ನವದೆಹಲಿ: ಕಬಾಲಿ ಚಿತ್ರ ತೆರೆಕಂಡು ವಿಶ್ವಾದ್ಯಂತ ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಬೆನ್ನಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡಿದ್ದು, ಚಿತ್ರ ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದ್ದಾರೆ.
ವರ್ಜೀನಿಯಾದ ಫೇರ್ ಫ್ಯಾಕ್ಸ್ ನ ಸಿನಿಮಾರ್ಕ್ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ಕಬಾಲಿ ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ಆಗಮಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮಗಳು ಐಶ್ವರ್ಯಾ ಮತ್ತು ಇತರೆ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದ್ದಾರೆ. ಚಿತ್ರ ಆರಂಭಕ್ಕೂ ಮೊದಲೇ ರಜನಿಕಾಂತ್ ಚಿತ್ರಮಂದಿರಕ್ಕೆ ಆಗಮಿಸಿದ್ದರಾದರೂ, ಅವರನ್ನು ಯಾರೂ ಅಷ್ಟಾಗಿ ಗುರುತು ಹಿಡಿಯಲಿಲ್ಲ. ಆದರೆ ಚಿತ್ರ ಮುಕ್ತಾಯದ ಬಳಿಕ ರಜನಿಕಾಂತ್ ಏಳುತ್ತಿದ್ದಂತೆಯೇ ಅಭಿಮಾನಿಗಳು ರಜನಿ ಪರ ಘೋಷಣೆ ಕೂಗಿದರು.
ಇನ್ನು ಚಿತ್ರ ಪ್ರದರ್ಶನ ವೇಳೆ ರಜನಿಕಾಂತ್ ಪಕ್ಕದ ಆಸನದಲ್ಲಿ ಕುಳಿತಿದ್ದ ಪುಟ್ಟ ಬಾಲಕಿ ಸೂಪರ್ ಸ್ಟಾರ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಷ್ಟೇ ಅಲ್ಲದೇ ತಾನು ತಂದಿದ್ದ ಪಾಪ್ ಕಾರ್ನ್ ಅನ್ನು ರಜನಿಕಾಂತ್ ಅವರಿಗೆ ನೀಡುವ ಮೂಲಕ ಸಂತಸಪಟ್ಟಳು.
ಈ ಹಿಂದೆ ಹಾಲಿವುಡ್ ನಟ ಟಾಮ್ ಕ್ರೂಸ್ ಕೂಡ ಇದೇ ರೀತಿ ಚಿತ್ರಮಂದಿರಕ್ಕೆ ಸರ್ ಪ್ರೈಸ್ ವಿಸಿಟ್ ಹಾಕುವ ಮೂಲಕ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದ್ದರು.
Comments are closed.