ಮೈಸೂರು, ಜು. ೨೦ – ಜಿಲ್ಲಾಧಿಕಾರಿ ಸಿ. ಶಿಖಾ ಅವರಿಗೆ ಧಮಕಿ ಹಾಕಿದ ಆರೋಪ ಎದುರಿಸುತ್ತಿರುವ ಆರೋಪಿ, ಮುಖ್ಯಮತ್ರಿ ಸಿದ್ದರಾಮಯ್ಯ ಅವರ ಆಪ್ತ ಎಂದು ಹೇಳಲಾಗುವ ಕೆ. ಮರೀಗೌಡ ಕುಟುಂಬ ವರ್ಗದವರು ಕೂಡ ನಾಪತ್ತೆ ಆಗಿದ್ದಾರೆ.
ಜಿಲ್ಲಾಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣದ ಮುಖ್ಯ ಆರೋಪಿ ಮರೀಗೌಡ ಈಗಾಗಲೇ ನಾಪತ್ತೆ ಆಗಿದ್ದಾರೆ. ಜಿಲ್ಲಾಧಿಕಾರಿಗಳು ಸ್ವತಃ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ನಂತರ ನಾಪತ್ತೆಯಾಗಿರುವ ಮರೀಗೌಡ ಈವರೆಗೆ ಪತ್ತೆ ಆಗಿಲ್ಲ.
ಬಂಧನ ಕ್ರಮದಿಂದ ಪಾರಾಗಲು ಮರೀಗೌಡ ಸಲ್ಲಿಸಿದ್ದ ಜಾಮೀನು ಕೋರಿಕೆ ಅರ್ಜಿ ಕೂಡ ಕಳೆದ 12 ರಂದು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು. ಹೀಗಾಗಿ ಮರೀಗೌಡ ಬಂಧನ ಕ್ರಮ ಈಗ ಅನಿವಾರ್ಯ ಆಗಿತ್ತು. ಈ ವಿದ್ಯಮಾನದ ಪರಿಣಾಮವಾಗಿ ಇದೀಗ ಮರೀಗೌಡ ಕುಟುಂಬಸ್ಥರೂ ನಾಪತ್ತೆಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರೀಗೌಡ ಕಣ್ಮರೆ ಆಗಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಶರಣಾಗುವಂತೆ ಅವರ ಮನೆಗೆ ನೋಟಿಸ್ ಅಂಟಿಸಲಾಗಿತ್ತು. ಆದರೆ, ಆ ನೋಟಿಸ್‌ನ್ನು ಕಿತ್ತು ಹಾಕಿರುವುದು ಈಗ ಕಂಡುಬಂದಿರುವುದು.
ನಿನ್ನೆ ರಾತ್ರಿ ಪೊಲೀಸರು ಮರೀಗೌಡ ಮನೆಗೆ ನೋಟಿಸ್ ಅಂಟಿಸಿದ್ದು ನಿಜ. ಆದರೆ ರಾತ್ರಿ ಹೊತ್ತಿಗೆ ಬಹುಶಃ ಮನೆಯವರು ಯಾರೊ ಅದನ್ನು ಹರಿದು ಹಾಕಿದ್ದಾರೆ ಎಂದು ನೆರೆ ಹೊರೆಯ ನಿವಾಸಿಗಳ ಅಂಬೋಣ.
ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರಿಗೆ ಬೆದರಿಕೆ ಹಾಕಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಲಾಯಿತು ಎಂದು ದೂರಿ ನಜರ್‌ಬಾದ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದೂರು ದಾಖಲಾದ ನಂತರ ಮನೆಯಿಂದ ಕಣ್ಮರೆಯಾದ ಮರೀಗೌಡ, ಬಂಧನ ಕ್ರಮದಿಂದ ಪಾರಾಗಲು ಇಲ್ಲಿಯ ಏಳನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಜಾಮೀನು ಕೋರಿಕೆ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ, ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ರಾಮಕೃಷ್ಣನಗರ ನಿವಾಸಿ ಮರೀಗೌಡ ಜಾಮೀನು ಕೋರಿಕೆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಮರೀಗೌಡ ಬಂಧನ ಕ್ರಮ ಅನಿವಾರ್ಯ ಆಗಿದೆ.
Comments are closed.