ಮೈಸೂರು, ಜು. ೩೧ – ಬೆಲ್ಜಿಯಂನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಅವರ ಪಾರ್ಥಿವ ಶರೀರ ಇಂದು ಬೆಂಗಳೂರು ಮೂಲಕ ಮೈಸೂರಿಗೆ ಆಗಮಿಸಲಿದ್ದು, ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
ಮೈಸೂರಿನ ವಸ್ತು ಪ್ರದರ್ಶನದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಿಗ್ಗೆ ೧೧ ರಿಂದ ೧.೩೦ರವರೆಗೆ ಸಾರ್ವಜನಿಕರು ಹಾಗೂ ಅಭಿಮಾನಿಗಳು, ಗಣ್ಯರು ದರ್ಶನ ಪಡೆಯಲಿದ್ದಾರೆ. ನಂತರ ಮಧ್ಯಾಹ್ನ ೩ರಿಂದ ೪ ಗಂಟೆಯೊಳಗೆ ಟಿ.ಕಾಟೂರ್ ನಲ್ಲಿರುವ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಪ್ರವಾಸಕ್ಕೆಂದು ತೆರಳಿದ ರಾಕೇಶ್ ನಿಧನದಿಂದ ಮೈಸೂರು ನಗರ ಸೇರಿದಂತೆ ವರುಣ ಕ್ಷೇತ್ರದಲ್ಲಿ ನೀರವ ಮೌನ ಆವರಿಸಿದ್ದು, ಯುವ ನೇತಾರನನ್ನು ಕಳೆದುಕೊಂಡ ಜನತೆ ಕಂಬನಿ ಮಿಡಿಯುತ್ತಿದ್ದಾರೆ. ಈ ಅಕಾಲಿಕ ಮರಣದಿಂದ ತೀವ್ರವಾಗಿ ತತ್ತರಿಸಿರುವ ಸಿ.ಎಂ ಕುಟುಂಬದವರು ಹಾಗೂ ಬಂದು ಬಾಂಧವರ ಮನೆಗಳಲ್ಲಿ ಶೋಕದ ಛಾಯೆ ಮಡುಗಟ್ಟಿದೆ. ಸಿದ್ದರಾಮಯ್ಯನವರ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ದುಃಖದ ಛಾಯೆ ಆವರಿಸಿದ್ದು, ಬಹುತೇಕ ಮಂದಿ ಮೈಸೂರಿಗೆ ಆಗಮಿಸಿ ಪಾರ್ಥಿವ ದರ್ಶನ ಪಡೆಯಲು ಕಾತುರರಾಗಿದ್ದಾರೆ. ರಾಷ್ಟ್ರಮಟ್ಟದ ನಾಯಕರು ಆಗಮಿಸುವ ಸಾಧ್ಯತೆ ಇದೆ.
ಜೂನ್ ೩೦ರಂದು ಮಧ್ಯಾಹ್ನ ಸುದ್ದಿವಾಹಿನಿಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ರಾಕೇಶ್ ನಿಧನ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಸಿದ್ದರಾಮಯ್ಯನವರ ಗ್ರಾಮದಲ್ಲಿ ದುಃಖದ ಕಾರ್ಮೋಡ ಕವಿದು ರಾಕೇಶ್ ರವರ ಭಾವ ಚಿತ್ರವನ್ನು ಗ್ರಾಮದಲ್ಲಿ ಹಾಕಿ ಕಂಬನಿ ಮಿಡಿದರು.
ಮೈಸೂರಿನ ಶಾರದದೇವಿ ನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ನಿನ್ನೆಯಿಂದಲೇ ಕಾಂಗ್ರೇಸ್ ಕಾರ್ಯಕರ್ತರು, ತಮ್ಮ ಕುಟುಂಬದ ಸದಸ್ಯರು, ಅಭಿಮಾನಿಗಳು, ರಾಕೇಶ್ ಸ್ನೇಹಿತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಸಿ. ಮಹದೇವಪ್ಪ, ಸಹಕಾರ ಸಚಿವ ಮಹದೇವ್ ಪ್ರಸಾದ್, ಜಿಲ್ಲಾಧಿಕಾರಿ ಶಿಖಾ, ಪೋಲಿಸ್ ಆಯುಕ್ತ ದಯಾನಂದ್ ಅವರು ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅಂತಿಮ ದರ್ಶನದ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ. ಒಟ್ಟಾರೆ ಯುವ ನಾಯಕನ ಅಕಾಲಿಕ ಮರಣದಿಂದ ನಗರದಲ್ಲಿ ನೀರವ ಮೌನ ಆವರಿಸಿದೆ.
ಭಾರತೀಯ ಕಾಲಮಾನ ನಿನ್ನೆ ಸಂಜೆ ೬.೩೦ಕ್ಕೆ ಬ್ರಸೆಲ್ಸ್‌ನಿಂದ ರಾಕೇಶ್ ಮೃತದೇಹ ಬೆಂಗಳೂರಿನತ್ತ ಹೊರಟಿದೆ. ಎಮಿರೆಟ್ಸ್ ವಿಮಾದಲ್ಲಿ ದುಬೈ ಮಾರ್ಗವಾಗಿ ಬೆಂಗಳೂರಿಗೆ ಪಾರ್ಥಿವ ಶರೀರವನ್ನ ತರಲಾಗುತ್ತದೆ. ಮೃತದೇಹ ತರುವ ಎಮಿರೆಟ್ಸ್ ವಿಮಾನದಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬಸ್ಥರು ಆಗಮಿಸಲಿದ್ದಾರೆ. ಸುಮಾರು ೧೨ ಗಂಟೆಗಳ ಪ್ರಯಾಣದ ಬಳಿಕ ಇಂದು ಬೆಳಗ್ಗೆ ೯ ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೃತದೇಹ ತಲುಪಲಿದೆ.
ಇದಾದ ಬಳಿಕ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನ ಹುಟ್ಟೂರು ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಮೈಸೂರು ಉಸ್ತುವಾರಿ ಸಚಿವ ಹಾಗೂ ಸಿಎಂ ಆಪ್ತ ಎಚ್.ಸಿ ಮಹದೇವಪ್ಪ ಮಾಹಿತಿ ನೀಡಿದ್ದಾರೆ. ನಾಳೆ ಬೆಳಗ್ಗೆ ೧೧ ಗಂಟೆಯಿಂದ ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಸಿಎಂ ಪುತ್ರನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮಧ್ಯಾಹ್ನ ೧.೩೦ರ ತನಕ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ಮೈಸೂರು ಸಮೀಪದ ಟಿ.ಕಾಟೂರಿನಲ್ಲಿರುವ ಸಿದ್ದರಾಮಯ್ಯ ಅವರ ಫಾರ್ಮ್‌ಹೌಸ್‌ಗೆ ಕೊಂಡೊಯ್ದು ಅಲ್ಲಿ ಅಂತಿಮ ಸಂಸ್ಕಾರ ಮಾಡಲಾಗುತ್ತೆ. ಸೋಮವಾರ (ಇಂದು) ಮಧ್ಯಾಹ್ನ ೩ರಿಂದ ೪ಗಂಟೆಯೊಳಗೆ ಅಂತ್ಯಕ್ರಿಯೆ ನಡೆಯೋ ಸಾಧ್ಯತೆಯಿದೆ.
Comments are closed.