ಕರ್ನಾಟಕ

ಬೆಂಗಳೂರಲ್ಲಿ 1 ಕೋಟಿ ಮೌಲ್ಯದ ಡ್ರಗ್ಸ್‌ ವಶ!

Pinterest LinkedIn Tumblr

drugsಬೆಂಗಳೂರು: ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯನ್‌ ಪ್ರಜೆಗಳನ್ನು ಕೇಂದ್ರ ಮಾದಕ ವಸ್ತುಗಳ ನಿಯಂತ್ರಣ ದಳದ(ಎನ್‌ಸಿಬಿ) ಅಧಿಕಾರಿಗಳು ನಾಗವಾರದ ಟಿ.ಸಿ.ಪಾಳ್ಯದಲ್ಲಿ ಬಂಧಿಸಿದ್ದಾರೆ.

ನೈಜೀರಿಯನ್‌ ಪ್ರಜೆಗಳಾದ ಲೋವೆತ್‌ ಓಸೋಗೊಯಿ (40) ಹಾಗೂ ಮಹಿಳೆ ರೋಸ್‌ಲಿನ್‌ ಎರ್ನೆಸ್ಟನ್‌(30) ಬಂಧಿತರು. ಆರೋಪಿಗಳಿಂದ ಸುಮಾರು 1 ಕೋಟಿ ರೂ. ಮೌಲ್ಯದ 115 ಗ್ರಾಂ ಕೊಕೇನ್‌ ಹಾಗೂ 2 ಗ್ರಾಂನ ಮಾತ್ರೆಗಳು, 30 ಗ್ರಾಂ ಎಂಡಿಎಂಎ, 43 ಗ್ರಾಂ ಮೆಥಮೆಫ್ಟೈನ್‌ ಮತ್ತು 0.25 ಗ್ರಾಂನ ಎಲ್‌ಎಸ್‌ಡಿ ವಶಪಡಿಸಿಕೊಳ್ಳಲಾಗಿದೆ.

ಬಂಧಿತರ ವೀಸಾ ಅವಧಿ ಮುಗಿದಿದ್ದು, ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.
ಆರೋಪಿಗಳು ಪ್ರವಾಸಿ ವೀಸಾದಡಿ ನಗರಕ್ಕೆ ಬಂದಿದ್ದು, ವಿದೇಶ ಹಾಗೂ ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ
ಇತರೆಡೆಯಿಂದ ಮಾದಕ ವಸ್ತುಗಳನ್ನು ನಗರಕ್ಕೆ ತರುತ್ತಿದ್ದರು. ಬಳಿಕ ನಗರದ ಪ್ರತಿಷ್ಠಿತ ಶಾಲಾ- ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ 50 ಗ್ರಾಂ, 100 ಗ್ರಾಂ.ನಂತೆ ಮಾರಾಟ ಮಾಡುತ್ತಿದ್ದರು. ಅಲ್ಲದೆ ಸಾಫ್ಟ್ವೇರ್‌ ಕಂಪನಿ ಉದ್ಯೋಗಿಗಳು ಸೇರಿದಂತೆ ಪ್ರಮುಖ ಪಾರ್ಟಿಗಳ ಆಯೋಜಕರಿಗೆ ಕೆ.ಜಿ. ಗಟ್ಟಲೆ ಕೊಕೇನ್‌, ಎಲ್‌ಎಸ್‌ಡಿಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಕೆಲವರು ಆರೋಪಿಗಳಿಂದ ಮಾದಕ ವಸ್ತುಗಳನ್ನು ಕೊಂಡು ನಗರದ ಬೇರೆ-ಬೇರೆ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಕೇಂದ್ರ ಮಾದಕ ನಿಯಂತ್ರಣ ದಳದ ಅಧಿಕಾರಿಗಳು ಮಾಲು ಸಮೇತ ಈ
ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಅವಧಿ ಮುಗಿದ ವೀಸಾ, ಪಾಸ್‌ಪೋರ್ಟ್‌ ಹೊಂದಿದ್ದು, ಅಕ್ರಮವಾಗಿ ನಗರದಲ್ಲಿ
ನೆಲೆಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕೇಂದ್ರ ಮಾದಕ ವಸ್ತುಗಳ ನಿಯಂತ್ರಣ ದಳದ
ಅಧಿಕಾರಿಗಳು ತಿಳಿಸಿದ್ದಾರೆ.

-ಉದಯವಾಣಿ

Comments are closed.