ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸದಾ ಮಾತಿನ ಜಗಳ ನಡೆಸುತ್ತಲೇ ಇರುವ ಅರವಿಂದ ಕೇಜ್ರಿವಾಲ್ ನೇತೃತ್ವದ ದಿಲ್ಲಿಯ ಆಮ್ ಆದ್ಮಿ ಸರಕಾರ ಇದೀಗ ಕೇಂದ್ರ ಸರಕಾರದ ವಿರುದ್ಧ ಫುಲ್ ಪೇಜ್ ಪತ್ರಿಕಾ ಜಾಹೀರಾತು ಸಮರವನ್ನು ಆರಂಭಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡುತ್ತಿದೆ ಎಂದು ದೂರಿ ಕೇಜ್ರಿವಾಲ್ ಸರಕಾರ ಪ್ರಮುಖ ದಿನಪತ್ರಿಕೆಗಳಲ್ಲಿ ಪೂರ್ಣ ಪುಟದ ಜಾಹೀರಾತು ನೀಡಿದೆ.
ಕೇಂದ್ರ ಸರಕಾರ ದಿಲ್ಲಿ ಸರಕಾರದೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಮುಖ್ಯ ಇಲಾಖೆಗಳ ಹಿರಿಯ ಪ್ರಭಾರಾಧಿಕಾರಿಗಳನ್ನು ದಿಢೀರನೆ ಬೇರೆಡೆಗೆ ವರ್ಗಾಯಿಸಿದೆ ಎಂದು ಜಾಹೀರುಪಡಿಸುವ ದಿಲ್ಲಿ ಸರಕಾರದ ಪೂರ್ತಿ ಪುಟದ ಜಾಹೀರಾತು ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಫೋಟೋದೊಂದಿಗೆ ಪ್ರಕಟಗೊಂಡಿದೆ.
‘ದಿಲ್ಲಿಯ ಜನರು ಯಾಕಾಗಿ ಕಷ್ಟಪಡಬೇಕು?’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಗೊಂಡಿರುವ ಜಾಹೀರಾತಿನಲ್ಲಿ, “ದಿಲ್ಲಿಯಲ್ಲಿನ ಶಾಲೆಗಳ ಆಧುನೀಕರಣ, ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ರಸ್ತೆ ಅಭಿವೃದ್ಧಿ, ಅನಧಿಕೃತ ಕಾಲನಿಗಳಲ್ಲಿ ಚರಂಡಿ ನಿರ್ಮಾಣ ಮುಂತಾಗಿ ಹಲವಾರು ಬಗೆಯ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರಕಾರ ತಡೆಯೊಡ್ಡುತ್ತಿದೆ’ ಎಂದು ದೂರಲಾಗಿದೆ.
ದಿಲ್ಲಿ,ಅಂಡಮಾನ್ ನಿಕೋಬಾರ್ ದ್ವೀಪ ಪೌರ ಸೇವೆಯಡಿ (ಡ್ಯಾನಿಕ್ಸ್) ದಿಲ್ಲಿಗೆ 309 ಹುದ್ದೆಗಳಿಗೆ ಮಂಜೂರಾತಿ ಇದೆ; ಆದರೆ ಕೇಂದ್ರ ಸರಕಾರ ಕೇವಲ 165 ಅಧಿಕಾರಿಗಳನ್ನು ಮಾತ್ರವೇ ಒದಗಿಸಿದೆ ಎಂದು ಜಾಹೀರಾತಿನಲ್ಲಿ ದೂರಲಾಗಿದೆ.
-ಉದಯವಾಣಿ
Comments are closed.