ಬೆಂಗಳೂರು: ಪ್ರತಿ ಮಳೆಗಾಲದಲ್ಲಿ ಕಾಡುವ ಡೆಂಘಿ, ಚಿಕೂನ್‌ಗುನ್ಯಾದಂತಹ ಸಮಸ್ಯೆಯ ಜತೆಗೆ ಮಾರಕ ವೈರಾಣು ಸೋಂಕು “ಜಪಾನೀಸ್
ಎನ್ಸೆಫಾಲಿಟಿಸ್’ ಸದ್ದಿಲ್ಲದೆ ನಗರಕ್ಕೆ ಕಾಲಿಟ್ಟಿದ್ದು, ವ್ಯಾಪಕವಾಗಿ ಹರಡಲಾರಂಭಿಸಿದೆ.
ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕು ಕಳೆದು ತಿಂಗಳು ನಗರದಲ್ಲಿ ಇಬ್ಬರು ಮಕ್ಕಳನ್ನು ಬಲಿ ಪಡೆದಿದೆ. ನಗರದಲ್ಲಿ ಸುರಿದ ಮುಂಗಾರು
ಮಳೆಯಿಂದಾಗಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ದೊಡ್ಡವರಿಗೂ ಹರಡುವ ಈ ಸೋಂಕು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ.
ಈ ಬಾರಿ 2-5 ವರ್ಷದವರೆಗಿನ ಮಕ್ಕಳಿಗೆ ಹೆಚ್ಚಾಗಿ ಹರಡುತ್ತಿರುವುದು ಬೆಳಕಿಗೆ ಬಂದಿದೆ.
ಡೆಂಘಿ, ಚಿಕೂನ್‌ಗುನ್ಯಾ ಕಾಯಿಲೆ ಹೆಚ್ಚುತ್ತಿರುವುದರಿಂದ ಕಂಗಾಲಾಗಿರುವ ನಗರದ ಜನತೆಗೆ ಜಪಾನೀಸ್ ಎನ್ಸೆಫಾಲಿಟಿಸ್ ಮತ್ತಷ್ಟು ಆತಂಕವನ್ನುಂಟು ಮಾಡಿದೆ. ಡೆಂಘಿ, ಚಿಕೂನ್‌ಗುನ್ಯಾ ಕಾಯಿಲೆ ನಿವಾರಣೆಗೆ ಹೆಚ್ಚಿನ ಗಮನಹರಿಸುವ ಆರೋಗ್ಯ ಇಲಾಖೆ ಮತ್ತು
ಬಿಬಿಎಂಪಿ ಜಪಾನೀಸ್ ಎನ್ಸೆಫಾಲಿಟಿಸ್ ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವ ಯಾವುದೇ ಉದಾಹರಣೆಗಳಿಲ್ಲ ಎಂದು ಆರೋಗ್ಯ ಇಲಾಖೆಯ
ಮೂಲಗಳು ಸ್ಪಷ್ಟಪಡಿಸಿವೆ.
ವಾಣಿವಿಲಾಸ್ ಆಸ್ಪತ್ರೆಯಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕಿನಿಂದಾಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಸೋಂಕಿತ ಹಲವು ಮಕ್ಕಳು ಆಗಮಿಸಿ
ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿರಾಗಾಂಧಿ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಈ ಸೋಂಕು ಹರಡಿರುವ ಮಕ್ಕಳು ಚಿಕಿತ್ಸೆಗೊಳಗಾಗಿಲ್ಲ ಎಂದು ಆಸ್ಪತ್ರೆಯ
ನಿರ್ದೇಶಕಿ ಡಾ. ಆಶಾ ಬೆನ್ನಕಪ್ಪ ಸ್ಪಷ್ಟಪಡಿಸಿದ್ದಾರೆ. ಆದರೆ, ಆಸ್ಪತ್ರೆಯ ಮೂಲಗಳ ಪ್ರಕಾರ ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕು ಮೆದುಳಿಗೆ ಸಂಬಂಧಿಸಿದ ಜ್ವರ ಆಗಿರುವ ಕಾರಣ ಶಂಕಿತ ಸೋಂಕು ಇರುವ ಮಕ್ಕಳ ಮೆದುಳಿನಲ್ಲಿನ ನೀರಿನಾಂಶದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯ ಬಳಿ ಇರುವ ವೈರಾಲಜಿ ಪ್ರಯೋಗಾಲಯದಲ್ಲಿ ಇವುಗಳ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಯೋಗಾಲಯದಿಂದ ವರದಿ ಬಂದ ಬಳಿಕ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ
ಎಂದು ಹೇಳಲಾಗಿದೆ.
ಸೋಂಕು ಹರಡಲು ಕಾರಣ: ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕು ಹರಡಲು ಪ್ರಮುಖ ಕಾರಣ ವೈಜ್ಞಾನಿಕವಾಗಿ ಹಂದಿ ಸಾಕಾಣಿಕೆ
ಮಾಡದಿರುವುದು. ನಗರದ ಅಳ್ಳಾಲಸಂದ್ರ, ಟ್ಯಾನರಿ ರಸ್ತೆ, ಬೇಗೂರು ಸೇರಿದಂತೆ ನಗರದ ಹಲವೆಡೆ ಅವೈಜ್ಞಾನಿಕವಾಗಿ ಹಂದಿಗಳನ್ನು ಬಿಡಲಾಗಿದೆ.
ವಾಸಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ತಿರುಗುವ ಹಂದಿಗಳ ನಿಯಂತ್ರಣ ಮಾಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ವಿಫಲವಾಗಿದ್ದಾರೆ.
