ಕರ್ನಾಟಕ

ಬಲಿಪೂಜೆಗೆ ಮಲ್ಲಯುದ್ಧ-ಗುದ್ದಾಟದ ಕುರುಕ್ಷೇತ್ರ

Pinterest LinkedIn Tumblr

mal

ಬೆಂಗಳೂರು, ಜು. ೧೨- ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಚರ್ಚೆ ವಿಧಾನಸಭೆಯಲ್ಲಿಂದು ಕಾವೇರಿದ ಚರ್ಚೆಗೆ ಗ್ರಾಸವಾದ ನಡುವೆಯೇ ಸಚಿವ ರಮಾನಾಥ ರೈ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ಕೈ ಮಿಲಾಯಿಸುವ ಹಂತ ತಲುಪುವಂತಹ ವಾತಾವರಣ ನಿರ್ಮಾಣವಾಯಿತು.

ಬಿಜೆಪಿಯ ಕೆ.ಜಿ. ಬೋಪಯ್ಯನವರು ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣದ ಚರ್ಚೆಯಲ್ಲಿ ಮಾತನಾಡುತ್ತಿದ್ದಾಗ ಸಚಿವ ರಮಾನಾಥ ರೈ ಕುಳಿತಲ್ಲೆ ಗೊಣಗಿದ್ದು ರಾದ್ದಾಂತಕ್ಕೆ ಕಾರಣವಾಗಿ ಸಚಿವ ರೈ ಮೇಲೆ ಬಿಜೆಪಿ ಸದಸ್ಯರು ಮುಗಿಬಿದ್ದು ಇಡೀ ಸದನದಲ್ಲಿ ರಣಾಂಗಣದ ಪರಿಸ್ಥಿತಿ ನಿರ್ಮಾಣವಾಯಿತು.

