಂತ್ಯಗೊಳಿಸಿದ್ದೀರಿ. ಇನ್ನು ಮುಂದಿನ ಬದುಕು ಸುಲಭವಾಗಿರುತ್ತದೆ ಎಂಬ ಆಶಾಭಾವನೆ ಇದೆಯೇ?
ಇಲ್ಲ. ಇದು ನನ್ನ ಬದುಕಿನ ಅತ್ಯಂತ ಕಷ್ಟದ ಅವಧಿ. ಇಷ್ಟು ದಿನ ನಾನಿದ್ದ ಸ್ಥಿತಿಗಿಂತಲೂ ಮುಂದಿನದು ಕಷ್ಟಕರವಾಗಿರಲಿದೆ. ಏಕೆಂದರೆ, ಜನರು ನನ್ನನ್ನು ಸಾಮಾನ್ಯ ವ್ಯಕ್ತಿಯಂತೆ ಸ್ವೀಕರಿಸಲು ಸಿದ್ಧರಿಲ್ಲ. ಅವರಿಗೆ ಒಂದಲ್ಲಾ ಒಂದು ದಿನ ವಾಸ್ತವ ತಿಳಿಯುತ್ತದೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಅವರ ಒಳಿತಿಗಾಗಿ ಸಶಸ್ತ್ರ ಮೀಸಲು ಪಡೆ ವಿಶೇಷಾಧಿಕಾರ ಕಾಯ್ದೆ ರದ್ದಾಗುವಂತೆ ಮಾಡಲು ನಾನು ಹುತಾತ್ಮನಾಗಲೂ ಸಿದ್ಧ. ಸದ್ಯ ನಾನೀಗ ನರಕದಲ್ಲಿದ್ದೇನೆ. ಇದು ರಾಜಕೀಯದ ನರಕ. ರಾಜಕೀಯ, ರಾಜಕಾರಣಿಗಳು ಹಾಗೂ ಸಾರ್ವಜನಿಕರ ನಡುವಿನ ಎಲ್ಲ ಸಂಗತಿಗಳಿಗೂ ಒಂದಕ್ಕೊಂದು ಸಂಬಂಧವಿದೆ. ಇದು ಅವರಿಗೆ ಗೊತ್ತಿಲ್ಲ. ಆದರೆ, ಪವಿತ್ರ ಮತಗಳು ಸಮಾಜದಲ್ಲಿ ಬದಲಾವಣೆ ತರಲಿವೆ. ನಾನು ಅದಕ್ಕೊಂದು ನೆಪವಾಗಬೇಕು. ರಾಜಕೀಯವನ್ನು ಸ್ವತ್ಛಗೊಳಿಸುವುದು ನನ್ನ ಆದ್ಯತೆ.

