ಬೆಂಗಳೂರು, ಜು. ೧೨- ಅಪಹರಣ ಆರೋಪಕ್ಕೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅವರ ಕುಟುಂಬದ ಪರಿಸ್ಥಿತಿ ಬಗ್ಗೆ ವಿಧಾನಸಭೆಯಲ್ಲಿಂದು ಪ್ರಸ್ತಾಪಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಭಾವೋದ್ವೇಗಕ್ಕೊಳಗಾಗಿ ಗದ್ಗತಿತರಾದರು.
ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಕುರಿತು ನಿಯಮ 69 ರಡಿ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ರೂರ ವ್ಯವಸ್ಥೆಗೆ ಕಲ್ಲಪ್ಪ ಬಲಿಯಾಗಿದ್ದಾರೆ. ಈಗ ಅವರ ಕುಟುಂಬಕ್ಕೆ ಊಟಕ್ಕೂ ಗತಿಯಿಲ್ಲವಾಗಿದೆ. ಆ ಕುಟುಂಬ ಬೀದಿಗೆ ಬಂದಿದೆ. ನಿಮ್ಮನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಇಂತಹ ಕುಟುಂಬಗಳನ್ನು ಹಾಳು ಮಾಡಬೇಡಿ ಎಂದು ಸದನದಲ್ಲಿ ಹಾಜರಿದ್ದ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದರು.
ತಾವು ಕಲ್ಲಪ್ಪನ ಮನೆಗೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿ ಕಂಡು ಮೊಮ್ಮಲ ಮರುಗಿದ್ದೇನೆ. ಅದೊಂದು ಸಣ್ಣ ಗುಡಿಸಲು ಕೂರಲಿಕ್ಕೂ ಜಾಗವಿಲ್ಲ. ಕಲ್ಲಪ್ಪನ ಆತ್ಮಹತ್ಯೆಯಿಂದಾಗಿ ವಿಧವೆಯಾಗಿರುವ ಹೆಣ್ಣು ಮಗಳು ಚಿಕ್ಕ ವಯಸ್ಸಿನವಳು. 2 ವರ್ಷದ ಮಗು ಇದೆ. ಇಂತಹ ಕುಟುಂಬಕ್ಕೆ ಸರ್ಕಾರ ಆದ್ಯತೆ ಮೇಲೆ ನೆರವಾಗಬೇಕು ಎಂದು ಮನವಿ ಮಾಡಿದರು.
ಈ ಸರ್ಕಾರದ ನಡವಳಿಕೆಯಿಂದಾಗಿ ಅಮಾಯಕ ಅಧಿಕಾರಿಗಳ ಬಲಿಯಾಗುತ್ತಿದ್ದಾರೆ. ವ್ಯವಸ್ಥೆಯ ಕ್ರೂರತೆಗೆ ಕಲ್ಲಪ್ಪ ಬಲಿಯಾಗಿದ್ದಾರೆ. ಆತನ ಮೇಲೆ 10ಲಕ್ಷ ರೂ ಲಂಚದ ಸ್ವೀಕಾರ ಆರೋಪ ಹೊರೆಸಲಾಗಿದೆ. ಸಿಐಡಿ ತನಿಖಾಧಿಕಾರಿಗಳು ಅವರ ಮನೆಗೆ ತೆರಳಿ ಎಲ್ಲವನ್ನೂ ಜಾಲಾಡಿದ್ದಾರೆ. ಮನೆಯ ಮೇಲಿನ ವಾಟರ್ ಟ್ಯಾಂಕ್ ಅದರಲ್ಲಿದೆಯೋ ಏನೋ ಎಂದು ಹುಡುಕಾಡಿದ್ದಾರೆ. ಇದು ಸರಿಯೇ. ಈ ಬಗ್ಗೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹೇಳಿದರು.
ಆ ಹೆಣ್ಣು ಮಗಳು ಕೂಲಿ ಮಾಡುವ ಪರಿಸ್ಥಿತಿ ಇದೆ. ಈಗ ಆಕೆ ಅನಾಥಳಾಗಿದ್ದಾಳೆ. ಕಲ್ಲಪ್ಪನ ಸಾವಿನ ನಂತರ ಅವರ ಅಪ್ಪನ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದಾರೆ. ಅವರ ಮನೆಯಲ್ಲಿ ಊಟಕ್ಕೂ ಗತಿಯಿಲ್ಲ. ಪರಿಸ್ಥಿತಿಯನ್ನು ನೋಡಿ ಅರ್ಥ ಮಾಡಿಕೊಂಡು ಆ ಕುಟುಂಬಕ್ಕೆ ನೆರವಾಗಬೇಕು ಎಂದು ಸಿದ್ಧರಾಮಯ್ಯನವರಿಗೆ ಮನವಿ ಮಾಡಿದರು.
ನೀವು ಯಾರ ಒತ್ತಡಕ್ಕೂ ಮಣಿಯಬೇಡಿ. ಹಣಕ್ಕಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ಬಲಿ ಕೊಡಬೇಡಿ. ಕೈ ಮುಗಿದು ಕೇಳಿಕೊಳ್ಳುತ್ತೇನೆ. ನಿಮ್ಮ ಹೃದಯ ವೈಶಾಲ್ಯತೆ ಮೆರೆಯಿರಿ ಇಲ್ಲದಿದ್ದರೆ ಜನರ ಕ್ಷಮಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
Comments are closed.