ಬೆಂಗಳೂರು ಪಟ್ಟಿಯಲ್ಲಿಲ್ಲ: ರಾಯಚೂರು, ದಾವಣಗೆರೆ, ಮಂಡ್ಯ ಸೇರಿದಂತೆ ಹಂದಿಗಳು ಹೆಚ್ಚಾಗಿ ಇರುವ ಹಲವು ಜಿಲ್ಲೆಗಳನ್ನು ಆರೋಗ್ಯ
ಇಲಾಖೆಗೆ ಎಂಡಾಮಿಕ್ ಎಂದು ಪರಿಗಣಿಸಿದೆ. ಆದರೆ, ಬೆಂಗಳೂರನ್ನು ಎಂಡಾಮಿಕ್ ಎಂದು ಪರಿಗಣಿಸಿಲ್ಲ. ಹೀಗಾಗಿ ಬೀದಿಬದಿಯಲ್ಲಿನ
ಹಂದಿಗಳ ನಿಯಂತ್ರಣಕ್ಕಾಗಿ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಸೊಳ್ಳೆಗಳು ಹಂದಿಗೆ ಕಡಿಯದಂತೆ ಸೊಳ್ಳೆಪರದೆ ಹಾಕಿ ಹಂದಿ ಸಾಕಾಣಿಕೆ
ಮಾಡಬೇಕು. ಆದರೆ, ಅಂತಹ ಕಾರ್ಯಗಳನ್ನು ಯಾರು ಮಾಡುತ್ತಿಲ್ಲ. ವೈಜ್ಞಾನಿಕವಾಗಿ ಹಂದಿ ಸಾಕಾಣಿಕೆ ಮಾಡುವ ಫಾರಂಗಳು
ನಗರದ ಹೊರವಲಯದಲ್ಲಿದ್ದು, ಅವು ಸಹ ಬೆರಳೆಣಿಕೆಯಲ್ಲಿವೆ ಎಂದು ಹಿರಿಯ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಗೋರಕ್‌ಪುರದಲ್ಲಿ 50000 ಮಕ್ಕಳು ಸಾವು!
“ಜಪಾನೀಸ್ ಎನ್ಸ್‌ಫಾಲಿಟಿಸ್’ಕ್ಕೆ ಅತಿಹೆಚ್ಚು ತುತ್ತಾಗಿರುವುದು ಉತ್ತರ ಪ್ರದೇಶದ ಗೋರಕ್‌ಪುರ ಪ್ರದೇಶ. ನಾಲ್ಕು ದಶಕದಲ್ಲಿ 50 ಸಾವಿರ ಮಕ್ಕಳು ಸಾವನ್ನಪ್ಪಿದ್ದಾರೆ. 2014ರಲ್ಲೇ 440 ಮಕ್ಕಳು ಸಾವನ್ನಪ್ಪಿದ್ದರಿಂದ ಎಚ್ಚೆತ್ತ ಕೇಂದ್ರ ಸರ್ಕಾರ 4 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿತ್ತು. ಬಳಿಕ ಅಲ್ಲಿನ ಪರಿಸ್ಥಿತಿ ಸುಧಾರಿಸಿದ್ದು ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಏನಿದು ಸೋಂಕು?
“ಜಪಾನೀಸ್ ಎನ್ಸ್‌ಫಾಲಿಟಿಸ್’ ಎಂಬ ರೋಗಾಣುವಿನಿಂದ ಮೆದುಳು ಜ್ವರದ ಸೋಂಕು ತಗುಲುತ್ತದೆ. ಕೊಲೆಕ್ಸ್ ಎಂಬ ಸೊಳ್ಳೆಯಿಂದ
ಈ ಸೋಂಕು ಹರಡುತ್ತದೆ. ಹಂದಿಗಳಿಗೆ ಕಚ್ಚಿದ ಕೊಲೆಕ್ಸ್ ಎಂಬ ಸೊಳ್ಳೆಯು ಮನುಷ್ಯರಿಗೆ ಕಚ್ಚಿದರೆ ಈ ಸೋಂಕು ಹರಡಲಿದೆ. ಡೆಂಘಿ,
ಚಿಕೂನ್‌ಗುನ್ಯಾಕ್ಕಿಂತಲೂ ಇದು ಭೀಕರ ಸಮಸ್ಯೆ ಎನ್ನುತ್ತಾರೆ ಆರೋಗ್ಯ ಇಲಾಖೆ ತಜ್ಞರು. ತೀವ್ರತರ ಮೆದುಳು ಜ್ವರ ಆಗಮಿಸಿದರೆ ಇದಕ್ಕೆ
ಗುಣಮಟ್ಟದ ಚಿಕಿತ್ಸೆಯನ್ನು ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದರೆ, ಲಸಿಕೆ ನೀಡುವ ಮೂಲಕ ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತದೆ.
ಮನುಷ್ಯರು ವಾಸಿಸುವ ಐದು ಕಿ.ಮೀ.ದೂರ ಹಂದಿಗಳನ್ನು ಇಡಬೇಕು. ಇಲ್ಲದಿದ್ದರೆ ಸೋಂಕು ಹರಡುವುದು ಖಚಿತ. 100 ಮಂದಿಗೆ ಈ
ಸೋಂಕು ಹರಡಿದರೆ 30 ಮಂದಿ ಸಾವು ಖಚಿತ. ಶೇ.30ರಿಂದ 50ರವರೆಗೆ ಶಾಶ್ವತ ಅಂಗವೈಕಲ್ಯಗೆ ತುತ್ತಾಗುತ್ತಾರೆ.
-ಉದಯವಾಣಿ
Comments are closed.