ಕರ್ನಾಟಕ

ಅರ್ಥವತ್ತಾದ ವಿಮರ್ಶೆ ಇರಲಿ: ಪ್ರಕಾಶ್ ರೈ, ಕಾಸರವಳ್ಳಿ ಕಿವಿಮಾತು

Pinterest LinkedIn Tumblr

praಬೆಂಗಳೂರು, ಜು. ೧೭ – ನಿರ್ದೇಶಕನ ಕಥೆ ಮತ್ತು ಆತನ ಆಶಯ ಹಾಗೂ ಚಿತ್ರದ ಎಲ್ಲಾ ವಿಭಾಗಗಳನ್ನು ಗ್ರಹಿಸುವ ಶಕ್ತಿ ಪತ್ರಕರ್ತರಿಗೆ ಇರಬೇಕು. ಆಗ ಮಾತ್ರ ವಿಮರ್ಶೆ ಮಾಡಲು ಸಾಧ್ಯ ಎಂದು ಹಿರಿಯ ನಟ, ನಿರ್ದೇಶಕ ಪ್ರಕಾಶ್ ರೈ ಇಂದು ಇಲ್ಲಿ ಹೇಳಿದ್ದಾರೆ.

ಸಿನಿಮಾವನ್ನು ಮಾರಾಟ ಮಾಡುವುದು ಪತ್ರಕರ್ತರ ಕೆಲಸವಲ್ಲ, ವಿಮರ್ಶೆಗಳು ನಿರ್ದೇಶಕನ ಕನಸುಗಳನ್ನು ಮಾರಬೇಕಾಗಿಲ್ಲ. ಆದರೆ, ಸಿನಿಮಾ ಮೂಲಕ ನಿರ್ದೇಶಕ ಏನನ್ನು ಹೇಳಲು ಹೊರಟಿದ್ದಾನೆ ಎನ್ನುವುದನ್ನು ಗ್ರಹಿಸಿಕೊಂಡು ವಿಮರ್ಶೆ ಮಾಡುವುದು ಒಳಿತು ಎಂದು ಹೇಳಿದರು.

ಬೆಂಗಳೂರು ಟಿವಿ ಜರ್ನಲಿಸ್ಟ್ ಅಸೋಸಿಯೇಷನ್ ಹಾಗೂ ಚಲನಚಿತ್ರ ಅಕಾಡಮಿ ನಗರದಲ್ಲಿ ಇಂದಿನಿಂದ 2 ದಿನಗಳ ಕಾಲ ಆಯೋಜಿಸಿರುವ `ಪತ್ರಕರ್ತರಿಗಾಗಿ ಚಲನಚಿತ್ರ ರಸಗ್ರಹಣ’ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಾಹಿತ್ಯವನ್ನು ಓದಿದಾಗ ಅವರಿಗೆ ವಿಮರ್ಶೆ ಸುಲಭವಾಗಲಿದೆ ಎಂದು ಹೇಳಿದರು.

ಭಾಷೆ ಸುಂದರವಾಗಿ ಅಥವಾ ಅಸಹ್ಯವಾಗಿ ಕಂಡುಬಂದ ಅದರ ಹಿಂದಿರುವ ಮನುಷ್ಯನೇ ಕಾರಣ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಆರೋಗ್ಯವಾಗಿಲ್ಲದಿದ್ದರೆ ಅನಾರೋಗ್ಯಕ್ಕೂ ಎಡೆಮಾಡಿಕೊಡಲಿದೆ. ಸಿನಿಮಾ ಕಲಿಕೆಗೆ ಒತ್ತು ನೀಡಬೇಕು ಜೊತೆಗೆ ಸಿನಿಮಾವನ್ನು ಪ್ರೀತಿಸಬೇಕು ಎಂದು ಹೇಳಿದರು.
ಪತ್ರಕರ್ತರ ರಸಗ್ರಹಣ ಶಿಬಿರಕ್ಕೆ ಹೆಚ್ಚಿನ ಪತ್ರಕರ್ತರು ಬರುವ ನಿರೀಕ್ಷೆ ಇತ್ತು. ಯಾರೂ ಬರದಿರುವುದು ಬೇಸರದ ಸಂಗತಿ. ಪತ್ರಕರ್ತರು ವಿಲನ್‌ಗಳಿದ್ದಂತೆ. ಆ ಕಾರಣಕ್ಕಾಗಿ ವಿಲನ್ ಆಗಿರುವ ತಮ್ಮನ್ನು ಕರೆದಿರಬಹುದು. ಸಿನಿಮಾದಲ್ಲಿ ತಮ್ಮ ಐಡೆಂಟಿಗೆ ಸಿನಿಮಾ ರಸಗ್ರಹಣವೂ ಒಂದು ಎಂದು ಹೇಳಿದರು.
ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸಿನಿಮಾವನ್ನು ಕೆಲವರು ಕಥೆಯ ಮೂಲಕ ಮತ್ತೆ ಕೆಲವರು ವಿವರಗಳ ಮೂಲಕ ವಿಮರ್ಶೆ ಮಾಡುತ್ತಾರೆ. ಎರಡೂ ಸರಿಯಾದ ಮಾರ್ಗವೇ ಎಂದು ಹೇಳಿದ ಅವರು, ಚಿತ್ರದಲ್ಲಿ ನಿರ್ದೇಶಕ ಹೇಳುವ ಕಥೆಯ ಜೊತೆಗೆ ಸಾರ್ವಕಾಲಿಕ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಸಿನಿಮಾದ ಪಾರಿಭಾಷಿಕ ಶಬ್ಧ ಹಾಗೂ ಗ್ರಹಿಕೆ ಬದಲಾಗುವ ಅಗತ್ಯವಿದೆ ಎಂದರು.
ಛಾಯಾಗ್ರಹಣ ಸುಂದರವಾಗಿದೆ ಎನ್ನುತ್ತಾರೆ. ನಿರ್ದೇಶಕನ ವಿಷನ್‌ಗೆ ಛಾಯಾಗ್ರಹಣ ಹೊಂದಿಕೆಯಾಗದಿದ್ದರೆ ಅದು ಸಿನಿಮಾಗೆ ಹೇಗೆ ಪೂರಕವಾಗಲಿದೆ ಎಂದು ಪ್ರಶ್ನಿಸಿದ ಅವರು, ಸಿನಿಮಾದ ವಸ್ತು ಮತ್ತು ತಂತ್ರಕ್ಕೆ ಸಾಮರಸ್ಯ ಇರಬೇಕು. ಆಗ ಮಾತ್ರ ಅದು ಚಿತ್ರಕ್ಕೆ ಪೂರಕವಾಗಿರಲಿದೆ ಎಂದು ಹೇಳಿದರು.
ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಮಾತನಾಡಿ, ಚಿತ್ರರಂಗಕ್ಕೆ ಮುಂಗಾರು ಮಳೆಯ ಕಾಲ ಇದು. ಮಳೆಯನ್ನು ಬಳಸಿಕೊಂಡು ಚಿತ್ರರಂಗ ಒಳ್ಳೆಯ ಫಸಲನ್ನು ತೆಗೆಯುವ ಕಡೆಗೆ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ, ಪುಣೆಯ ಸಿನಿಮಾ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಅನಿಲ್ ಝೇಂಕಾರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು, ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಎಚ್.ಬಿ. ದಿನೇಶ್, ಬೆಂಗಳೂರು ಟಿವಿ ಜರ್ನಲಿಸ್ಟ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಎಚ್.ಆರ್. ರವೀಶ್ ಮತ್ತಿತರರು ಇದ್ದರು.

Comments are closed.