ಬೆಂಗಳೂರು: ಲಗ್ಗೆರೆ ವಾರ್ಡ್ ಜೆಡಿಎಸ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಹಾಗೂ ಬಿಬಿಎಂಪಿ ನಾಮನಿರ್ದೇಶಿತ ಸದಸ್ಯ ಸಿದ್ದೇಗೌಡ ಅವರು ನಡುರಸ್ತೆಯಲ್ಲೇ ಪರಸ್ಪರ ಅವಾಚ್ಯ ಶಬ್ದಗಳ ನಿಂದಿಸಿಕೊಂಡು ಕೈ-ಕೈ ಮಿಲಾಯಿಸುವಂತಕ್ಕೆ ತಲುಪಿದ್ದ ಘಟನೆ ಬುಧವಾರ ನಡೆದಿದೆ.
ಈವರೆಗೂ ಇಬ್ಬರ ನಡುವೆ ಇದ್ದ ಮುಸುಕಿನ ಗುದ್ದಾಟವು ಬುಧವಾರ ಲಗ್ಗೆರೆ ವಾರ್ಡ್‌ನ ಕೆಂಪೇಗೌಡ ದ್ವಾರದ ಬಳಿ ನಡೆಯುತ್ತಿದ್ದ ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಬೀದಿ ರಂಪಾಟವಾಗಿ ಮಾರ್ಪಟ್ಟಿದೆ. ಪರಿಣಾಮ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿಗರ ನಡುವೆ ಮಾತಿನ ಚಕಮಕಿ
ಏರ್ಪಟಿದ್ದು ಪರಿಸ್ಥಿತಿ ವಿಕೋಪದ ಹಂತಕ್ಕೆ ತಿರುಗುವ ವೇಳೆಗೆ ಪೊಲೀಸರು ಬಂದು ನಿಯಂತ್ರಿಸಿದ್ದಾರೆ.
ನಡೆದಿದ್ದೇನು?: ಲಗ್ಗೆರೆ ವಾಡ್ ìನಿಂದ ಚುನಾಯಿತರಾದ ಜೆಡಿಎಸ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಬುಧವಾರ ತಮ್ಮ ಬೆಂಬಲಿಗರೊಂದಿಗೆ
ಕೆಂಪೇಗೌಡ ದ್ವಾರದ ಬಳಿ ನಡೆಯುತ್ತಿದ್ದ ರಸ್ತೆ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಅಲ್ಲೇ ಇದ್ದಂತಹ ಕಾಂಗ್ರೆಸ್‌ನ ನಾಮನಿರ್ದೇಶಿತ ಸದಸ್ಯ ಸಿದ್ದೇಗೌಡ ಹಾಗೂ ಅವರ ಬೆಂಬಲಿಗರು ಎನ್ನಲಾದ 20 ಜನರ ಗುಂಪು ಮಂಜುಳಾ ಹಾಗೂ ಆಕೆಯ ಪತಿಯನ್ನು ಅವಾಚ್ಯ ಶಬ್ದಗಳಿಂದ
ನಿಂದಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸದಸ್ಯೆ ಬೆಂಬಲಿಗರೂ ನಿಂದಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಲು ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಂಧಾನದ ಬಳಿಕವೂ ವಾಗ್ವಾದ:
ಬಳಿಕ ಮಂಜುಳಾ ನಾರಾಯಣಸ್ವಾಮಿ ಅವರು, ಸಿದ್ದೇಗೌಡ ವಿರುದ್ಧ ರಾಜಗೋಪಾಲನಗರ ಠಾಣೆಯಲ್ಲಿ ದೂರು ನೀಡಲು ತೆರಳಿದ್ದು, ಅದೇ ವೇಳೆ ಪ್ರತಿ ದೂರು ನೀಡಲು ಸಿದ್ದೇಗೌಡ ಠಾಣೆಗೆ ಬಂದಿದ್ದಾರೆ. ಠಾಣೆಯಲ್ಲಿದ್ದ ಇನ್‌ಪೆಕ್ಟರ್ ಇಬ್ಬರ ನಡುವೆ ಸಂಧಾನ ಮಾಡಿ ವಾಪಸು ಕಳುಹಿಸಿದ್ದಾರೆ. ಅಷ್ಟಾದರೂ ಠಾಣೆಯಿಂದ ಹೊರಬರುತ್ತಿದ್ದಂತೆ ಇಬ್ಬರ ನಡುವೆ ಮತ್ತೆ ಜಗಳ ಶುರುವಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು
ಬೆಂಬಲಿಗರ ಗುಂಪು ಚದುರಿಸಿ ಇಬ್ಬರನ್ನೂ ವಾಪಸು ಕಳುಹಿಸಿದ್ದಾರೆ.