ಬಿಜೆಪಿ ಸದಸ್ಯರು ಮುನ್ನುಗ್ಗಿ ರಮಾನಾಥ ರೈ ಅವರ ಬಳಿಗೆ ತೆರಳಿ ಕೈ ಕೈ ಮಿಲಾಯಿಸುವ ಪರಿಸ್ಥಿತಿಗೆ ಬಂದಿದ್ದನ್ನು ಗಮನಿಸಿ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಷಲ್‌ಗಳಿಗೆ ಸೂಚನೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರಾದರೂ ಸದನದಲ್ಲಿ ರಾದ್ದಾಂತ ತಾರಕಕ್ಕೇರಿದ್ದರಿಂದ ಸಭಾಧ್ಯಕ್ಷರು ಸದನವನ್ನು ಕೆಲ ಘಂಟೆ ಮುಂದಕ್ಕೆ ಹಾಕಿದರು.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಸಚಿವ ರೈ ಕುಳಿತಲ್ಲೇ ಗೊಣಗಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿಯ ಬೋಪಯ್ಯ ಅವರು ನೀವು ಕುಳಿತಲ್ಲೆ ಗೊಣಗಬೇಡಿ. ಮೊದಲು ನಮ್ಮ ಜಿಲ್ಲೆಗೆ ನುಗ್ಗಿರುವ ಆನೆಗಳನ್ನು ಓಡಿಸಿ, 16 ಜನಸತ್ತಿದ್ದಾರೆ. ಮೊದಲು ಆ ಕೆಲಸ ಮಾಡಿ ಎಂದು ಹೇಳಿದಾಗ ಎದ್ದುನಿಂತ ರಮಾನಾಥ ರೈ ನಾನು 6 ಬಾರಿ ಸದಸ್ಯನಾಗಿದ್ದೇನೆ. ಸದನ ಯಾವ ರೀತಿ ನಡೆಯುತ್ತದೆ ಎಂಬುದು ನನಗೂ ಗೊತ್ತಿದೆ. ನಿಮ್ಮಿಂದ ಪಾಠ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ಆಗ ತಕ್ಷಣವೇ ಬಿಜೆಪಿಯ ಲಕ್ಷ್ಮಣಸವದಿ, ಗೋಲ್‌ಗುಂಬಸ್ ಸಹ 365 ವರ್ಷಗಳಿಂದ ಇದೆ ಎಂದು ಕಿಚ್ಚಾಯಿಸಿದಾಗ ಸಿಟ್ಟಿಗೆದ್ದ ರಮಾನಾಥ ರೈ, ಸದನದಲ್ಲಿ ಬ್ಲೂ ಫಿಲಂ ನೋಡಿದ್ದೀರಿ, ನಿಮ್ಮ ಯೋಗ್ಯತೆ ಏನೆಂಬುದು ಗೊತ್ತಿದೆ ಎಂದು ಹೇಳಿದ್ದು ಗದ್ದಲಕ್ಕೆ ಕಾರಣವಾಯಿತು. ಬಿಜೆಪಿಯ ಸದಸ್ಯರೆಲ್ಲಾ ಒಮ್ಮೆಗೆ ಎದ್ದುನಿಂತು ರೈ ವಿರುದ್ಧ ಹರಿಹಾಯ್ದು, ಅವರು ತಪ್ಪು ಮಾಡಿದ್ದನ್ನು ಒಪ್ಪಿಕೊಂಡು ರಾಜೀನಾಮೆ ನೀಡಿದರು. ತಾಕತ್ತಿದ್ದರೆ ಜಾರ್ಜ್‌ರವರ ಕೈಯಲ್ಲೂ ರಾಜೀನಾಮೆ ಕೊಡಿಸಿ ಎಂದು ಒತ್ತಾಯಿಸಿದರು.
ಆಗ ಮತ್ತೆ ರಮಾನಾಥ ರೈ ಸಿ.ಟಿ. ರವಿಯವರ ಕಡೆ ಕೈ ತೋರಿಸುತ್ತಾ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪರವರ ಕಥೆ ಗೊತ್ತಿದೆ ಎಂದು ಹೇಳಿದ್ದರಿಂದ ಬಿಜೆಪಿ ಸದಸ್ಯರ ಆಕ್ರೋಶ ಹೆಚ್ಚಾಗಿ, ಅದೇನು ಕಥೆ ಹೇಳಲಿ ಎಂದು ಪಟ್ಟು ಹಿಡಿದರು.
ಡಿವೈಎಸ್ಪಿ ಕಲ್ಲಪ್ಪರವರ ಕಥೆ ಏನೆಂದು ಸಚಿವ ರೈ ರವರಿಗೆ ಗೊತ್ತಿದೆ. ಸತ್ಯ ಹೇಳಲಿ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದು ಸದನದಲ್ಲಿ ಗದ್ದಲವನ್ನು ಮತ್ತಷ್ಟು ಹೆಚ್ಚಿಸಿತು.
