*ಯೋಗೀಶ್ ಕುಂಭಾಸಿ
ಕುಂದಾಪುರ: ರಿಕ್ಷಾದಲ್ಲಿ ಪ್ರಯಾಣಿಕರೋರ್ವರು ಬಿಟ್ಟು ಹೋದ ಚಿನ್ನಾಭರಣ, ದುಬಾರಿ ಮೊಬೈಲ್ ಹಾಗೂ ನಗದು ಇದ್ದ ಬ್ಯಾಗ್‌ನ್ನು ವಾರೀಸುದಾರರಿಗೆ ಹಿಂತುರುಗಿಸಿ ಕುಂದಾಪುರದ ರಿಕ್ಷಾ ಚಾಲಕರೋರ್ವರು ಮಾನವೀಯತೆಯನ್ನು ಮೆರೆದ ಘಟನೆ ನಡೆದಿದೆ.

(ಮಾನವೀಯತೆ ಮೆರೆದ ರಿಕ್ಷಾ ಚಾಲಕ ವಿಘ್ನೇಶ್ ನಾಯಕ್)
ಹೊಸ ಬಸ್ಸು ನಿಲ್ದಾಣದ ರಿಕ್ಷಾಚಾಲಕ ಖಾರ್ವಿಕೇರಿಯ ನಿವಾಸಿ ವಿಘ್ನೇಶ್ ನಾಯಕ್ ಈ ಬ್ಯಾಗ್‌ನ್ನು ಹಿಂತಿರುಗಿಸಿ ಮಾನವೀಯತೆಯನ್ನು ಮೆರೆದವರು.

ಶನಿವಾರ ಗಂಗೊಳ್ಳಿಯಿಂದ ಬಸ್ರೂರಿಗೆ ಹೊರಟಿದ್ದ ಗಂಗೊಳ್ಳಿಯ ನೂರ್ , ಅವರ ಪತ್ನಿ, ಹಾಗೂ ಮಕ್ಕಳು ಕುಂದಾಪುರದ ಜ್ಯೂನಿಯರ್ ಕಾಲೇಜು ಸಮೀಪ ವಿಘ್ನೇಷ್ ನಾಯಕ್ ಅವರ ರಿಕ್ಷಾವನ್ನು ಏರಿ ಬಸ್ರೂರಿಗೆ ತೆರಳಿದ್ದರು. ಮಾರ್ಗ ಮದ್ಯೆ ಇವರು ಖರೀದಿಗಾಗಿ ಬ್ಯಾಗ್ ರಿಕ್ಷಾ ಹಿಂಬದಿಯಲ್ಲಿ ಇಟ್ಟು ಇಳಿದು ಸರಕು ಖರೀದಿಸಿ ಬಂದಿದ್ದರು. ಬಸ್ರೂರು ತಲುಪಿದ ಬಳಿಕ ರಿಕ್ಷಾ ಇಳಿದು ಹೋಗುವಾಗ ನೂರ್ ದಂಪತಿಗಳು ಬ್ಯಾಗ್‌ನ್ನು ರಿಕ್ಷಾದಲ್ಲಿಯೇ ಬಿಟ್ಟುಹೋಗಿದ್ದರು. ಆದರೆ ಇದನ್ನು ತಿಳಿಯದ ರಿಕ್ಷಾ ಚಾಲಕ ವಾಪಸು ರಿಕ್ಷಾವನ್ನು ಸ್ಟ್ಯಾಂಡ್‌ನಲ್ಲಿ ತಂದು ಇಡುತ್ತಾರೆ. ಭಾನುವಾರ ಬೆಳಿಗ್ಗೆ ಸ್ವಾಂತಂತ್ರ್ಯೋತ್ಸವದ ಧ್ವಜ ಕಟ್ಟುವ ಸಲುವಾಗಿ ಹಗ್ಗವನ್ನು ಹುಡುಕುವಾಗ ಹಿಂಬದಿಯಲ್ಲಿ ಬ್ಯಾಗ್ ಇರುವುದು ಗಮನಕ್ಕೆ ಬರುತ್ತದೆ. ಇದನ್ನು ಅರಿತ ಆತ ತಮ್ಮ ಬಾವ ರವಿರಾಜ್ ಖಾರ್ವಿ ಅವರಲ್ಲಿ ಈ ವಿಷಯ ತಿಳಿಸಿ ಕುಂದಾಪುರ ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಾರೆ. ಈ ಮಧ್ಯೆ ಬ್ಯಾಗ್ ಕಳೆದುಕೊಂಡ ವಾರಿಸುದಾರು ರಿಕ್ಷಾದಲ್ಲಿಯೇ ಬಿಟ್ಟು ಹೋದ ಬಗ್ಗೆ ಅನುಮಾನಗೊಂಡು ರಿಕ್ಷಾ ನಿಲ್ದಾಣದಲ್ಲಿ ವಿಚಾರಿಸಿದ್ದಾರೆ. ಸರಿಯಾದ ಮಾಹಿತಿ ದೊರೆಯದೇ ಇರುವುದರಿಂದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.
ಠಾಣೆಯಲ್ಲಿ ಹಸ್ತಾಂತರ: ಈ ಮಧ್ಯೆ ರಿಕ್ಷಾದಲ್ಲಿ ಸಿಕ್ಕ ಬ್ಯಾಗ್‌ನ್ನು ಚಾಲಕ ವಿಘ್ನೇಶ್ ನಾಯಕ್ ಅವರು ಕುಂದಾಪುರ ಠಾಣೆಗೆ ಮುಟ್ಟಿಸಿ ವಿಷಯ ತಿಳಿಸಿದ್ದಾರೆ. ಬ್ಯಾಗ್ ಸಿಕ್ಕ ಮಾಹಿತಿಯನ್ನು ಕುಂದಾಪುರ ಪೊಲೀಸರು ವಾರೀಸುದಾರರಿಗೆ ತಿಳಿಸಿದ್ದಾರೆ. ನಂತರ ಅವರು ಕುಂದಾಪುರ ಠಾಣೆಯಲ್ಲಿ ಎಸ್.ಐ ನಾಸೀರ್ ಹುಸೇನ್ ಮೂಲಕ ಬ್ಯಾಗ್‌ನ್ನು ವಿಘ್ನೇಶ್ ನಾಯಕ್ ಅವರು ವಾರಿಸುದಾರರಿಗೆ ಹಸ್ತಾಂತರಿಸಿದ್ದಾರೆ. ಬ್ಯಾಗ್ ಸಿಕ್ಕ ಬಗ್ಗೆ ಅವರಿಗೆ ಸಂತಸವಾದರೆ ಇತ್ತ ರಿಕ್ಷಾ ಚಾಲಕನಿಗೆ ಮಾನವೀಯತೆಯನ್ನು ಮೆರೆದ ಸಂತೃಪ್ತಿ ಉಂಟುಮಾಡಿದೆ.
ಬ್ಯಾಗ್‌ನಲ್ಲಿ ಬೆಲೆಬಾಳುವ ಮೊಬೈಲ್ ಫೋನ್, ಐದು ಪವನ್‌ನ ಮಾಂಗಲ್ಯ ಸರ, ಸುಮಾರು ಎರಡು ಸಾವಿರ ನಗದು ಇತ್ತು.
Comments are closed.