ಉಪವಾಸ ನಿಲ್ಲಿಸಿದ ನಂತರ ಹೇಗನ್ನಿಸುತ್ತಿದೆ?
ನಾನೀಗ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದೇನೆ ಅನ್ನಿಸುತ್ತಿದೆ. ಎಲ್ಲರೂ ನನ್ನನ್ನು ಶಾಂತಿ ಹಾಗೂ ನ್ಯಾಯವನ್ನು ಪ್ರೀತಿಸುವ ಒಬ್ಬ ಸಾಮಾನ್ಯ ಮನುಷ್ಯಳಂತೆ ನೋಡಿದರೆ ಸಾಕು. ನನ್ನಲ್ಲಿರುವ ನಿಜವಾದ ಮನುಷ್ಯನನ್ನು ಅವರು ನೋಡಲು ಯತ್ನಿಸಬೇಕು. ನಾನಿಲ್ಲಿ ಜೀವಂತವಾಗಿ ಮಲಗಿರುವಾಗಲೇ ಅವರು ನನ್ನನ್ನು ದೇವರನ್ನಾಗಿಸಲು ನೋಡುತ್ತಿದ್ದಾರೆ. ನನಗೆ ಅದೆಲ್ಲ ಬೇಕಿಲ್ಲ. ನಾನು ಉಪವಾಸ ಅಂತ್ಯಗೊಳಿಸಿ ಆಸ್ಪತ್ರೆಯಿಂದ ಹೊರಗೆ ಹೋದಾಗ ನನ್ನ ವಿರುದ್ಧ ಪ್ರತಿಭಟನೆಯೂ ನಡೆಯಿತಂತೆ. ಏಕೆ? ನಾನು ಜನರಿಗಾಗಿ ಉಪವಾಸ ಮಾಡಿದ್ದೇನೆ. ಗಾಂಧೀಜಿ ಅಥವಾ ಏಸು ಕ್ರಿಸ್ತನನ್ನು ಕೊಂದಂತೆ ಅವರು ನನ್ನನ್ನೂ ಕೊಲ್ಲಲು ಬಯಸುತ್ತಾರಾ? ಏಕೆ ಅವರಿಗೆ ನಾನು ಅರ್ಥವಾಗುತ್ತಿಲ್ಲ? ನಾನು ಎಲ್ಲರೊಂದಿಗೆ ಸಮಾನವಾಗಿ ಬದುಕಲು ಬಯಸುತ್ತೇನೆ. ನಾನು ಸನ್ಯಾಸಿಯಲ್ಲ. ನಾನು ಒಳ್ಳೆಯವಳೂ ಹೌದು, ಕೆಟ್ಟವಳೂ ಹೌದು. ನನ್ನಲ್ಲೂ ಸಾಕಷ್ಟು ದೌರ್ಬಲ್ಯಗಳಿವೆ. ಯಾಕೆ ಜನರು ನನ್ನನ್ನು ಸನ್ಯಾಸಿಯಂತೆ ನೋಡಲು ಬಯಸುತ್ತಾರೆ? ಎಲ್ಲರೂ ತಾವು ಹಾಕಿಕೊಂಡ ಕನ್ನಡಕದ ಗಾಜಿನ ಮೂಲಕವೇ ನನ್ನನ್ನು ನೋಡುತ್ತಿದ್ದಾರೆ. ಅಂತಹ ಬದುಕು ನನಗೆ ಸಾಕಾಗಿದೆ. ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದಾಗ ಜನರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ, ನನ್ನನ್ನು ಅಪರಾಧಿಯಂತೆ ಎಲ್ಲರಿಂದ ದೂರ ಇರಿಸಲಾಯಿತು. ನನ್ನ ಹೇಳಿಕೆಗಳನ್ನು ತಿರುಚಲಾಯಿತು. ಜನರು ಮತ ಪತ್ರವನ್ನು ಗೌರವಿಸಲು ಆರಂಭಿಸಿದ ದಿನ ರಾಜಕೀಯದ ಕೊಳೆ ತೊಳೆದುಹೋಗುತ್ತದೆ. ನನ್ನ ಕೈಯಲ್ಲಿ ಅಧಿಕಾರವಿಲ್ಲದಿದ್ದರೆ ಯಾರು ನನ್ನ ಮಾತು ಕೇಳುತ್ತಾರೆ?

ನೀವೇಕೆ ನಿಮ್ಮ ಮನೆಗೆ ಹೋಗುತ್ತಿಲ್ಲ?
ನನ್ನ ಬೇಡಿಕೆ ಈಡೇರುವವರೆಗೆ ನಾನು ತಾಯಿಯನ್ನು ನೋಡುವುದಿಲ್ಲ, ನನ್ನ ಮನೆಗೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ. ದೇವರ ಇಚ್ಛೆ ಏನಿದೆಯೋ ಅದರಂತೆ ಆಗಲಿ. ಎಲ್ಲರೂ ಒಂದು ದಿನ ಸಾಯುತ್ತಾರೆ. ನಾನೂ ಸಾಯುತ್ತೇನೆ. ಮಣಿಪುರ ಬದಲಾಗುತ್ತದೆ ಎಂಬ ಆಶಾಭಾವನೆ ನನಗಿದೆ. ಅದಕ್ಕಾಗಿ ನನ್ನ ಬಲಿದಾನವಾಗಬೇಕು ಎಂದಾದರೆ ಅದೂ ಆಗಲಿ. ಜನರಿಗೆ ನನ್ನ ರಕ್ತದ ಮೇಲೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಬೇಕು ಎಂಬ ಆಸೆಯಿದ್ದರೆ ಗಾಂಧಿಯಂತೆ ಜೀವ ನೀಡಲು ನಾನು ಸಿದ್ಧ.

