ಕರ್ನಾಟಕ

ತನಿಖೆಗೆ ಆದೇಶ : ರೈತರ ಮೇಲೆ ದೌರ್ಜನ್ಯ; ಪೊಲೀಸರ ಮೇಲೆ ಕ್ರಮ

Pinterest LinkedIn Tumblr

police_yamlurclrಬೆಂಗಳೂರು, ಜು. ೩೧- ಮಹದಾಯಿ ನ್ಯಾಯಾಧಿಕರಣ ಮಧ್ಯಂತರ ತೀರ್ಪು ವಿರೋಧಿಸಿ ನವಲಗುಂದದಲ್ಲಿ ನಡೆದ ಹೋರಾಟದ ವೇಳೆ ನಡೆದಿರುವ ಪೊಲೀಸ್ ದೌರ್ಜನ್ಯ ಪ್ರಕರಣವನ್ನು ಇಲಾಖಾ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ.

ನವಲಗುಂದದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಲಾಠಿ ಪ್ರಹಾರ ನಡೆಸಿ, ವೃದ್ಧ ಮಹಿಳೆಯರು, ಗರ್ಭಿಣಿಯರು, ಮಕ್ಕಳು ಎನ್ನದೆ ಮನಸೋ ಇಚ್ಛೆ ಹಲ್ಲೆ ನಡೆಸಿ, ದೌರ್ಜನ್ಯವೆಸಗಿರುವುದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಪ್ರಕರಣವನ್ನು ಪೊಲೀಸ್ ಇಲಾಖಾ ತನಿಖೆಗೆ ವಹಿಸಲು ತೀರ್ಮಾನಿಸಿದೆ.

ಉತ್ತರ ವಲಯ ಐಜಿಪಿ ರಾಮಚಂದ್ರರಾವ್ ಅವರ ನೇತೃತ್ವದಲ್ಲಿ ಇಲಾಖಾ ತನಿಖೆ ನಡೆಯಲಿದ್ದು, ದೌರ್ಜನ್ಯವೆಸಗಿದ ಪೊಲೀಸರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ ರಾವ್ ಅವರು ತಿಳಿಸಿದ್ದಾರೆ.

ನವಲಗುಂದದಲ್ಲಿ ನಡೆದ ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟುಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಕ್ರಮಕೈಗೊಳ್ಳುವ ವೇಳೆ ಕೆಲವು ಅಮಾಯಕ ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ನಡೆಸಿರುವ ಘಟನೆಗಳು ನಡೆದಿವೆ. ಸಣ್ಣ ಪುಟ್ಟ ಪ್ರಮಾಣದ ಈ ಘಟನೆಗಳನ್ನು ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಂಬಿಸಲಾಗಿದೆ ಎಂದು ಅವರು ಹೇಳಿದರು.

