ಬೆಂಗಳೂರು, ಜು. ೨೦ – ಮೇಲ್ಛಾವಣಿ ಸೌರ ವಿದ್ಯುತ್ ಯೋಜನೆ ಒಪ್ಪಂದದಲ್ಲಿ ಇನ್ನಷ್ಟು ಅವ್ಯವಹಾರಗಳು ನಡೆದಿದ್ದು, ಸಂಬಂಧಪಟ್ಟ ಎಂಜಿನಿಯರ್ಗಳು ವಾರದೊಳಗಾಗಿ ಅವ್ಯವಹಾರವನ್ನು ನನ್ನ ತಮನಕ್ಕೆ ತರಬೇಕು. ಇಲ್ಲದಿದ್ದಲ್ಲಿ, ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಸಿರುವ ಇನ್ನೂ 50 ಮಂದಿ ಎಂಜಿನಿಯರ್ಗಳು ಅಮಾನತುಗೊಳ್ಳಲಿದ್ದಾರೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು ಇಲ್ಲಿ ಎಚ್ಚರಿಸಿದ್ದಾರೆ.
ನಗರದಲ್ಲಿ ಸೌರಶಕ್ತಿ ಇಂಧನ ಹೂಡಿಕೆಯ ಹೊಸ ಹಾದಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಭ್ರಷ್ಟಾಚಾರ ನಡೆಸಿರುವ ಸಂಬಂಧಪಟ್ಟ ಎಂಜಿನಿಯರ್ಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಸ್ವಯಂಪ್ರೇರಿತವಾಗಿ ನನ್ನ ಗಮನಕ್ಕೆ ತರದಿದ್ದಲ್ಲಿ ಅಮಾನತು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದರು.
ರೈತರು ಮತ್ತು ಜನರಿಗಾಗಿಯೇ ಮೇಲ್ಛಾವಣಿ ಸೌರ ವಿದ್ಯುತ್ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಯಿತು. ಆದರೆ, ಕೆಲ ಎಂಜಿನಿಯರ್ಗಳು ಒಪ್ಪಂದದ ಅವಧಿ ವೇಳೆ ಭೂಮಿ ಇಲ್ಲದಿದ್ದರೂ ಕೆಲವು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿದ್ದು, ಭ್ರಷ್ಟಾಚಾರ ನಡೆಸಿದ್ದಾರೆ ಎಂದರು.
ಪಾವಗಡದಲ್ಲಿ 12 ಸಾವಿರ ಎಕರೆ ಸೋಲಾರ್ ಪ್ರಾಜೆಕ್ಟ್ನ್ನು ಆರಂಭಿಸಲಾಗಿದೆ. ರೈತನಿಂದ ಸಹಕಾರ ತತ್ವದಡಿ ಗುತ್ತಿಗೆ ಆಧಾರದಲ್ಲಿ ಈ ಯೋಜನೆಗೆ ಭೂಮಿ ಪಡೆಯಲಾಗಿದೆ. ಹಾಗಾಗಿ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದರು.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಸೌರವಿದ್ಯುತ್ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿದೆ. ಮೇಲ್ಛಾವಣಿ ಸೌರವಿದ್ಯುತ್ನಡಿ ಪ್ರತಿಯೊಂದು ಯುನಿಟ್ಗೆ 9 ರೂ. 50 ಪೈಸೆ ನಿಗದಿಪಡಿಸಲಾಗಿದೆ. ಈಗಾಗಲೇ ಈ ಯೋಜನೆಗೆ ಬಹಳಷ್ಟು ಮಂದಿ ಆಕರ್ಷಿತರಾಗಿದ್ದಾರೆ. ಇದು ಇನ್ನಷ್ಟು ಯಶಸ್ವಿಯಾಗಲು ಬ್ಯಾಂಕ್ಗಳು ಸಾಲ ನೀಡುವಾಗ ಉದಾರ ಮನಸ್ಸು ತೋರಬೇಕು ಎಂದರು.
ರಾಜ್ಯದಲ್ಲಿ ಸದ್ಯಕ್ಕೆ 7 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಸದ್ಯಕ್ಕೆ ಬೇಡಿಕೆ 9 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಕಾಗಿದೆ. ನಾನಾ ವಿದ್ಯುತ್ ಉತ್ಪಾದನಾ ಘಟಕಗಳಿಂದ ಹೆಚ್ಚು ವಿದ್ಯುತ್ ಪಡೆಯಲು ಘಟಕಗಳನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆಸಲಾಗಿದೆ ಎಂದರು.
ಸಮಾರಂಭದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣಾ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಮಾತನಾಡಿದರು.
ಅಸೋಚೆಮ್ ಅಧ್ಯಕ್ಷ ಆರ್. ಶಿವಕುಮಾರ್ ಸ್ವಾಗತಿಸಿದರು. ಅಸೋಚೆಮ್ ಇಂಧನ ಸಮಿತಿ ಸಂಚಾಲಕ ರಮೇಶ್ ಶಿವಣ್ಣ, ವಿಚಾರ ಸಂಕಿರಣದ ಉದ್ದೇಶಗಳನ್ನು ವಿವರಿಸಿದರು.
Comments are closed.