ನೀವು ಜನರಿಗಾಗಿ ಉಪವಾಸ ಮಾಡಿದಿರಿ. ಆದರೆ, ಈಗ ಅವರೇ ನಿಮಗೊಂದು ಆಶ್ರಯ ನೀಡಲು ಸಿದ್ಧರಿಲ್ಲ. ಉಪವಾಸ ಮುಗಿಸಿದ ಮೇಲೂ ಆಸ್ಪತ್ರೆಯಲ್ಲೇ ಇರಬೇಕಾಗಿ ಬಂದಿದೆ. ಅಂದರೆ ಇನ್ನುಮುಂದಿನ ನಿಮ್ಮ ಹೋರಾಟವೂ ಏಕಾಂಗಿಯಾಗಿಯೇ ನಡೆಯುತ್ತದೆಯೇ?
ನಾನು ಏಕಾಂಗಿಯಲ್ಲ. ನನ್ನ ಸುತ್ತಮುತ್ತ ಸಾಕಷ್ಟು ಯುವಕರಿದ್ದಾರೆ. ಅವರಿಗೆ ಇಲ್ಲಿ ನಡೆಯುತ್ತಿರುವ ರಾಜಕೀಯ ಹಾಗೂ ಅದರ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಗೊತ್ತು. ಆದರೆ, ಕೆಲ ಹಿರಿಯರು ಅವರಿಗೆ ಅಡ್ಡಗಾಲಾಗಿದ್ದಾರೆ. ಅವರನ್ನು ದಾಟಿಕೊಂಡು ಜನರು ನನಗೆ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ. ಇಲ್ಲಿಯವರೆಗಿನ ನನ್ನ ಹೋರಾಟ ವ್ಯರ್ಥವಾಗಿಲ್ಲ. ಮಣಿಪುರದ ಹೃದಯ ಭಾಗದಿಂದ ಅಸ್ಸಾಂ ರೈಫ‌ಲ್ಸ್‌ ತುಕಡಿ ಹೊರಹೋಗಿದೆ. ಆದರೆ, ನನ್ನ ಉದ್ದೇಶ ಈಡೇರಿಕೆಗಾಗಿ ತಂತ್ರಗಾರಿಕೆ ಬದಲಿಸುವ ಅಗತ್ಯವಿದೆ ಎಂಬುದು ಜನರಿಗೆ ಅರ್ಥವಾಗಬೇಕು. ನನ್ನ ಕೆಲಸ ಇನ್ನೂ ಮುಗಿದಿಲ್ಲ.

ನಿಮಗೆ ಯಾರಾದರೂ ತಮ್ಮ ಮನೆಯಲ್ಲಿ ಆಶ್ರಯ ನೀಡಿದರೆ ಅಥವಾ ಯಾವುದಾದರೂ ಸಂಘ ಸಂಸ್ಥೆಗಳು ಸೂರು ನೀಡಿದರೆ ಅಲ್ಲಿಗೆ ಹೋಗಿ ಇರುತ್ತೀರಾ?
ನನ್ನ ಮುಂದಿನ ರಾಜಕೀಯ ಬದುಕಿಗೆ ಅದು ಹೊಂದಾಣಿಕೆಯಾಗುತ್ತದೆ ಎಂದಾದರೆ ಖಂಡಿತ ಹೋಗಿರುತ್ತೇನೆ. ಮೊದಲು ಈ ಆಸ್ಪತ್ರೆಯಿಂದ ನಾನು ಹೊರಗೆ ಹೋಗಬೇಕಿದೆ. ಆದರೆ, ಎಲ್ಲಿ ಇರುತ್ತೇನೆ ಎಂಬ ಬಗ್ಗೆ ಸದ್ಯಕ್ಕಂತೂ ನನಗೆ ಏನೂ ಗೊತ್ತಿಲ್ಲ. ಎಲ್ಲಿದ್ದರೂ ಸಶಸ್ತ್ರ ಮೀಸಲು ಪಡೆಗಳ ವಿಶೇಷಾಧಿಕಾರ ಕಾಯ್ದೆ ವಿರುದ್ಧ ನನ್ನ ಹೋರಾಟವನ್ನು ಮಾತ್ರ ನಿಲ್ಲಿಸುವುದಿಲ್ಲ.

ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಮುಖ್ಯಮಂತ್ರಿಯನ್ನು ಸೋಲಿಸುತ್ತೇನೆ ಎಂದು ಹೇಳಿದ್ದೀರಿ. ಅದು ಸಾಧ್ಯವೇ?
ಜನರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವು ಮೂಡಿದರೆ ಇದು ಸಾಧ್ಯ. ಜನರಿಗೆ ಬದಲಾವಣೆಯಲ್ಲಿ ನಂಬಿಕೆ ಮೂಡಬೇಕು. ಆಗ ಏನು ಬೇಕಾದರೂ ಸಂಭವಿಸಬಹುದು. ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಆದರೆ, ಜನರು ನನ್ನನ್ನು ಕಡೆಗಣಿಸಿದರೆ ಮಣಿಪುರ ಬಿಟ್ಟು ಹೊರಗೆಲ್ಲಾದರೂ ಹೋಗುತ್ತೇನೆ. ಬಹುಶಃ ಪ್ರೀತಿಯನ್ನು ಹುಡುಕಿಕೊಂಡು ಹೋಗಬಹುದು.

ನಿಮ್ಮ ವಿರುದ್ಧ ಪ್ರತಿಭಟನೆ ನಡೆದಿದ್ದೇಕೆ? ನೀವು ಉಪವಾಸ ಅಂತ್ಯಗೊಳಿಸಬಾರದಿತ್ತು ಎಂದು ಅವರೇಕೆ ಹೇಳುತ್ತಿದ್ದಾರೆ?
ಬಹುಶಃ ಅವರಿಗೆ ನಾನು ಸಾಯಬೇಕು ಎಂಬ ಆಸೆಯಿರಬಹುದು. 2000ನೇ ಇಸ್ವಿ ನವೆಂಬರ್‌ನಲ್ಲಿ ನಾನು ಉಪವಾಸ ಆರಂಭಿಸಿದಾಗ ಯಾರ ಮಾತನ್ನೂ ಕೇಳಿ ಆ ನಿರ್ಧಾರ ತೆಗೆದುಕೊಂಡಿರಲಿಲ್ಲ. ಹಾಗಾದರೆ ಈಗ ನನ್ನ ನಿರ್ಧಾರ ನಾನು ತೆಗೆದುಕೊಳ್ಳಲು ಸ್ವತಂತ್ರಳಲ್ಲವೇ? ಜನರಿಗಾಗಿ ಹೋರಾಟ ನಡೆಸಿದ ನನಗೆ ಜನರಿಂದ ಬೆಂಬಲ ಸಿಗುತ್ತದೆ ಅಂದುಕೊಂಡಿದ್ದೆ. ಆದರೆ, ನಾನೀಗ ಬಿಡುಗಡೆಯಾಗಿ ಹೊರಬಂದಿರುವಾಗ ಅವರೆಲ್ಲ ಸುಮ್ಮನಾಗಿದ್ದಾರೆ. ಜನರು ಉದ್ದೇಶಪೂರ್ವಕವಾಗಿ ನನ್ನನ್ನು ಅಪಾರ್ಥ ಮಾಡಿಕೊಂಡಿದ್ದಾರೆ. ಅವರಿಗೆ ನನ್ನ ಸಿದ್ಧಾಂತವೇನು ಎಂಬುದೇ ಸರಿಯಾಗಿ ತಿಳಿದಿಲ್ಲ. ಕೇವಲ ಮಣಿಪುರಕ್ಕೊಂದೇ ಅಲ್ಲ, ಜಗತ್ತಿಗೇ ಶಾಂತಿ ಸಂದೇಶ ಸಾರಬೇಕೆಂದು ಶರ್ಮಿಳಾ ಬಯಸುತ್ತಿದ್ದಾಳೆ. ನಾನು ಪಂಜರದ ಹಕ್ಕಿಯಂತೆ ಮಣಿಪುರಕ್ಕೆ ಸೀಮಿತವಾಗಿರಲು ಬಯಸುವುದಿಲ್ಲ.