ಇಲಾಖಾ ತನಿಖೆಯ ವೇಳೆ ಮಾಧ್ಯಮಗಳಲ್ಲಿ ಬಂದಿರುವ ದೌರ್ಜನ್ಯದ ದೃಶ್ಯಾವಳಿಗಳನ್ನು ಅವಲೋಕಿಸಿ, ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.
ಹಲ್ಲೆಗೊಳಗಾದ ಹೋರಾಟಗಾರರ ಪೈಕಿ ಕೆಲವರು ಆಸ್ಪತ್ರೆಯಿಂದ ಬಿಡುಗಡೆಗೊಂಡರೆ, ಇನ್ನು ಕೆಲವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ಮಾಡಲಾಗಿದೆ. ನರಗುಂದ-ನವಲಗುಂದ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಹಜ ಸ್ಥಿತಿ
ಮಹದಾಯಿ ಕೂಗಿನ ಕಿಚ್ಚಿನಲ್ಲಿ ಪೊಲೀಸ್ ದೌರ್ಜನ್ಯದ ಕರಿಛಾಯೆ ಆವರಿಸಿ ಅಕ್ಷರಶಃ ನಲುಗಿ ಹೋದ ಸ್ಥಿತಿ ತಲುಪಿದ್ದ ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಗದಗ ಜಿಲ್ಲೆಯ ನರಗುಂದ ಪಟ್ಟಣಗಳು ಇಂದು ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳತೊಡಗಿದ್ದರೂ, ಬೂದಿಮುಚ್ಚಿದ ಕೆಂಡದಂತಿದೆ.
ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯದ ಆಕ್ರೋಶ ರಾಜ್ಯಾದ್ಯಂತ ವ್ಯಕ್ತವಾಗಿದ್ದು, ರಾಜಕೀಯ ಮುಖಂಡರು ಪಕ್ಷಭೇದ ಮರೆತು ಪೊಲೀಸರ ಲಾಠಿ ಪ್ರಹಾರವನ್ನು ಖಂಡಿಸಿದ್ದಾರೆ.
ನಿನ್ನೆ ಕರ್ನಾಟಕ ಬಂದ್‌ನಿಂದ ಸ್ತಬ್ಧಗೊಂಡಿದ್ದ ಉತ್ತರ ಕರ್ನಾಟದ ಹಲವು ಜಿಲ್ಲೆಗಳು ಇಂದು ಸಾಮಾನ್ಯ ಸ್ಥಿತಿಗೆ ಬರುತ್ತಿದ್ದು, ಮುಂಜಾನೆ ನರಗುಂದ ಮತ್ತು ನವಲಗುಂದ ಪಟ್ಟಣಗಳಲ್ಲಿ ಅಂಗಡಿ, ಮುಂಗಟ್ಟುಗಳು, ಹೊಟೇಲುಗಳು ಬಾಗಿಲು ತೆರೆದರೆ ಅಲ್ಲಲ್ಲಿ ತರಕಾರಿ ಮತ್ತಿತರ ರಸ್ತೆ ಬದಿ ವ್ಯಾಪಾರಸ್ಥರು ಸರಕುಗಳೊಡನೆ ಕಾಣಿಸಿಕೊಳ್ಳತೊಡಗಿದರು. ಪೊಲೀಸರ ಬೂಟಿನ ಶಬ್ಧದ ಮಧ್ಯೆ ಇಲ್ಲಿನ ಜನರು ದೈನಂದಿನ ಕೆಲಸ ಕಾರ್ಯಗಳನ್ನು ಆರಂಭಿಸಿದ್ದಾರೆ.
ನರಗುಂದದಲ್ಲಿ ಬಸ್ ಸಂಚಾರ ಆರಂಭಗೊಂಡರೆ ನವಲಗುಂದದಲ್ಲಿ ಮಾತ್ರ ಬಸ ಸಂಚಾರ ಆರಂಭಗೊಳ್ಳಲಿಲ್ಲ. ಮುಂಜಾಗರೂಕತಾ ಕ್ರಮವಾಗಿ ನವಲಗುಂದದಲ್ಲಿ ಇಂದು ಸಂಜೆಯವರೆಗೆ ೧೪೪ ನೇ ಕಲಂನ ಅನ್ವಯ ನಿಷೇಧಾಜ್ಞೆ ಮುಂದುವರೆದಿದ್ದು ಆರ್.ಎ.ಎಫ್. ನ ತುಕಡಿಗಳು ಅಲ್ಲಲ್ಲಿ ಠಾಣಾ ಹೂಡಿದ್ದು ಕಂಡು ಬರುತ್ತಿದೆ.
ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ನವಲಗುಂದ ಪಟ್ಟಣದಲ್ಲಿ ಇಂದು ಮಧ್ಯಾಹ್ನ ಶಾಂತಿ ಸಭೆ ನಡೆಯಲಿದ್ದು ಸಭೆಯಲ್ಲಿ ಗಣ್ಯರು, ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಪಾಲ್ಗೊಳ್ಳಲಿದ್ದಾರೆ. ನರಗುಂದ ಪಟ್ಟಣದಲ್ಲಿ ನಿಷೇದಾಜ್ಞೆ ಇರದಿದ್ದರೂ ಬಿ.ಎಸ್.ಎಫ್. ಯೋಧರು ಅಲ್ಲಲ್ಲಿ ಕಾವಲಿಗಿದ್ದಾರೆ.
ಹುಬ್ಬಳ್ಳಿಯಿಂದ ವಿಜಯಪುರ, ಬಾಗಲಕೋಟೆಗಳತ್ತ ತೆರಳುವ ಬಸ್‌ಗಳನ್ನು ಅಣ್ಣಿಗೇರಿ, ನರಗುಂದ ಮಾರ್ಗವಾಗಿ ಓಡಿಸಲಾಗುತ್ತಿದೆ. ಒಟ್ಟಾರೆ ಪರಿಸ್ಥಿತಿ ನಿಧಾನವಾಗಿ ತಿಳಿಯಾಗುತ್ತ ಸಾಗುತ್ತಿದ್ದು ನವಲಗುಂದ, ನರಗುಂದ ಸಹಜ ಸ್ಥಿತಿಗೆ ಮರಳುತ್ತಿದೆ.
ಇನ್ನೊಂದೆಡೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಇವತ್ತು ನವಲಗುಂದ ಹಾಗೂ ಯಮನೂರು ಗ್ರಾಮಕ್ಕೆ ಭೇಟಿ ನೀಡಿ, ಪೊಲೀಸ್ ದೌರ್ಜನ್ಯಕ್ಕೊಳಗಾದ ರೈತರಿಗೆ ಸಾಂತ್ವಾನ ಹೇಳಿದರು. ಇನ್ನು ಧಾರವಾಡದಲ್ಲಿ ಮಹದಾಯಿ ಹೋರಾಟ ತೀವ್ರಗೊಂಡಿದ್ದರಿಂದ ಇಂದು ನಡೆಯಬೇಕಿದ್ದ ಐಐಟಿ ಉದ್ಘಾಟನೆ ಕಾರ್ಯಕ್ರಮವನ್ನ ಮುಂದೂಡಲಾಗಿದೆ. ಸದ್ಯ ಐಐಟಿ ಉದ್ಘಾಟನಾ ದಿನಾಂಕ ನಿಗದಿಯಾಗಿಲ್ಲ. ಆದರೆ ನಾಳೆಯಿಂದ ಮೊದಲ ಬ್ಯಾಚ್‌ನ ತರಗತಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

Comments are closed.