ಕರ್ನಾಟಕ

ಬಿಬಿಎಂಪಿಯಿಂದ “ಮೊಬೈಲ್‌ ಆಸ್ಪತ್ರೆ’ ಪ್ರಾರಂಭ

Pinterest LinkedIn Tumblr

bbmpಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ಪತ್ರೆಗಳಿಲ್ಲದ ಪ್ರದೇಶಗಳಿಗೂ ವೈದ್ಯಕೀಯ ಸೌಲಭ್ಯ ಮುಟ್ಟಿಸುವ ಸಲುವಾಗಿ ಬಿಬಿಎಂಪಿಯು ಸಂಚಾರಿ ಆರೋಗ್ಯ ಘಟಕದ ಸೇವೆ ಪ್ರಾರಂಭಿಸಿದ್ದು, ಆರು ಸಂಚಾರಿ ವಾಹನಗಳ ಸೇವೆಗೆ ಮೇಯರ್‌ ಮಂಜುನಾಥರೆಡ್ಡಿ ಶುಕ್ರವಾರ ಚಾಲನೆ
ನೀಡಿದ್ದಾರೆ.

ಪ್ರತಿ ಸಂಚಾರಿ ವೈದ್ಯಕೀಯ ಘಟಕದಲ್ಲಿ (ಮೊಬೈಲ್‌ ಆಸ್ಪತ್ರೆ) ನುರಿತ ಎಂಬಿಬಿಎಸ್‌ ಪದವೀಧರ ವೈದ್ಯರು, ಇಬ್ಬರುಶುಶ್ರೂಷಕಿಯರು, ಒಬ್ಬರು ಫಾರ್ಮಸಿಸ್ಟ್‌, ಚಾಲಕ ಹಾಗೂ ನಾಲ್ಕನೇ ಹಂತದ ಒಬ್ಬ ನೌಕರರು ಇರುತ್ತಾರೆ. ಇವರೆಲ್ಲಾ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸಾ ಕಾರ್ಯವನ್ನು ನೀಡುತ್ತಾರೆ. ಜತೆಗೆ ಔಷಧಗಳನ್ನೂ ವಿತರಿಸುತ್ತಾರೆ ಎಂದು ಮೇಯರ್‌ ಮಂಜುನಾಥರೆಡ್ಡಿ ಹೇಳಿದ್ದಾರೆ.

ವಾಹನಗಳಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಪಾಲಿಕೆ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲ. ಕೊಳಗೇರಿ ಭಾಗದ ಬಹುತೇಕ ಮಂದಿ ಸರ್ಕಾರಿ ಆರೋಗ್ಯ ಸೇವೆಯನ್ನೇ ನೆಚ್ಚಿಕೊಂಡಿರುತ್ತಾರೆ. ಉಚಿತ ಹಾಗೂ ಕಡಿಮೆ ದರದ ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆ ಅಡಿ ಆರೋಗ್ಯ ಸೇವಾ ಸೌಲಭ್ಯ ವಂಚಿತ ಪ್ರದೇಶಗಳ ಮನೆ ಬಾಗಿಲಿಗೆ ಸಂಚಾರಿ ಆರೋಗ್ಯ ಘಟಕದ ಮೂಲಕ ಆರೋಗ್ಯ ಸೇವೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ವಲಯಕ್ಕೆ ಎರಡು ವಾಹನ: ಪೂರ್ವ ವಲಯ, ಪಶ್ಚಿಮ ವಲಯ ಹಾಗೂ ದಕ್ಷಿಣ ವಲಯಗಳಿಗೆ ತಲಾ ಎರಡು ಸಂಚಾರಿ ವಾಹನಗಳನ್ನು
ನಿಯೋಜನೆ ಮಾಡಲಾಗಿದೆ. ಈ ವಾಹನಗಳು ಈಗಾಗಲೇ ಗುರುತಿಸಿರುವ ವೈದ್ಯಕೀಯ ಸೌಲಭ್ಯ, ಪಾಲಿಕೆ ಹಾಗೂ ಸರ್ಕಾರಿ ಆರೋಗ್ಯ
ಕೇಂದ್ರಗಳಿಲ್ಲದ ಪ್ರದೇಶಗಳಲ್ಲಿ ಸಂಚರಿಸಲಿವೆ. ಈ ವೇಳೆ ಕಡುಬಡವರು, ಪೌರಕಾರ್ಮಿಕರು, ರಿಕ್ಷಾ ಚಾಲಕರು, ದಿನಗೂಲಿ ಕಾರ್ಮಿಕರು,
ಕೊಳಚೆ ಪ್ರದೇಶದ ನಿವಾಸಿಗಳಂತಹ ಬಡವರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡುತ್ತದೆ ಎಂದರು.

ಈ ವೇಳೆ ಉಪ ಮೇಯರ್‌ ಎಸ್‌.ಪಿ. ಹೇಮಲತಾ, ಆಡಳಿತಪಕ್ಷದ ನಾಯಕ ಆರ್‌. ಎಸ್‌. ಸತ್ಯನಾರಾಯಣ, ವಿರೋಧಪಕ್ಷದ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್‌ ನಾಯಕ ಎಂ. ಆನಂದ ಹಾಜರಿದ್ದರು.
-ಉದಯವಾಣಿ

Comments are closed.