ಮದುವೆಯಾಗುತ್ತೇನೆ ಎಂದು ಹೇಳಿದ್ದೀರಿ. ಅದನ್ನೇ ನೆಪವಾಗಿಸಿಕೊಂಡು, ನೀವು ಪ್ರೀತಿಗಾಗಿ ಉಪವಾಸ ಅಂತ್ಯಗೊಳಿಸಿದ್ದೀರಿ ಎಂದು ಕೆಲವರು ಹೇಳುತ್ತಿದ್ದಾರಲ್ಲ?
ಇಲ್ಲ. ಇದಕ್ಕೂ ಡೆಸ್ಮಂಡ್‌ಗೂ ಸಂಬಂಧವಿಲ್ಲ. ಅವನೀಗ ಐರ್‌ಲೆಂಡ್‌ನ‌ಲ್ಲಿದ್ದಾನೆ. ನನ್ನ-ಅವನ ನಡುವೆ ಇರುವ ಸಂಬಂಧ ಒಬ್ಬರನ್ನೊಬ್ಬರು ಭಾವನಾತ್ಮಕವಾಗಿ ಅರ್ಥ ಮಾಡಿಕೊಳ್ಳುವ ಎರಡು ವ್ಯಕ್ತಿಗಳ ನಡುವಿನ ಸಂಬಂಧವಷ್ಟೆ. ನನ್ನ ಮೊದಲ ಪ್ರೀತಿ ಮಣಿಪುರ ಮತ್ತು ಇಲ್ಲಿನ ಜನರು. ಇದರಿಂದ ವಿಮುಖಳಾಗುವ ಪ್ರಶ್ನೆಯೇ ಇಲ್ಲ. ಆದರೆ, ನನಗೆ ಗೊತ್ತಿಲ್ಲದೆಯೇ ನನ್ನ ಬಗ್ಗೆ ಜನರು ಏನೇನೋ ಕಲ್ಪನೆಗಳನ್ನು ಹೆಣೆದು ನನ್ನನ್ನು ಒಂದು ಸ್ಥಾನಕ್ಕೇರಿಸಿ ಕುಳ್ಳಿರಿಸಿದ್ದಾರೆ. ಅವರಿಗೆ ನನ್ನ ಭಾವನೆಗಳ ಬಗ್ಗೆ ಅರಿವಿಲ್ಲ. ಆದ್ದರಿಂದಲೇ ನಾನು ನೈಸರ್ಗಿಕವಾಗಿ ಹೇಗಿದ್ದೇನೋ ಅದನ್ನು ಗೌರವಿಸಿ ಸ್ವೀಕರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದೊಂದು ದೊಡ್ಡ ಸಮಸ್ಯೆ. ನನಗೂ ಖಾಸಗಿ ಬದುಕಿದೆ.

ಐರೋಮ್‌ ಶರ್ಮಿಳಾ ಮಣಿಪುರದ ಮಾನವ ಹಕ್ಕು ಹೋರಾಟಗಾರ್ತಿ

-ಉದಯವಾಣಿ

Comments are closed.