ಸದನದ ಗದ್ದಲವನ್ನು ಕಡಿಮೆ ಮಾಡಲು ಮುಖ್ಯಮಂತ್ರಿಗಳು ಸಾಹಸ ಪಟ್ಟರು. ಸಭಾಧ್ಯಕ್ಷ ಕೋಳಿವಾಡ್‌ ಅವರು ಸದನಕ್ಕೆ ಆಗಮಿಸಿದರು. ಈ ಹಂತದಲ್ಲಿ ಮತ್ತೆ ಸಚಿವ ರಮಾನಾಥ ರೈ ಬಿಜೆಪಿ ಸದಸ್ಯರ ಮೇಲೆ ವಾಗ್ದಾಳಿಯನ್ನು ಮುಂದುವರೆಸಿ ಆಸನದಿಂದ ಹೊರ ಬಂದು ಬಿಜೆಪಿ ಸದಸ್ಯರ ಕಡೆಗೆ ನುಗ್ಗಲು ಮುಂದಾದರು.
ಸಚಿವರ ವರ್ತನೆಯಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರೆಲ್ಲರೂ ಒಮ್ಮೆಗೆ ಆಗಮಿಸಿ ರೈ ರವರತ್ತ ಬಿರುಗಾಳಿಯಂತೆ ನುಗ್ಗಿದರು.
ಸಚಿವ ರಮಾನಾಥ ರೈ ರವರ ತಲೆ ಸರಿಯಿಲ್ಲ, ಹುಚ್ಚಾಸ್ಪತ್ರೆಗೆ ಸೇರಿಸಿ ಎಂದು ಬಿಜೆಪಿ ಸದಸ್ಯರು ಕಿಚ್ಚಾಯಿಸಿದರು.
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ರೀ ಮಾರ್ಷಲ್‌ಗಳೆ ಎಲ್ಲಿದ್ದೀರಿ, ಏನು ಮಾಡುತ್ತಿದ್ದೀರಿ, ಅವರನ್ನು ಹೊಡೆಯುವರಂತೆ ನುಗ್ಗುತ್ತಿದ್ದಾರೆ ಎಂದು ಹೇಳಿದ್ದು ಸದನದಲ್ಲಿ ರಣರಂಗದ ಪರಿಸ್ಥಿತಿ ನಿರ್ಮಾಣವಾಗಿದ್ದಕ್ಕೆ ಕೈಗನ್ನಡಿಯಂತಾಯಿತು.
ತಕ್ಷಣವೇ ಬಿಜೆಪಿ ಸದಸ್ಯರು ರೈರವರ ಆಸನದತ್ತ ನುಗ್ಗಿದ್ದನ್ನು ಗಮಮಿಸಿದ ಸಚಿವ ಹೆಚ್.ಕೆ. ಪಾಟೀಲ್, ಬಿಜೆಪಿ ಸದಸ್ಯರನ್ನು ಸಮಾಧಾನಪಡಿಸಿ ರೈರವರ ಸುತ್ತ ನಿಂತರು. ಆಗ ಕಾಂಗ್ರೆಸ್ ಸದಸ್ಯರು ರೈ ರವರ ಸುತ್ತ ರಕ್ಷಣಾ ಕೋಟೆ ನಿರ್ಮಿಸಿದರು.
ಮಾರ್ಷೆಲ್‌ಗಳು ಒಳ ಬಂದು ಬಿಜೆಪಿ ಸದಸ್ಯರನ್ನು ರೈ ರವರಿಂದ ದೂರ ಸರಿಸುವಲ್ಲಿ ಯಶಸ್ವಿಯಾದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಜಗದೀಶ್‌ಶೆಟ್ಟರ್, ಸಚಿವರು ಗೂಂಡಾಗಿರಿ ತೋರಿಸುತ್ತಿದ್ದಾರೆ. ಅವರು ಕ್ಷಮೆ ಕೇಳಬೇಕು, ಏನಿದು ವರ್ತನೆ ಎಂದು ಆಕ್ಷೇಪಿಸಿದರು.
ಸಚಿವ ರಮಾನಾಥರೈ ರವರು ಕ್ಷಮೆ ಕೇಳುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗ ತೊಡಗಿದರು.
ತಕ್ಷಣವೇ ಸಭಾಧ್ಯಕ್ಷ ಕೋಳಿವಾಡ್‌ರವರು ಸದನವನ್ನು ಕೆಲ ಗಂಟೆಗಳ ಕಾಲ ಮುಂದೂಡಿದರು.
ಸಭಾಧ್ಯಕ್ಷರು ಸದನವನ್ನು ಮುಂದೂಡಿ ಹೊರ ನಡೆದರೂ ಬಿಜೆಪಿ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರೆಸಿದರು.
ಕಾಂಗ್ರೆಸ್ ಸದಸ್ಯರು ರೈ ರವರ ಸುತ್ತ ನಿಂತೇ ಇದ್ದರು. ಬಿಜೆಪಿ ಸದಸ್ಯರು ಸದನದಿಂದ ಹೊರ ಹೋದ ಮೇಲೆ ಸಚಿವ ರೈ ಸಹ ತಮ್ಮ ಆಸನದಿಂದ ಎದ್ದು ಹೊರ ನಡೆದರು.

Comments are closed.