ಆರೋಪ-ಪ್ರತ್ಯಾರೋಪ: ಬೀದಿ ಜಗಳ ಕುರಿತು ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರಿಬ್ಬರೂ ಪ್ರತ್ಯೇಕ ಆರೋಪಗಳನ್ನು ಮಾಡಿದ್ದಾರೆ.
ಮಂಜುಳಾ ನಾರಾಯಣಸ್ವಾಮಿ ಹೇಳುವ ಪ್ರಕಾರ, ತಾವು ಕಾಮಗಾರಿ ಪರಿಶೀಲನೆ ತೆರಳಿದಾಗ ಸಿದ್ದೇಗೌಡ ಬೆಂಬಲಿಗರು ತಮ್ಮನ್ನು ನಿಂದಿಸಿದರು.
ಮಹಿಳೆ ಎಂಬುದನ್ನು ನೋಡದೆ ಬೇಕಾಬಿಟ್ಟಿಯಾಗಿ ಮಾತನಾಡಿದರು. ಈ ರೀತಿಯ ಪರಿಸ್ಥಿತಿ ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ
ಸಿದ್ದೇಗೌಡ ಪ್ರತಿ ಕಾಮಗಾರಿಯಲ್ಲೂ ಮೂಗು ತೂರಿಸುತ್ತಿದ್ದು, ನಾಮ ನಿರ್ದೇಶಿತರಾಗಿದ್ದರೂ ತಾವೇ ಚುನಾಯಿತ ಸದಸ್ಯರೆಂದು ಸಾರ್ವಜನಿಕರಲ್ಲಿ
ಹೇಳುತ್ತಿದ್ದಾರೆ ಎಂದು ದೂರಿದರು.
ಮಂಜುಳಾ ನಾರಾಯಣಸ್ವಾಮಿ ಅವರ ಆರೋಪ ತಳ್ಳಿ ಹಾಕಿರುವ ನಾಮನಿರ್ದೇಶಿತ ಸದಸ್ಯ ಸಿದ್ದೇಗೌಡ, ರಂಗೇಗೌಡ ಎಂಬ ಅಧಿಕಾರಿಯೊಂದಿಗೆ
ನಾನು ಕಾಮಗಾರಿ ವೀಕ್ಷಣೆಗೆ ತೆರಳಿದ್ದಾಗ ಮಂಜುಳಾ ನಾರಾಯಣಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನನ್ನ ಕಾರ್ಯಕ್ಕೆ ಅಡ್ಡಿಪಡಿಸಿದರು. ಜತೆಗೆ ಮಂಜುಳಾ ಬೆಂಬಲಿಗರಾದ ಅನುಸೂ ಯಮ್ಮ ಮತ್ತು ಗಾಯತ್ರಮ್ಮ ಎಂಬುವರು ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಕಿತ್ತಾಟ ಇದೇ ಮೊದಲಲ್ಲ
ಲಗ್ಗೆರೆ ವಾರ್ಡ್‌ನಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಕಿತ್ತಾಟಗಳು ನಡೆಯುತ್ತಿದ್ದವು. ಪಾಲಿಕೆ ಸಭೆಯಲ್ಲಿ ಮಂಜುಳಾ ನಾರಾಯಣಸ್ವಾಮಿ ಹಲವು ಬಾರಿ ಸ್ಥಳೀಯ ಶಾಸಕ ಮುನಿರತ್ನ ಬೆಂಬಲಿಗರು ಕಾಮಗಾರಿ ನಡೆಸಲು ಬಿಡುತ್ತಿಲ್ಲ ಎಂದು
ಬಹಿರಂಗವಾಗಿಯೇ ಆರೋಪಿಸಿದ್ದರು. ಇದೀಗ ಆರೋಪಗಳು ಹಾದಿ ರಂಪಾಟಕ್ಕೆ ಕಾರಣವಾಗಿದೆ.
-ಉದಯವಾಣಿ
Comments are closed.